Skip to main content

ಗುರು ಮಿಥುನ ರಾಶಿ ಗೋಚಾರ

ಎಲ್ಲ ಗ್ರಹಗಳಲ್ಲಿ ಗುರುಗ್ರಹವು ನೈಸರ್ಗಿಕವಾಗಿ ಹೆಚ್ಚು ಶುಭ ಎಂದು ಹೇಳಲಾಗಿದೆ. ಸಂಪತ್ತು, ಧನಪ್ರಾಪ್ತಿ, ಒಳ್ಳೆಯ ಸ್ಥಾನಮಾನ, ಕೌಟುಂಬಿಕ ಸುಖ ಶಾಂತಿ, ವಿವಾಹ ಯೋಗ, ಸಂತಾನ ಸುಖ, ಆರೋಗ್ಯ ಭಾಗ್ಯ, ಬುದ್ಧಿಶಕ್ತಿಗಳ ಕಾರಕನಾದ ಗುರುವು ತನ್ನ ಪ್ರತಿವಾರ್ಷಿಕ ಗೋಚಾರದಿಂದ ದ್ವಾದಶ ರಾಶಿಗಳ ಮೇಲೆ ಗುರುತರವಾದ ಪ್ರಭಾವವನ್ನು ಬೀರುತ್ತಾನೆ. ದೇವಗುರುವು ಪ್ರತಿ ವರ್ಷ ಒಂದು ರಾಶಿಯಂತೆ ಹನ್ನೆರಡು ವರ್ಷಕಾಲದಲ್ಲಿ ಸಂಪೂರ್ಣ ರಾಶಿಚಕ್ರವನ್ನು ಒಂದು ಬಾರಿ ಸುತ್ತುತ್ತಾನೆ. ಈ ಹನ್ನೆರಡು ವರ್ಷಗಳ ಕಾಲವನ್ನು ಬಾರ್ಹಸ್ಪತ್ಯ ಸಂವತ್ಸರಚಕ್ರವೆಂದು ಕರೆಯಲಾಗುತ್ತದೆ. ಪ್ರಾಚೀನ ವೈದಿಕ ಕಾಲದಲ್ಲಿ ಈ ಕಾಲಮಾನಕ್ಕೆ ಬಹಳ ಮಹತ್ವವಿತ್ತು. ಗುರು ಗ್ರಹದಿನಾಂಕ 31 ಮೇ 2013 ರಂದು ಬೆಳಿಗ್ಗೆ 6 – 48ಕ್ಕೆ ಗುರುವು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಮಿಥುನವು ಭುಧನ ಆಧಿಪತ್ಯ ಹೊಂದಿದ ರಾಶಿಯಾಗಿದ್ದು ಗುರುವಿನ ಶತ್ರುಗ್ರಹದ ರಾಶಿಯಾಗಿರುತ್ತದೆ. ಆದರೂ ಮಿಥುನದಲ್ಲಿ ಗುರು ಸಂಚಾರ ವೃಷಭದ ಗುರುಚಾರಕ್ಕಿಂತಲೂ ಅನೇಕ ಪಟ್ಟು ಒಳ್ಳೆಯ ಫಲಗಳನ್ನು ಕೊಡುತ್ತದೆ. ವೃಷಭವು ದೇವಗುರುವಿನ ಪರಮ ಶತ್ರುವಾದ ದೈತ್ಯಗುರು ಶುಕ್ರನ ರಾಶಿಯಾಗಿರುವುದೇ ಇದಕ್ಕೆ ಕಾರಣ. ಮಿಥುನದಲ್ಲಿ ಗುರು ಗೋಚಾರ ಅನುಕುಲಕಾರಿಯಾಗಿರುತ್ತದೆ. ಮಿಥುನದಲ್ಲಿ ಗುರುವು 2014 ಜುಲೈ 19 ರ ವರೆಗೆ ಸ್ಥಿತನಾಗಿರುತ್ತಾನೆ. ಮುಂದೆ ತನ್ನ ಉಚ್ಚ ರಾಶಿಯಾದ ಕರ್ಕಕ್ಕೆ ಪ್ರವೇಶಮಾಡುತ್ತಾನೆ. ಮಿಥುನದಲ್ಲಿ ಗುರುವಿನಿಂದ ಹನ್ನೆರಡು ರಾಶಿಗಳ ಮೇಲಾಗುವ ಗೋಚಾರ ಫಲಗಳನ್ನು ಈಗ ನೋಡೋಣ. ಬ್ರಹಸ್ಪತಿಯು ಜನ್ಮರಾಶಿಯಿಂದ 2-5-7-9-11 ನೇಯವನಾಗಿ ಸಂಚಾರ ಮಾಡುತ್ತಿರುವಾಗ ಶುಭನಾಗಿರುತ್ತಾನೆ. ಮಿಥುನ ಗುರುವಿಗೆ ಈ ರಾಶಿಗಳು ಕ್ರಮವಾಗಿ ವೃಷಭ-ಕುಂಭ-ಧನು-ತುಲಾ-ಸಿಂಹರಾಶಿಗಳಾಗಿವೆ. ಈ ರಾಶಿಯವರಿಗೆ ಶುಭಫಲ. ಇದೇ ರೀತಿ ಜನ್ಮರಾಶಿಯಿಂದ 4-6-8-12 ನೇಯವನಾಗಿ ಗುರುಗೋಚಾರವಾಗಲು ಅಶುಭ ಫಲವನ್ನು ಕೊಡುತ್ತಾನೆ. ಪ್ರಸಕ್ತ ಈ ರಾಶಿಗಳು ಕ್ರಮವಾಗಿ ಮೀನ-ಮಕರ-ವೃಶ್ಚಿಕ-ಕರ್ಕರಾಶಿಗಳಾಗಿವೆ, ಈ ರಾಶಿಗಳಿಗೆ ಅಶುಭ ಫಲ. ಉಳಿದ ರಾಶಿಗಳಾದ ಮೇಷ-ಮಿಥುನ-ಕನ್ಯಾರಾಶಿಗಳಿಗೆ ಶುಭಾಶುಭ ಮಿಶ್ರಫಲ. ಈ ಗುರು ಗೋಚರದ ಮುಖ್ಯ ಶುಭ ಫಲಾನುಭವಿಗಳು ವೃಷಭ, ಸಿಂಹ ಮತ್ತು ಧನು ರಾಶಿಯವರು ಎಂದು ಹೇಳಬಹುದು. ಮೇಷ – ಮೇಷ ರಾಶಿಯಲ್ಲಿ ಗುರು ಮೂರನೇಯವನಾಗಿ ಗೋಚಾರಮಾಡುತ್ತಿದ್ದಾನೆ. ಮಧ್ಯಮ ಶುಭಾಶುಭ ಫಲಗಳು. ಮುಖ್ಯವಾಗಿ ವರ್ಷಪೂರ್ತಿ ಸಂಚಾರ ಪ್ರವಾಸ ಯೋಗ, ಇದರಿಂದ ಆರ್ಥಿಕ ಅನುಕೂಲತೆ ಹೊಸ ಯೋಜನೆಗಳ ಸಂಧಿ ಸಹ ಇರುತ್ತದೆ. ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿ ವಾತಾವರಣ, ಸಹೋದ್ಯೋಗಿಗಳಿಂದ ಸಹಾಯ, ಸಾರ್ವಜನಿಕ ವಲಯಗಳಲ್ಲಿ ಸಮ್ಮಾನ, ತೀರ್ಥಯಾತ್ರೆಯ ಯೋಗ, ಉದ್ಯೋಗ-ವ್ಯವಹಾರಗಳಲ್ಲಿ ಅಭಿವೃದ್ಧಿ. ಮಾನಸಿಕವಾಗಿ ಉದ್ವೇಗ, ಅನಿರೀಕ್ಷಿತ ಬದಲಾವಣೆಗಳಿಂದ ಕೆಲಸದಲ್ಲಿ ಅಡಚಣೆ, ಬಂಧು ಬಳಗದವರೊಂದಿಗೆ ಮನಸ್ಥಾಪ. ಅವಿವಾಹಿತರಿಗೆ ವಿವಾಹಯೋಗ. ವೃಷಭ – ಶನಿಯು ವೃಷಭಕ್ಕೆ ಆರನೇಯವನಾಗಿ ಶುಭಪ್ರದನಾಗಿದ್ದರೂ ಗುರು ಜನ್ಮಸ್ಥನಾದುದರಿಂದ ಕಳೆದ ವರ್ಷ ಮತ್ತು ಈ ವರ್ಷ ಜೂನ್ ವರೆಗೆ ಯಾವುದೇ ಶುಭ ಸೂಚನೆಗಳು ಇರಲಿಲ್ಲ. ಈಗ ಗುರುವು ದ್ವಿತೀಯ ಧನಸ್ಥಾನಗತನಾಗಿ ಬಂದಿರುವುದು ಅತ್ಯಂತ ಶುಭಪ್ರದವಾಗಿದೆ. ನಿಮ್ಮ ನಿಂತುಹೋಗಿರುವ ಎಲ್ಲ ಕೆಲಸಗಳು ಈಗ ಶೀಘ್ರವಾಗಿ ಕೈಗೂಡಿಬರುವವು, ಎಲ್ಲ ಕಡೆಯಿಂದ ಸಹಾಯ ಹಸ್ತಗಳು ಒದಗುವವು. ನೌಕರಿಯಲ್ಲಿ ಪ್ರಮೋಷನ್, ಉದ್ಯೋಗಸ್ಥರೀಗೆ ಲಾಭ, ಅವಿವಾಹಿತರಿಗೆ ವಿವಾಹ ಕೂಡಿಬರುವ ಯೋಗ, ವಿದ್ಯಾರ್ಥಿಗಳಿಗೆ ಶಿಕ್ಷಣ ವಿದ್ಯಾಭ್ಯಾಸಗಳಲ್ಲಿ ಹೆಚ್ಚಿನ ಯಶ, ಒಳ್ಳೆಯ ಆರ್ಥಿಕ ಅನುಕೂಲತೆ, ಸಂತತಿಯ ಯೋಗ, ಹೊಸ ಸ್ಥಾವರ (property) ಆಸ್ತಿ ಖರೀದಿ, ವಾಹನ ಯೋಗ, ಮಿತ್ರ ಬಂಧು ಬಾಂಧವರ ಭೇಟಿ ಮತ್ತು ಅದರಿಂದ ಲಾಭ. ಅತೀ ಆಲಸ್ಯ, ತಂದೆಗೆ ಅನಾರೋಗ್ಯ, ಅತೀ ಅಹಂಕಾರದಿಂದ ಸಂಬಂಧಗಳು ಕೆಡಬಹುದು. ಮಿಥುನ – ಪ್ರಥಮದಲ್ಲಿ ಗುರು ಗೋಚಾರ. ಉದ್ಯೋಗ ವ್ಯವಸಾಯಗಳಲ್ಲಿ ಸ್ಥಿರತೆ, ಮಕ್ಕಳಿಂದ ಸುಸಮಾಚಾರ, ವ್ಯರ್ಥ ಪ್ರವಾಸಯೋಗ, ತೀರ್ಥಯಾತ್ರಾ ಯೋಗ, ಕೌಟುಂಬಿಕವಾಗಿ ಸ್ಥಿತಿ ಉತ್ತಮ, ಸಂತಾನ ಯೋಗ, ಪ್ರೇಮ ಪ್ರಸಂಗಗಳು, ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಅಧ್ಯಯನ. ಆರೋಗ್ಯದ ಕಡೆಗೆ ಗಮನ ಅಗತ್ಯ ಚಿಕ್ಕ ಖಾಯಿಲೆಯು ದೊಡ್ಡದಾಗಿ ಪರಿಣಮಿಸಬಹುದು, ಅಪಘಾತ ಯೋಗ ಕಾಳಜೀ ಅವಶ್ಯಕ, ಆಸ್ತಿ ವ್ಯವಹಾರಗಳಿಂದಾಗಿ ಸಮಸ್ಯೆಗಳು ಬರಬಹುದು, ಕೋರ್ಟು ವ್ಯವಹಾರ ಬೇಡ. ಕರ್ಕ – ಗುರುಗೋಚಾರ ಹನ್ನೆರಡನೇಯ ಮನೆಯಲ್ಲಿ. ವ್ಯಯಸ್ಥಾನದಲ್ಲಿ ಗುರು ಗೋಚಾರದಿಂದ ಆರ್ಥಿಕ ಸಮಸ್ಯೆಗಳು ಆಗಬಹುದು. ಉದ್ಯೋಗ-ವ್ಯವಸಾಯ-ನೌಕರಿಯಲ್ಲಿ ದೊಡ್ಡವರ ಸಲಹೆಯನ್ನು ಪಡೆದು ಜಾಗರೂಕತೆಯಿಂದ ಕಾರ್ಯವನ್ನು ಮಾಡುವುದು ಉತ್ತಮ. ಸಾಲವನ್ನು ಸಾಧ್ಯವಾದಷ್ಟು ಮಾಡದೇ ಇದ್ದರೆ ಒಳಿತು. ಹೊಟ್ಟೆ ಮತ್ತು ಕಣ್ಣಿಗೆ ಸಂಬಂಧಿಸಿದ ವ್ಯಾಧಿಗಳು ಉಂಟಾಗುವ ಸಾಧ್ಯತೆ. ಆಸ್ತಿ ಖರೀದಿ ಚಿನ್ನದ ಖರೀದಿ ಬೇಡ. ನೌಕರಿಯಲ್ಲಿ ಅನಿರೀಕ್ಷಿತ ಬದಲೀ ಯೋಗ, ಅನಾವಶ್ಯಕ ಪ್ರವಾಸಗಳು, ಮಾನಸಿಕ ಅಸ್ವಸ್ಥತೆ, ಕುಟುಂಬದಲ್ಲಿ ಕಲಹ, ಅಪವಾದ, ದಾಂಪತ್ಯ ಜೀವನದಲ್ಲಿ ವಿರಸ. ಗುರುಗ್ರಹ ದಾನ ಶಾಂತಿಯಿಂದ ಪರಿಹಾರ. ಹೆಚ್ಚಿನ ವಿಷಯಗಳನ್ನು ಒಳ್ಳೆಯ ಜ್ಯೋತಿಷ್ಕರಿಂದ ತಿಳಿದು ಪಾಲಿಸುವುದು. ಸಿಂಹ – ಗುರುವು ಹನ್ನೊಂದನೇಯವನಾಗಿರುವುದು ಎಲ್ಲ ರೀತಿಯ ಎಳ್ಗೆಯನ್ನುಂಟುಮಾಡುತ್ತಾನೆ. ಶನಿಯು ಸಹ ಮೂರರಲ್ಲಿ ಅನುಕೂಲಸ್ಥನಾಗಿದ್ದಾನೆ. ಉದ್ಯೋಗ ಕೆಲಸಗಳಲ್ಲಿ ಗುರುತರವಾದ ಅಭಿವೃದ್ಧಿ, ನಿಮಗೆ ಕೇಡು ಮಾಡುತ್ತಿರುವ ಹಿತಶತ್ರುಗಳ ಕಾಟದಿಂದ ಮುಕ್ತಿ, ನೌಕರಿಯಲ್ಲಿ ಒಳ್ಳೆಯ ಸ್ಥಾನಮಾನ (transfer), ಹೊಸ ಬದಲಾವಣೆ ಅಥವಾ ಹೆಚ್ಚಿನ ಅನುಕೂಲವಿರುವ ನೌಕರಿಯ ಪ್ರಾಪ್ತಿ (change of job), ವಿದೇಶ ಗಮನಯೋಗ, ವಾಹನ ಯೋಗ, ವಿವಾಹ ಯೋಗ, ಸಂತತಿ, ಮಕ್ಕಳಿಗೆ ಅಭಿವೃದ್ಧಿ, ಹೊಸ ಹವ್ಯಾಸಗಳು, ಹೆಚ್ಚಿನ ಚಟುವಟಿಕೆಗಳು, ಒಳ್ಳೆಯ ಸ್ಫೂರ್ತಿ ಆನಂದಮಯವಾದ ಚಿತ್ತ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜೀ ಮಾತ್ರ ಬೇಕು, ಉಳಿದಂತೆ ಶುಭ ಫಲ. ಕನ್ಯಾ – ಹತ್ತನೇಯ ಮನೆಯಲ್ಲಿ ಗುರು ಗೋಚಾರ. ಉದ್ಯೋಗ-ವ್ಯವಸಾಯ-ನೌಕರೀವರ್ಗದವರಿಗೆ ಲಾಭ ಮತ್ತು ಪ್ರಗತಿ. ಹೊಸ ಮನೆ, ವಾಹನ, ಆಭರಣ ಖರೀದಿ, ಜನಮಾನ್ಯರಲ್ಲಿ ಸಮ್ಮಾನ, ವಿಳಂಬಿಸಿದ ಕಾರ್ಯಗಳ ಯಶಸ್ವೀ ಪೂರ್ತಿ. ಆಕಸ್ಮಿಕ ಖರ್ಚುಗಳು, ಚಿಕ್ಕವರೊಡನೆ ವಾದ ಕಿರಿಕಿರಿ. ಗುರುಗ್ರಹ ಶಾಂತಿ-ದಾನ-ಜಪ-ಪಾರಾಯಣಗಳನ್ನು ಮಾಡಬೇಕು. ತುಲಾ – ನವಮದಲ್ಲಿ ಗುರು ಗೋಚಾರ. ಭಾಗ್ಯಸ್ಥಾನದಲ್ಲಿ ಗುರು ಸಂಚಾರದಿಂದ ಭಾಗ್ಯೋದಯ ಯೋಗ. ಉದ್ಯೋಗ-ವ್ಯವಸಾಯ-ನೌಕರೀ ಎಲ್ಲದರಲ್ಲಿಯೂ ಉತ್ಕರ್ಷ. ತೀರ್ಥಯಾತ್ರೆ ಮತ್ತು ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಶಾಂತಿ ಸುಖಾನುಭವ. ಆರೋಗ್ಯದಲ್ಲಿ ಸುಧಾರಣೆ, ಕೌಟುಂಬಿಕ ಸೌಖ್ಯ. ಎಲ್ಲದರಲ್ಲಿಯೂ ವಿಳಂಬಕಾರಕವಾದ ಸಾಡೇಸಾತಿ ಶನಿಚಾರದಲ್ಲಿ ಭಾಗ್ಯದ ಗುರುವಿನಿಂದ ಸುಸಮಾಚಾರಗಳು. ಹೊಸ ಕಾರ್ಯಕಲಾಪಗಳಿಂದ ಲಾಭ. ಜನಮಾನ್ಯರಲ್ಲಿ ಸಮ್ಮಾನ, ರಾಜನುಕೂಲತೆ, ದಾನ ಧರ್ಮಕಾರ್ಯಗಳಿಂದ ಯಶೋಲಾಭ. ವೃಶ್ಚಿಕ – ಅಷ್ಟಮ ಗುರು ಗೋಚಾರ. ಎಲ್ಲ ಕೆಲಸಗಳಲ್ಲಿ ವಿಳಂಬ, ಉದ್ಯೋಗ-ವ್ಯವಹಾರಗಳಲ್ಲಿ ಅಸಮಾಧಾನಕಾರಕ ಸ್ಥಿತಿ, ವ್ಯರ್ಥ ವಾದ ವಿವಾದಗಳು, ಮನೆಯಲ್ಲಿ ಕಲಹ, ದುಂದುವೆಚ್ಚ, ಅನಾರೋಗ್ಯ, ಗುಪ್ತಶತ್ರುಗಳಿಂದ ತೊಂದರೆ, ಮಾನಸಿಕ ಉದ್ವೇಗ, ವ್ಯಾಕುಲತೆ (anxiety), ವೈವಾಹಿಕ ಜೀವನದಲ್ಲಿ ವಿರಸ. ನಿಮಗೆ ಶನಿ ಸಾಡೇಸಾತೀ ನಡೆದಿರುವುದರಿಂದ ಮತ್ತು ದ್ವಾದಶದಲ್ಲಿ ರಾಹುಚಾರವೂ ಸಹ ಇರುವುದರಿಂದ ಗ್ರಹಶಾಂತಿ-ದಾನ-ಜಪಾನುಷ್ಟಾನಾದಿಗಳನ್ನು ಮಾಡುವುದರಿಂದ ಸಮಾಧಾನ ಉಂಟಾಗುವುದು. ಧನು – ಅವಿವಾಹಿತ ಧನುರಾಶಿಯವರಿಗೆ ಬಹುಕಾಲದಿಂದ ಕಾಯುತ್ತಿರುವ ಸುಯೋಗ ಪ್ರಾಪ್ತಿ. ಸಪ್ತಮದಲ್ಲಿ ಸಂಚರಿಸುತ್ತಿರುವ ಗುರುವಿನಿಂದಾಗಿ ಸುಖ ಸಮೃದ್ಧಮಯವಾದ ಕೌಟುಂಬಿಕ ಸುಖ, ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ, ಮಾನ ಸಮ್ಮಾನ, ಲಾಭದಾಯಕ ಪ್ರವಾಸಗಳು, ದೂರದ ಸಂಚಾರಯೋಗ, ಆರೋಗ್ಯಲಾಭ, ಕೋರ್ಟ ವ್ಯವಹಾರಗಳಲ್ಲಿ ಯಶಸ್ಸು, ನೌಕರಿಯಲ್ಲಿ ಪ್ರಮೋಷನ್ ಮತ್ತು ಬದಲಾವಣೆ. ಮಕರ – ಆರನೇಯ ಮನೆಯಲ್ಲಿ ಗುರುಚಾರ. ವ್ಯವಾಹಾರ-ಉದ್ಯೋಗಗಳಲ್ಲಿ ನಷ್ಟ, ಸ್ವಜನರಾದ ಬಂಧು-ಮಿತ್ರರಿಂದ ಅಡಚಣೆಗಳು ಕಲಹ, ಆರೋಗ್ಯದಲ್ಲಿ ತೊಂದರೆಗಳು, ದ್ರವ್ಯಚಿಂತೆ, ನೌಕರೀವರ್ಗದವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ, ಸ್ಥಾವರಕ್ಕೆ ಸಂಬಂಧಿತ ಕೋರ್ಟು ಕಛೇರೀ ವ್ಯವಹಾರಗಳಲ್ಲಿ ಹಾನಿ, ಆಕಸ್ಮಿಕ ಧನವ್ಯಹ, ಮಾನಸಿಕ ಕಳವಳ ವ್ಯಥೆ, ಹೊಸ ಜವಾಬ್ದಾರಿಗಳು, ಆಕಸ್ಮಿಕ ಪ್ರವಾಸದಿಂದ ಸಮಾಧಾನ, ದಾಂಪತ್ಯಜೀವನದಲ್ಲಿ ಮನಸ್ಥಾಪ. ಬ್ರಹಸ್ಪತಿ ದಾನ ಶಾಂತಿಯಿಂದ ಪರಿಸ್ಥಿತಿಯಲ್ಲಿ ಸುಧಾರಣೆ. ಕುಂಭ – ಪಂಚಮದಲ್ಲಿ ಗುರು ಗೋಚಾರ. ಪುತ್ರಸ್ಥಾನದಲ್ಲಿ ಬ್ರಹಸ್ಪತಿ ಗೋಚಾರವು ವಿಶೇಷವಾಗಿ ಸಂತಾನಪ್ರದವಾಗಿದೆ, ಸಂತತೀಯನ್ನು ಅಪೇಕ್ಷಿಸುವವರಿಗೆ ಶುಭಯೋಗ. ಪಂಚಮವು ವಿದ್ಯಾಸ್ಥಾನವೂ ಆದುದರಿಂದ ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ವಿಶೇಷ ಯಶಸ್ಸು ವಿದ್ಯೆಯಲ್ಲಿ ಪ್ರಗತಿ. ಆರ್ಥಿಕವಾಗಿ ಲಾಭ, ಪರದೇಶ ಪ್ರವಾಸ ಯೋಗ, ಉದ್ಯೋಗ-ವ್ಯವಸಾಯ-ನೌಕರೀವರ್ಗದವರಿಗೆ ಒಳ್ಳೆಯ ಸಮಯ. ಅವಿವಾಹಿತರಿಗೆ ವಿವಾಹಯೋಗ. ಅಧಿಕಾರ-ಪ್ರಾಪ್ತಿ, ಕುಟುಂಬದಲ್ಲಿ ಸಂಭ್ರಮ, ಶುಭಕಾರ್ಯಗಳಲ್ಲಿ ಮುಂದಾಳ್ವಿಕೆ, ಆನಂದದಾಯಕ ಪ್ರವಾಸಯೋಗ, ಸೌಖ್ಯಯೋಗ. ನೌಕರೀವರ್ಗದವರು ಮೇಲಧಿಕಾರಿಗಳಿಂದ ಅಲ್ಪ ಕಿರಿಕಿರಿಯನ್ನು ಅನುಭವಿಸಬಹುದು. ಮೀನ – ಚತುರ್ಥದಲ್ಲಿ ಗುರು ಗೋಚಾರ. ಚತುರ್ಥವು ಸುಖಸ್ಥಾನವಾಗಿದೆ. ಕುಟುಂಬದಲ್ಲಿ ವಿವಾದ, ಆಸ್ತಿ ವಿಚಾರಗಳಲ್ಲಿ ಕಲಹ, ಕೋರ್ಟು ಸ್ಥಾವರ ವ್ಯವಹಾರಗಳಲ್ಲಿ ಅಡಚಣೆ ವಿಘ್ನ, ಹೃದಯವಿಕಾರ, ಮಾನಸಿಕ ಚಿಂತೆ, ವ್ಯಾಪಾರ-ಉದ್ಯೋಗಗಳಲ್ಲಿ ಮಧ್ಯಮಗತಿ, ಆರ್ಥಿಕ ಸ್ಥಿತಿ ಸಮಾಧಾನಕರ ಆದರೆ ವ್ಯರ್ಥ ಖರ್ಚುಗಳು, ಕಾರ್ಯಕಲಾಪಗಳಲ್ಲಿ ವಿಳಂಬ, ನೌಕರೀ ವರ್ಗದವರಿಗೆ ಮನಸ್ತಾಪ ಕಿರಿಕಿರಿ, ಅಧ್ಯಯನ ವಿದ್ಯಾರ್ಜನೆಯಲ್ಲಿ ದುರ್ಲಕ್ಷ್ಯ, ವಾದ ವಿವಾದಗಳಿಂದ ದೂರವಿರಿ. ಗುರುವಿನ ಪ್ರೀತಿಗಾಗಿ ಗ್ರಹಶಾಂತಿ ಪಾರಾಯಣಾದಿಗಳನ್ನು ಮಾಡಬೇಕು,

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ