Skip to main content

ಸೊಪ್ಪು-ತರಕಾರಿ-ಜೀವಸತ್ವ-ಉಪಯೋಗ

ಹರಿವೆ ಸೊಪ್ಪು ಹರಿವೆ ಅಥವಾ ಕೀರೆ ದಂಟಿನ ಜಾತಿಗೆ ಸೇರಿದ ಸೊಪ್ಪು ತರಕಾರಿಯದರೂ ಅದರಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಹರಿವೆಯ ಕಾಂಡಭಾಗ ಸಣಕಲು; ಎಲೆಗಳೂ ಸಣ್ಣವೇ, ಕಾಂಡ ಹಾಗೂ ಎಲೆಗಳ ಬಣ್ಣ ತಿಳಿ ಹಸುರು ಇಲ್ಲವೇ ಕೆಂಪು. ತಿಳಿ ಹಸುರು ಬಗೆಯ ಸೊಪ್ಪು ಹೆಚ್ಚು ರುಚಿಯಾಗಿರುತ್ತದೆ. ದೇಶದ ಎಲ್ಲಾ ಭಾಗಗಳಲ್ಲಿ ಇದರ ಬೇಸಾಯ ಕಂಡುಬರುತ್ತದೆ. ಪೌಷ್ಟಿಕ ಗುಣಗಳು: ಹರಿವೆ ದಂಟುಸೊಪ್ಪಿನಷ್ಟೇ ಪೌಷ್ಟಿಕ. ಅದರಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ. ಔಷಧೀಯ ಗುಣಗಳು : ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಹಾಗೂ ಇತರ ಖನಿಜ ಪದಾರ್ಥಗಳಿದ್ದು ರಕ್ತದ ಉತ್ಪಾದನೆಗೆ ನೆರವಾಗುತ್ತವೆ. ಅದೇ ರೀತಿ ಇದರಲ್ಲಿನ ನಾರಿನ ಅಂಶ ಮಲಬದ್ಧತೆಯನ್ನು ದೂರ ಮಾಡಬಲ್ಲದು. ಕ್ರಮವರಿತು ತಿನ್ನುತ್ತಿದ್ದಲ್ಲಿ ಅದರ ಸಂಪೂರ್ಣ ಲಾಭ ಸಿಗುತ್ತದೆ. ಉಗಮ ಮತ್ತು ಹಂಚಿಕೆ : ಇದು ಬಹುಶಃ ಸ್ವದೇಶೀ ಎನಿಸಿದ್ದು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಸ್ಯ ವರ್ಣನೆ : ಹರಿವೆ ಅಮರಾಂಥೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಸಣಕಲಾದ ಕಾಂಡಗಳನ್ನು ಹೊಂದಿರುತ್ತದೆ. ಎಲೆಗಳೂ ಸಹ ಸಣ್ಣವಿರುತ್ತವೆ. ಬುಡಭಾಗದಲ್ಲಿ ಹಲವಾರು ಕವಲು ರೆಂಬೆಗಳಿದ್ದು ಸ್ವಲ್ಪ ಮಟ್ಟಿಗೆ ಪೊದರೆಯಂತೆ ಹರಡಿ ಬೆಳೆದಿರುತ್ತದೆ. ಒಟ್ಟಾಗಿ ಸೇರಿಸಿ ಕುಡುಗೋಲಿನಿಂದ ನೆಲಮಟ್ಟಕ್ಕೆ ಕೊಯ್ದು ತೆಗೆಯಬೇಕು. ಮೊದಲ ಕೊಯ್ಲಿನ ನಂತರ ಮತ್ತಷ್ಟು ಚಿಗುರು ಮೂಡಿ ಬೆಳೆಯುತ್ತವೆ. ಬೇರು ಸಮೂಹ ನೆಲೆದಲ್ಲಿ ಬಹಳಷ್ಟು ಹರಡಿರುತ್ತದೆ. ಹವಾಗುಣ : ಇದು ಉಷ್ಣವಲಯದ ಸೊಪ್ಪಿನ ಬೆಳೆ. ವರ್ಷದ ಯಾವ ಕಾಲದಲ್ಲಾದರೂ ಬೆಳೆಯಬಹುದು. ಆದರೆ ಮಳೆಗಾಲ ಹೆಚ್ಚು ಸೂಕ್ತ. ಭೂಗುಣ : ಈ ಬೆಳೆಗೆ ಮರಳುಗೋಡು ಇಲ್ಲವೇ ಕೆಂಪುಗೋಡು ಮಣ್ಣಿನ ಭೂಮಿ ಬಹುವಾಗಿ ಹಿಡಿಸುತ್ತದೆ. ನೀರು ನಿಲ್ಲದೆ ಬಸಿದುಹೋಗಬೇಕು. ಸ್ವಲ್ಪ ಇಳಿಜಾರಿರುವ ಭೂಮಿಯಾದರೆ ಉತ್ತಮ. ತಳಿಗಳು : ಹರಿವೆಯಲ್ಲಿ ತಳಿಗಳಂತೇನೂ ಇಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಗೊದ್ದರಿವೆ, ಚಿಲಕರಿವೆ, ಮುಳ್ಳರಿವೆ ಮುಂತಾದ ಬಗೆಗಳನ್ನು ಕಾಣಬಹುದು. ಬೇಸಾಯದಲ್ಲಿನ ಬಗೆಯಲ್ಲಿ ಮುಳ್ಳುಗಳೇನೂ ಇರುವುದಿಲ್ಲ. ಭೂಮಿ ಸಿದ್ಧತೆ ಮತ್ತು ಬಿತ್ತನೆ : ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ, ತಿಪ್ಪೆ ಗೊಬ್ಬರ ಹರಡಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಸಾಮಾನ್ಯವಾಗಿ ೧ ಮೀಟರ್ ಉದ್ದ ಮತ್ತು ೧ಮೀಟರ್ ಅಗಲದ ಮಡಿಗಳನ್ನು ಮಾಡುವುದೇ ಹೆಚ್ಚು. ಕೆಲವರು ಮಡಿಗಳ ಉದ್ದ ೧.೫ ಮೀಟರ್ ಅಗಲ ಇರುವಂತೆ ತಯಾರಿಸುತ್ತಾರೆ. ಈ ರೀತಿಯಲ್ಲಿ ಸಿದ್ಧಗೊಳಿಸಿದ ಮಡಿಗಳನ್ನು ನೀರು ಕಾಲುವೆಗಳು ಉದ್ದಕ್ಕೂ ಬೇರ್ಪಡಿಸುತ್ತವೆ. ಬೀಜ ಅತೀ ಸಣ್ಣ. ಅವು ಸಮನಾಗಿ ಹಾಗೂ ತೆಳ್ಳಗೆ ಬೀಳುವಂತೆ ಮಾಡಲು ಪುಡಿ ಮಾಡಿದ ತಿಪ್ಪೆಗೊಬ್ಬರದೊಂದಿಗೆ ಬೆರೆಸಿಕೊಳ್ಳಬೇಕು. ಮಡಿಗಳಲ್ಲಿ ಅಡ್ಡಲಾಗಿ ಅಥವಾ ಉದ್ದಕ್ಕೆ ಸಣ್ಣದಾದ ಗೀರು ಸಾಲು ಕಾಲುವೆಗಳನ್ನು ಮಾಡಿ, ಅವುಗಳಲ್ಲಿ ಬೀಜ ಬಿತ್ತಬೇಕು. ಬೀಜ ಬಹುಮೇಲೆಯೇ ಬೀಳುವುದರಿಂದ ಇರುವೆಗಳು ಅವುಗಳನ್ನು ಹೊತ್ತುಕೊಂಡು ಹೋಗಿ ತಿಂದು ಹಾಳುಮಾಡಬಹುದು ಅಥವಾ ನೀರು ಹಾಯಿಸಿದಾಗ ಅವೆಲ್ಲವೂ ತಗ್ಗಿರುವ ಕಡೆ ತೇಲಿಬರಬಹುದು. ಆದ್ದರಿಂದ ಬಿತ್ತಿದ ಕೂಡಲೇ ಅವುಗಳ ಮೇಲೆ ಮರಳು, ಪುಡಿಗೊಬ್ಬರ ಮುಂತಾಗಿ ತೆಳ್ಳಗೆ ಉದುರಿಸಬೇಕು. ಪ್ರಾರಂಭದಲ್ಲಿ ಒಂದೆರಡು ಸಾರಿ ಕೈ ನೀರು ಕೊಡುವುದು ಒಳ್ಳೆಯದು. ನೀರು ಹನಿಸುವ ಡಬ್ಬಿ ಇದ್ದರೆ ಅನುಕೂಲ. ಹೆಕ್ಟೇರಿಗೆ ೨.೫-೫.೦ ಕಿ.ಗ್ರಾಂ ಬೀಜ ಬೇಕಾಗುತ್ತದೆ. ಗೊಬ್ಬರ : ಹೆಕ್ಟೇರಿಗೆ ೧೦ ರಿಂದ ೧೫ ಟನ್ ತಿಪ್ಪೆಗೊಬ್ಬರ ಕೊಡಬೇಕು. ಅದು ಚೆನ್ನಾಗಿ ಕೊಳೆತಿರಬೇಕು. ಪ್ರತಿ ಕಟಾವಿನ ನಂತರ ಸ್ವಲ್ಪ ಪ್ರಮಾಣದ ಯೂರಿಯಾದಂತಹ ರಾಸಾಯನಿಕ ಗೊಬ್ಬರ ಕೊಡುವುದು ಲಾಭದಾಯಕ. ನೀರಾವರಿ : ಇದಕ್ಕೆ ಹದವರಿತು ನೀರುಕೊಡಬೇಕು. ತೇವ ಜಾಸ್ತಿಯೂ ಇರಬಾರದು ಹಾಗೆಯೇ ಕಡಿಮೆಯೂ ಇರಬಾರದು. ಬೇಸಿಗೆಯಲ್ಲಿ ನಾಲ್ಕೈದು ದಿನಗಳಿಗೊಮ್ಮೆ ಮತ್ತು ಇತರ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕು. ಮಳೆಗಾಲದಲ್ಲಿ ಹೆಚ್ಚು ನೀರು ಬೇಕಾಗಿಲ್ಲ. ಅಂತರ ಬೇಸಾಯ ಮತ್ತು ಕಳೆ ಹತೋಟಿ : ಆಗಿಂದಾಗ್ಗೆ ಕಳೆಗಳನ್ನು ಕಿತ್ತು ಹಾಕುವುದು ಅಗತ್ಯ. ಪ್ರತಿ ಸಾರಿ ಸೊಪ್ಪನ್ನು ಕೊಯ್ಲು ಮಾಡಿದ ನಂತರ ಮಣ್ಣನ್ನು ಹಗುರವಾಗಿ ಕೆದಕಿ, ತಿಪ್ಪೆಗೊಬ್ಬರ ಹರಡಿ ನೀರು ಹಾಯಿಸಿದರೆ ಹೊಸ ಚಿಗುರು ಪುಟಿದು, ದೃಢವಾಗಿ ಬೆಳೆಯುತ್ತದೆ. ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ೨೦-೨೫ ದಿನಗಳಲ್ಲಿ ಸೊಪ್ಪನ್ನು ಕಿತ್ತು ಬಳಸಬಹುದು ಅಥವಾ ಕುಡುಗೋಲಿನಿಂದ ನೆಲಮಟ್ಟಕ್ಕೆ ಹಿಡಿಹಿಡಿಯಾಗಿ ಸೇರಿಸಿ ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಪ್ರಾರಂಭದಲ್ಲಿ ಎಲೆಗಳು ದೊಡ್ಡವಿರುತ್ತವೆಯಾದರೂ ದಿನಕಳೆದಂತೆ ಅವುಗಳ ಗಾತ್ರ ಕುಸಿಯುತ್ತದೆ. ಒಮ್ಮೆ ಬಿತ್ತಿದರೆ ಸುಮಾರು ಎಳೆಂಟು ತಿಂಗಳುಗಳವರೆಗೆ ಸೊಪ್ಪು ಸಿಗುತ್ತಿರುತ್ತದೆ. ಅನಂತರ ಬೇರುಗಳ ಸಮೇತ ಕಿತ್ತು ತೆಗೆದು, ಅವುಗಳನ್ನೂ ಸಹ ತರಕಾರಿಯಾಗಿ ಬಳಸಬಹುದು. ಹೆಕ್ಟೇರಿಗೆ ೨೦-೨೫ ಟನ್ನುಗಳಷ್ಟು ಸೊಪ್ಪು ಸಾಧ್ಯ. ಕಡೆಯಲ್ಲಿ ಕಿತ್ತು ತೆಗೆದ ಬೇರುಗಳು ಸುಮಾರು ೨-೩ ಟನ್ನುಗಳಷ್ಟಿರುತ್ತವೆ. ಅಧ್ಯಾಯ ೪: ಕೈತೋಟದ ನಕ್ಷೆ ಮತ್ತು ಬೆಳೆಗಳು – ತರಕಾರಿ ಬೆಳೆಗಳು ಕೈತೋಟದಲ್ಲಿ ತರಕಾರಿಗಳು ಬಹುಪಾಲು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ’ತರಕಾರಿಗಳಿಲ್ಲದೇ ಕೈತೋಟವಿಲ್ಲ’ ಎನ್ನಬಹುದು. ಪ್ರತಿನಿತ್ಯ ಬೇಕಾಗುವ ವಿವಿಧ ತರಕಾರಿಗಳನ್ನು ಸುಲಭವಾಗಿ ಮತ್ತು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಸ್ವಲ್ಪ ತಾಂತ್ರಿಕತೆ ತಿಳಿದುಕೊಂಡಿದ್ದರೆ ಕೈತೋಟದ ತರಕಾರಿ ಬೆಳೆಗಳನ್ನು ಲಾಭದಾಯಕವಾಗಿ ಬೆಳೆದು ಹಣಗಳಿಕೆ ಮಾಡಬಹುದಾಗಿದೆ. ತರಕಾರಿಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಬಹುದು. ಮುಖ್ಯವಾಗಿ, ಸಸ್ಯ ಶಾಸ್ತ್ರೀಯವಾಗಿ, ಬೆಳೆಯುವ ಕಾಲಕ್ಕನುಗುಣವಾಗಿ ಮತ್ತು ಉಪಯೋಗಿಸುವ ತರಕಾರಿ ಬೆಳೆಗಳ ಭಾಗಗಳನ್ನು ಅವಲಂಬಿಸಿ ಗುಂಪುಗಳನ್ನಾಗಿ ಮಾಡಲಾಗಿದೆ. ಸಸ್ಯ ಶಾಸ್ತ್ರೀಯವಾಗಿ ತರಕಾರಿಗಳನ್ನು ೧೮ ಕುಟುಂಬಗಳಾಗಿ ವಿಂಗಡಿಸಲಗಿದೆ. ಲ್ಯಾಟಿನ್ ಭಾಷೆಯಲ್ಲಿ ಕುಟುಂಬಗಳನ್ನು ಹೆಸರಿಸಲಾಗಿದ್ದು, ಪ್ರತಿ ಕುಟುಂಬದಲ್ಲಿ ಹಲವಾರು ತರಕಾರಿಗಳ ಗುಂಪುಗಳು ಜೋಡಣೆಯಾಗುವುವು. ತರಕಾರಿಗಳ ಸಾಮಾನ್ಯ ಹೆಸರಿಗೆ ಸಸ್ಯಶಾಸ್ತ್ರೀಯ ಹೆಸರುಗಳೂ ಉಂಟು. ಇವು ಎಲ್ಲೆಡೆ ತರಕಾರಿಗಳನ್ನು ಗುರುತಿಸಲು ಅನುಕೂಲ. ಬೆಳೆಯುವ ಕಾಲವನ್ನು ಪರಿಗಣಿಸಿದಾಗ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಕಾಲದ ತರಕಾರಿ ಬೆಳೆಗಳೆಂದು ವಿಂಗಡಿಸಲಾಗಿದೆ. ಈ ಮೂರು ಕಾಲಗಳಲ್ಲಿ ಹವಾಮಾನವು ವ್ಯತ್ಯಾಸವಾಗುವುದರಿಂದ ಕೆಲವು ತರಕಾರಿಗಳು ಒಂದು ಕಾಲಕ್ಕೆ ಹೊಂದಿಕಂಡರೆ, ಮತ್ತೆ ಕೆಲವು ಮತ್ತೊಂದು ಕಾಲದಲ್ಲಿ ಹೊಂದಿಕೊಳ್ಳುತ್ತವೆ. ನೀರಾವರಿ ವ್ಯವಸ್ಥೆಯಿದ್ದಲ್ಲಿ ಹಲವು ತರಕಾರಿಗಳನ್ನು ವರ್ಷವಿಡೀ ಬೆಳೆಯಬಹುದು. ೧. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ೨. ಚಳಿಗಾಲದ ತರಕಾರಿಗಳು : ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ೩. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಬೆಂಡೆ, ಬದನೆ ಮುಂತಾದವುಗಳು. ತರಕಾರಿಗಳನ್ನು ಉಪಯೋಗಿಸುವಾಗ ಒಂದು ಮುಖ್ಯ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಕೆಲವು ಬಗೆಯ ತರಕಾರಿಗಳಲ್ಲಿ ಹಣ್ಣು-ಕಾಯಿಗಳನ್ನು ಉಪಯೋಗಿಸಿದರೆ, ಮತ್ತೆ ಕೆಲವಲ್ಲಿ ಕಾಂಡ, ಎಲೆ, ಬೇರು, ಹೂವು, ಮೊಗ್ಗುಗಳನ್ನು ಸೇವನೆಗೆ ಉಪಯೋಗಿಸುತ್ತೇವೆ. ೧. ಹಣ್ಣು (ಕಾಯಿ) ತರಕಾರಿಗಳು : ಟೊಮೊಟೊ, ಬದನೆ, ಚವಳೆ, ಬೆಂಡೆ, ತೊಂಡೆ, ಸೌತೇ, ಹಾಗಲ, ಕರಬೂಜ ಇತ್ಯಾದಿ. ೨. ಸೊಪ್ಪು ತರಕಾರಿಗಳು : ಮೆಂತೆ, ರಾಜಗಿರಿ, ಪಾಲಕ್, ಕರಿಬೇವು, ಬಸಳೆ, ಕೊತ್ತಂಬರಿ, ಹರಿವೆ, ಸಬ್ಬಸಿಗೆ ಇತ್ಯಾದಿ. ೩. ಬೇರು ತರಕಾರಿಗಳು : ಆಲೂಗೆಡ್ಡೆ, ಮೂಲಂಗಿ, ಗಜ್ಜರಿ, ಬೀಟ್‌ರೂಟ್ ಇತ್ಯಾದಿ. ೪. ಗೆಡ್ಡೆ ತರಕಾರಿಗಳು ; ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿ. ಹೀಗೆ ತರಕಾರಿ ಬೆಳೆಗಳನ್ನು ಹಲವು ಗುಂಪು ಮಾಡಲಾಗಿದೆ. ಇವುಗಳಲ್ಲದೇ ಮಾರಾಟದ ದೃಷ್ಟಿಯಿಂದ ಹಣಕಾಸಿನ ಉದ್ದೇಶ ಗಮನದಲ್ಲಿಟ್ಟುಕೊಂಡು ಗುಂಪುಗಳನ್ನು ಮಾಡಬಹುದು. ಹೆಚ್ಚು ಬೇಡಿಕೆ ಹಾಗೂ ಕಡಿಮೆ ಬೇಡಿಕೆ ಇರುವ ತರಕಾರಿಗಳೆಂದು ಹಾಗೂ ಸಮೀಪ ಮತ್ತು ದೂರದ ಮಾರುಕಟ್ಟೆಗೆ ಸಾಗಿಸುವ ತರಕಾರಿಗಳೆಂದು ಮತ್ತೊಂದು ಗುಂಪನ್ನು ಮಾಡಬಹುದಾಗಿದೆ. ಬೇಸಾಯ ಕ್ರಮಗಳು : ಭೂಮಿ ಸಿದ್ಧಪಡಿಸುವ ಕಾರ್ಯದಿಂದ ಬೇಸಾಯ ಪ್ರಾರಂಭವಾಗುವುದು. ಕೈತೋಟದಲ್ಲಿ ತರಕಾರಿ ಬೆಳೆಯಲು ಸೂಕ್ತವಾದ ಮಣ್ಣು ಇರದೇ ಇದ್ದಲ್ಲಿ ಬೇರೆಡೆಯ ಹೊಸ ಮಣ್ಣನ್ನು ಉಪಯೋಗಿಸಬಹುದು. ಭೂಮಿಯನ್ನು ಸಾಧ್ಯವಾದ ಮಟ್ಟಿಗೆ ಚೆನ್ನಾಗಿ ಉಳುಮೆ ಮಾಡಿ ಸಮತಟ್ಟು ಮಾಡಿ ಮಣ್ಣನ್ನು ಸಡಿಲಗೊಳಿಸಬೇಕು. ಕಲ್ಲು ಮತ್ತಿತರೆ ನಿರುಪಯೋಗಿ ವಸ್ತುಗಳನ್ನು ಆರಿಸಿ ಹೊರಗೆ ಹಾಕಬೇಕು. ಹೆಂಟೆಗಳನ್ನು ಒಡೆದು ಪುಡಿ ಮಾಡಿ ಸರಿಯಾಗಿ ಕೊಚ್ಚಣೆ ಮಾಡಬೇಕು. ನಂತರ ಕೊಟ್ಟಿಗೆ ಅಥವಾ ಇನ್ನಾವುದೇ ಸಾವಯವ ಗೊಬ್ಬರವನ್ನು ಮಣ್ಣಿನಲ್ಲಿ ಸರಿಯಾಗಿ ಬೆರೆಸಬೇಕು. ಮಣ್ಣಿನ ಫಲವತ್ತತೆ ನೋಡಿಕೊಂಡು ಗೊಬ್ಬರ ಮಿಶ್ರ ಮಾಡುವ ಪ್ರಮಾಣವನ್ನು ನಿರ್ಧರಿಸಬೇಕು. ಮಿಶ್ರ ಮಾಡುವ ಗೊಬ್ಬರದಲ್ಲಿ ಮಣ್ಣಿನಲ್ಲಿ ಕರಗದ ವಸ್ತುಗಳು ಸೇರಿರಬಾರದು. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವ ಮುನ್ನವೇ ಭೂಮಿಯ ಸಿದ್ಧತೆ ಮಾಡಿಕೊಂಡಿರುವುದು ಅವಶ್ಯಕ. ಸಸಿಮಡಿ ತಯಾರಿಕೆ : ಮೆಣಸಿನಕಾಯಿ, ಬದನೆ, ಟೊಮೊಟೊದಂತಹ ಬೆಳೆಗಳಲ್ಲಿ ಮೊದಲು ಸಸಿಗಳನ್ನು ಪ್ರತ್ಯೇಕವಾಗಿ ಎಬ್ಬಿಸಿ, ನಂತರ ಅವುಗಳನ್ನು ನಾಟಿ ಮಾಡಬಹುದಾಗಿದೆ. ಈ ರೀತಿ ಸಸಿಗಳನ್ನು ತಯಾರಿಸಲು ’ಏರು ಸಸಿ ಮಡಿ’ಗಳನ್ನು ಉಪಯೋಗಿಸುವರು. ಚಿತ್ರ ೧೧ ರಲ್ಲಿ ತೋರಿಸಿರುವಂತೆ ಒಂದು ಮಾದರಿ ಅಳತೆಯಾಗಿ ೮ ಮೀ. ಉದ್ದ, ೧.೨ ಮೀ. ಅಗಲ ಮತ್ತು ೧೦ ಸೆಂ.ಮೀ. ಎತ್ತರದ ಮಡಿಗಳನ್ನು ತಯಾರಿಸಬೇಕು. ಇವುಗಳಲ್ಲಿ ಮಣ್ಣನ್ನು ಸರಿಯಾಗಿ ಪುಡಿ ಮಾಡಿ ಹದಗೊಳಿಸಿರಬೇಕು. ಎರಡು ಮಡಿಗಳ ಮಧ್ಯೆ ನೀರು ಹರಿದು ಹೋಗಲು ಮತ್ತು ವಿವಿಧ ಕೆಲಸಗಳಿಗಾಗಿ ಓಡಾಡಲು ೬೦-೭೫ ಸೆಂ.ಮೀ. ಸ್ಥಳ ಬಿಡಬೇಕು. ನಂತರ ಪುಡಿ ಮಾಡಿದ ಕೊಟ್ಟಿಗೆ ಗೊಬ್ಬರ (ಎರಡು ಬುಟ್ಟಿ) ದೊಂದಿಗೆ ಯಾವುದಾದರೂ ಒಂದು ಸಂಯುಕ್ತ ರಸಗೊಬ್ಬರ (೫೦೦ ಗ್ರಾಂ) ವನ್ನು ಸೇರಿಸಿ ಮಡಿಗಳಲ್ಲಿ ಮಣ್ಣಿನೊಂದಿಗೆ ಚೆನ್ನಾಗಿ ಬೆರೆಸಿ ಉಪಯೋಗಿಸಬೇಕು. ಅಧಿಕೃತ ಕಂಪನಿಗಳಿಂದ ಬೀಜೋಪಚಾರ ಮಾಡಿದ ಬೀಜಗಳನ್ನು ಖರೀದಿಸಿಟ್ಟುಕೊಂಡಿರಬೇಕು. ಬೇರೆ ಬೀಜಗಳನ್ನು ಉಪಯೋಗಿಸುವುದಾದರೆ ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡಬೇಕಾಗುವುದು. ಬೀಜೋಪಚಾರಕ್ಕಾಗಿ ಕ್ಯಾಪ್ಟಾನ್ ಅಥವಾ ಥೈರಾಮ್‌ಗಳನ್ನು ಸುಮಾರು ೦.೫ ಗ್ರಾಂ ನಷ್ಟನ್ನು ಪ್ರತಿ ಕಿ.ಗ್ರಾಂ. ಬೀಜಕ್ಕೆ ಉಪಚರಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬೀಜಗಳನ್ನು ಮಡಿಗಳಲ್ಲಿ ೭.೫ ಸೆಂ.ಮೀ. ಅಂತರದ ಸಾಲುಗಳಲ್ಲಿ ತೆಳುವಾಗಿ ಬಿತ್ತನೆ ಮಾಡಿ ಮಣ್ಣಿನ ಮೇಲೆ ತೆಳುಪದರವಾಗಿ ಮುಚ್ಚಬೇಕು. ಆಮೇಲೆ ತರಗೆಲೆ ಇಲ್ಲವೇ ತೆಂಗಿನ ಗರಿಗಳು ಅಥವಾ ಬೇವಿನ ಮರದ ಟೊಂಗೆಗಳನ್ನು ಮಡಿಗಳ ಮೇಲೆ ಹಾಕಬಹುದು. ಪ್ರತಿ ದಿನ ನೀರು ಹನಿಸುವ ಡಬ್ಬಿಯಿಂದ ನೀರು ಪೂರೈಕೆ ಮಾಡಬೇಕು. ಸುಮಾರು ೪-೬ ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. (ಮಡಿಗಳಲ್ಲಿ ಬೀಜ ಮೊಳಕೆಯೊಡೆದು ಮುಂದೆ ಎಲೆಗಳಾಗುತ್ತಿದ್ದಂತೆ ಮಡಿಗಳ ಮೇಲೆ ಹಾಕಿದ ಹೊದಿಕೆಯನ್ನು ತೆಗೆಯಬೇಕು.) ಅತಿ ಸಣ್ಣ ಗಾತ್ರದ ಬೀಜಗಳನ್ನು ಬಿತ್ತನೆ ಮಾಡುವಾಗ ಪುಡಿಗೊಬ್ಬರ ಮರಳಿನೊಂದಿಗೆ ಮಿಶ್ರ ಮಾಡಿ ಬಿತ್ತನೆ ಮಾಡಿದರೆ ಆ ಬೀಜಗಳು ಒಂದೆಡೆ ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಬಹುದು ಮತ್ತು ಮಡಿಗಳನ್ನು ತಗ್ಗು ಪ್ರದೇಶಗಳಲ್ಲಿ ಮಾಡಬಾರದು. ಮಡಿಗಳಲ್ಲಿ ಉಪಯೋಗಿಸುವ ಮಣ್ಣು ಮರಳು ಮಿಶ್ರಿತ ಗೋಡು ಮಣ್ಣಾಗಿದ್ದರೆ ಉತ್ತಮ. ಮರಳು ಮಿಶ್ರಿತ ಕಪ್ಪು ಮಣ್ಣು ಮಡಿ ತಯಾರಿಕೆಗೆ ಸೂಕ್ತವಾಗಿದೆ. ಮಡಿಗಳಿಂದ ಸಸಿಗಳನ್ನು ಕೀಳುವಾಗ ಮೊದಲು ಮಡಿಗೆ ನೀರು ಪೂರೈಸಿ ಬೇರುಗಳಿಗೆ ಧಕ್ಕೆಯಾಗದಂತೆ ಕೀಳಬೇಕು. ನಾಟಿ ಮಾಡುವಾಗಲೂ ಗುಣಿಗಳಿಗೆ ನೀರು ಪೂರೈಸಿ ನಂತರ ನಾಟಿ ಮಾಡಬೇಕು. ಮಡಿಗಳಿಂದ ಸಸಿಗಳನ್ನು ಹೊರ ತೆಗೆದ ಮೇಲೆ ಸಾಧ್ಯವಾದಷ್ಟು ಬೇಗನೆ ನಾಟಿ ಮಾಡಬೇಕು. ದೂರ ಸಾಗಿಸಬೇಕಾದರೆ ಬಟ್ಟೆ ಅಥವಾ ಗೋಣಿ ಚೀಲವನ್ನು ನೀರಿನಿಂದ ನೆನಸಿ ಸಸಿಗಳ ಮೇಲೆ ಹಾಕಿಕೊಂಡು ಹೋಗಬೇಕು. ಮುಖ್ಯವಾದ ತರಕಾರಿ ಬೆಳೆಗಳು ೧. ಟೊಮೊಟೊ ಹೆಚ್ಚಾಗಿ ಬೆಳೆಯುವ ಹಾಗೂ ಬಳಸುವ ಕೆಲವೇ ತರಕಾರಿ ಬೆಳೆಗಳಲ್ಲಿ ಟೊಮೊಟೊ ಒಂದು ಜನಪ್ರಿಯ ತರಕಾರಿಯಾಗಿದೆ. ಇದನ್ನು ಹಸಿರು ಬಣ್ಣದ ಕಾಯಿ ಇದ್ದಾಗಿನಿಂದ ಪೂರ್ಣವಾಗುವ ಹಂತದವರೆಗೂ ಬಳಸುವರು. ಇದರಿಂದ ’ಕೆಚಪ್’ ಎಂಬ ಸಂಸ್ಕರಿಸಿದ ಪದಾರ್ಥವನ್ನೂ ತಯಾರಿಸುವರು. ಇದು ’ಎ’, ’ಬಿ’ ಮತ್ತು ’ಸಿ’ ಜೀವಸತ್ವಗಳನ್ನು ಪೂರೈಸುತ್ತದೆ. ನಮ್ಮ ರಾಜ್ಯದಲ್ಲಿ ಟೊಮೊಟೊ ಬೆಳೆಯಲು ಸೂಕ್ತವಾದ ವಾತಾವರಣವಿದೆ. ಒಣ ಭೂಮಿಯಲ್ಲಿ ಬೆಳೆಯಲು ಸಾಧ್ಯವಿದೆಯಾದರೂ ನೀರಾವರಿ ಪ್ರದೇಶದಲ್ಲಿ ಲಾಭದಾಯಕವಾಗಿ ಬೆಳೆಯಬಹುದು. ಜನವರಿ-ಫೆಬ್ರುವರಿ, ಜೂನ್-ಜುಲೈ ಮತ್ತು ಅಕ್ಟೋಬರ್‌‌ನವೆಂಬರ್‌ತಿಂಗಳುಗಳಲ್ಲಿ ಬೆಳೆಯಬಹುದು. ಇತ್ತೀಚೆಗೆ ಹಲವು ಹೈಬ್ರಿಡ್ ತಳಿಗಳು ಬಂದಿವೆ. ಇವು ದೊಡ್ಡ ಗಾತ್ರದ ಕಾಯಿಗಳನ್ನು ಕೊಡುವುದು. ’ಪೂಸಾರೂಬಿ’ ಒಂದು ಉತ್ತಮ ಹಾಗೂ ಅಲ್ಪಾವಧಿ ತಳಿ. ಇದು ಮಧ್ಯಮ ಗಾತ್ರದ ಕಾಯಿಗಳನ್ನು ಕೊಡುವುದು. ವರ್ಷದ ಮೂರೂ ಕಾಲಗಳಲ್ಲೂ ಇದನ್ನು ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಇನ್ನಿತರ ತಳಿಗಳೆಂದರೆ, ರೋಮ್, ವೈಶಾಲಿ, ರಜನಿ, ನವೀನ್, ಎಸ್-೨೨ ಮುಂತಾದುವುಗಳು. ಹೈಬ್ರಿಡ್ ತಳಿಗಳಾದರೆ ೧.೨ ಮೀ. X ೧. ಮೀ., ಸುಧಾರಿತ ತಳಿಗಳಾದರೆ ೭೫ ಸೆಂ.ಮೀ. X ೬೦ ಸೆಂ.ಮೀ. ಮತ್ತು ೧ ಮೀ. X ೬೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ರಸಗೊಬ್ಬರಗಳಲ್ಲಿ ಶೇ. ೫೦ ರಷ್ಟು ಸಾರಜನಕ, ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್‌ಗಳನ್ನು ನೀಡಿ, ನಾಟಿ ಮಾಡಿದ ಆರು ವಾರಗಳ ನಂತರ ಉಳಿದ ಶೇ. ೫೦ ರಷ್ಟು ಸಾರಜನಕ ಕೊಡಬೇಕು ಮತ್ತು ಆ ಸಮಯದಲ್ಲಿ ಗಿಡಗಳಿಗೆ ಮಣ್ಣೇರಿಸಬೇಕು. ಹವಾಗುಣ ಮತ್ತು ಮಣ್ಣಿನ ಗುಣಧರ್ಮಗಳನ್ನನುಸರಿಸಿ ೫-೬ ದಿನಗಳಿಗೊಮ್ಮೆ ನೀರು ಕೊಡಬೇಕು. ನಾಟಿ ಮಾಡಿದ ಎರಡೂವರೆ ತಿಂಗಳ ನಂತರ ಫಲ ಬರಲು ಆರಂಭವಾಗುವುದು. ಮುಂದೆ ಸುಮಾರು ಎರಡು ತಿಂಗಳವರೆಗೆ ಹಂತ ಹಂತವಾಗಿ ಕೊಯ್ಲು ಮಾಡಬಹುದು. ೨. ಮೆಣಸಿನಕಾಯಿ ಮೆಣಸಿನ ಕಾಯಿಯಲ್ಲಿ ಹಲವಾರು ತಳಿಗಳಿವೆ. ಚಿಕ್ಕಗಾತ್ರದ (ಪರಂಗಿ ಮೆಣಸಿನಕಾಯಿ), ದುಂಡನೆ (ದೊಣ್ಣೆ ಮೆಣಸಿನಕಾಯಿ), ಮತ್ತು ಉದ್ದನೆ ಕಾಯಿಗಳು ಇತ್ಯಾದಿ. ಚಿಕ್ಕ ಗಾತ್ರದ ಕಾಯಿಗಳು ತುಂಬಾ ಖಾರವಿದ್ದು ಬಳಕೆ ಕಡಿಮೆ. ದುಂಡು ಮೆಣಸಿನಕಾಯಿಗಳನ್ನು ಪಲ್ಯ ಮಾಡಲು ಮತ್ತು ಉದ್ದನೆ ಕಾಯಿಗಳನ್ನು ಒಗ್ಗರಣೆ ಪದಾರ್ಥಗಳಿಗೆ ಬಳಸುವರು. ಉದ್ದನೆಯ ಕಾಯಿಗಳು ಪೂರ್ಣ ಹಣ್ಣಾಗುವವರೆಗೆ ಗಿಡದಲ್ಲಿ ಬಿಟ್ಟು ಕೊಯ್ಲು ಮಾಡಿ, ಒಣಗಿಸಿ, ಖಾರದಪುಡಿ ಮಾಡಿ ಸಂಬಾರು ಮತ್ತು ಇತರ ಖಾರದ ತಿಂಡಿಗಳಿಗೆ ಉಪಯೋಗಿಸುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಮೆಣಸಿನಕಾಯಿ ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಕಪ್ಪು ಮಣ್ಣು ಸೂಕ್ತ. ಜೂನ್-ಜುಲೈ ತಿಂಗಳುಗಳಲ್ಲಿ ಸಸಿಗಳನ್ನು ನಾಟಿ ಮಾಡಬಹುದು. ಕೆಲವು ತಳಿಗಳನ್ನು ಕುಂಡಗಳಲ್ಲಿಯೂ ನಾಟಿ ಮಾಡಿ ಬೆಳೆಯಬಹುದಾಗಿದೆ. ಮೆಣಸಿನಕಾಯಿ ತಳಿಗಳಲ್ಲಿ ಹಲವಾರು ಜನಪ್ರಿಯವಾಗಿವೆ. ಈ ತಳಿಗಳು ರಾಜ್ಯದ ಹಲವೆಡೆ ಸ್ಥಳೀಯವಾಗಿ ಬೆಳೆಯುತ್ತಿದ್ದು, ಅವುಗಳಿಗೆ ಆ ಪ್ರದೇಶದ ಹೆಸರುಗಳನ್ನು ಕೊಡಲಾಗಿದೆ. ಅವುಗಳೆಂದರೆ, ಬ್ಯಾಡಗಿ, ಮೈಸೂರು, ಗೌರೀಬಿದನೂರು, ಸಂಕೇಶ್ವರ ಇತ್ಯಾದಿ. ದುಂಡು ಮೆಣಸಿನಕಾಯಿ ತಳಿಗಳಲ್ಲಿ ಸೆಲೆಕ್ಷನ್-೧೩, ಸೆಲೆಕ್ಷನ್-೧೬, ಕ್ಯಾಲಿಪೋರ್ನಿಯಾ ವಂಡರ್‌‌‌, ಭಾರತ್‌, ರೂಬಿಕಿಂಗ್ ಇತ್ಯದಿಗಳು ಪ್ರಮುಖವಾದುವುಗಳು. ಬ್ಯಾಡಗಿ ತಳಿಯನ್ನು ಖಾರದಪುಡಿ ತಯಾರಿಸಲು ಉಪಯೋಗಿಸುವರು, ಕಾಯಿಗಳು ಹೆಚ್ಚು ಉದ್ದವಾಗಿರುತ್ತವೆ. ಹೆಚ್ಚು ಖಾರದಂಶ ಪಡೆಯಲು ’ಸಂಕೇಶ್ವರ’ ತಳಿ ಪ್ರಯೋಜನಕಾರಿ. ಮಳೆಯಾಶ್ರಯದಲ್ಲಿ ಈ ತಳಿಯನ್ನು ಬೆಳೆಸುವುದು ಸೂಕ್ತ. ಮೈಸೂರು ತಳಿಯ ಗಿಡಗಳು ಎತ್ತರವಾಗಿ ಬೆಳೆಯುವುವು. ಕೆಂಪು ಕಾಯಿಗಳನ್ನು ಬಿಡುತ್ತವೆ. ಗೌರೀ ಬಿದನೂರು ತಳಿಯ ಗಿಡಗಳೂ ಎತ್ತರವಾಗಿ ಬೆಳೆಯುತ್ತವೆ. ಕಾಯಿಗಳು ಸುಮಾರು ಐದು ಸೆಂ.ಮೀ. ಉದ್ದವಿರುತ್ತವೆ. ಕ್ಯಾಲಿಪೋರ್ನಿಯಾ ವಂಡರ್‌‌‌ತಳಿ ಅಧಿಕ ಇಳುವರಿ ನೀಡುವುದು. ಇದನ್ನು ಇಡೀ ವರ್ಷ ಬೆಳೆಯಬಹುದು. ಕಾಯಿಯ ತೊಗಟೆ ದಪ್ಪ. ಬೀಜಗಳ ಸಂಖ್ಯೆ ಕಡಿಮೆ. ಭಾರತ್ ತಳಿಯನ್ನು ಬೆಂಗಳೂರಿನ ಇಂಡೋ ಅಮೆರಿಕನ್ ಸಂಸ್ಥೆ ಬಿಡುಗಡೆ ಮಾಡಿದೆ. ಇದು ತಂಬಾಕು ನಂಜು ನಿರೋಧಕ ಶಕ್ತಿ ಹೊಂದಿದೆ. ಅಧಿಕ ಇಳುವರಿ ನೀಡುವುದು. ರೂಬಿ ಕಿಂಗ್ ತುಂಬಾ ಜನಪ್ರಿಯ ತಳಿಯಾಗಿದೆ. ಕಾಯಿಗಳು ೩-೪ ಅಂಚುಗಳನ್ನು ಹೊಂದಿರುತ್ತವೆ. ತಿರುಳು ದಪ್ಪ. ಸಿದ್ಧಪಡಿಸಿದ ಭೂಮಿಯಲ್ಲಿ ೭೫ ಸೆಂ.ಮೀ. X ೪೫ ಸೆಂ.ಮೀ. (ನೀರಾವರಿ), ೯೦ ಸೆಂ.ಮೀ. X ೯೦ ಸೆಂ.ಮೀ. (ಖುಷ್ಕಿ) ಅಂತರದಲ್ಲಿ ಪ್ರತಿ ಗುಣಿಗೆ ಎರಡು ಸಸಿಗಳನ್ನು ನೆಡಬೇಕು. ದುಂಡು ಮೆಣಸಿನಕಾಯಿ ೬೦ ಸೆಂ.ಮೀ. X ೪೫ ಸೆಂ.ಮೀ. ಅಂತರದಲ್ಲಿ ನೆಡಬೇಕು. ಹವಾಮಾನವನ್ನನುಸರಿಸಿ ೪-೫ ದಿನಗಳಿಗೊಮ್ಮೆ ನೀರು ಪೂರೈಸಬೇಕು. ಉದ್ದನೆಯ ಕಾಯಿ ಗಿಡನೆಟ್ಟ ೭೫ ದಿನಗಳ ನಂತರ, ದುಂಡು ಮೆಣಸಿನಕಾಯಿ ಗಿಡನೆಟ್ಟ ೬೦ ದಿನಗಳ ನಂತರ ಫಸಲಿಗೆ ಬರುತ್ತವೆ. ಒಣ ಮೆಣಸಿನಕಾಯಿ ಪಡೆಯಲು ಕಾಯಿ ಪೂರ್ಣ ಹಣ್ಣಾಗುವವರೆಗೆ ಗಿಡಗಳಲ್ಲೇ ಬಿಟ್ಟು ನಂತರ ಕೊಯ್ಲು ಮಾಡಿ ಚೆನ್ನಾಗಿ ಒಣಗಿಸಬೇಕು. ೩. ಬದನೆ ಬದನೆ ಎಲ್ಲರಿಗೂ ಬೇಕಾದ ತರಕಾರಿ. ಇದು ಒಂದು ಸತ್ವವುಳ್ಳ ತರಕಾರಿಯೂ ಹೌದು. ವರ್ಷದ ಎಲ್ಲ ಕಾಲಗಳಲ್ಲೂ ಬೆಳೆಯಬಹುದಾದ ಬದನೆಯ ಕೆಲವು ಗಿಡಗಳಾದರೂ ಕೈತೋಟದಲ್ಲಿ ಇದ್ದರೆ ಚೆನ್ನ. ಬದನೆ ಉಷ್ಣವಲಯದ ಬೆಳೆ. ವಿವಿಧ ರೀತಿಯ ಮಣ್ಣುಗಳಲ್ಲಿ ವರ್ಷವಿಡೀ ಬೆಳೆಯಬಹುದಾಗಿದೆ. ಬೆಳೆಯಲು ಜೂನ್-ಜುಲಯ, ಸೆಪ್ಟೆಂಬರ್‌‌ಅಕ್ಟೋಬರ್‌‌ಮತ್ತು ಜನವರಿ-ಫೆಬ್ರುವರಿ ತಿಮಗಳುಗಳು ಸೂಕ್ತ. ತಳಿಗಳಲ್ಲಿ ’ಪೂಸಾಕ್ರಾಂತಿ’ ಪ್ರಮುಖವಾದುದು. ಇದೊಂದು ಸುಧಾರಿತ ತಳಿ. ದುಂಡನೆಯ ಕಾಯಿ, ಅಧಿಕ ಇಳುವರಿ ನೀಡುವ ತಳಿ. ’ಅರ್ಕಾಕುಸುಮಾಕರ್‌‌‌’ ತಳಿ ಗೊಂಚಲು ರೂಪದಲ್ಲಿ ಕಾಯಿಗಳನ್ನು ಬಿಡುವುದು. ’ಅರ್ಕಾಶಿರೀಫ್‌’ ತಳಿ ಸ್ವಲ್ಪ ಉದ್ದನೆ ಕಾಯಿಗಳನ್ನು ಬಿಡುವುದು. ಇವಲ್ಲದೆ ಈರನಗೆರೆ, ಕೆಂಗೇರಿ, ರಾಮದುರ್ಗ, ಮಾಳಾಪುರ, ಪೂಸ ಪರ್ಪಲ್, ಪರ್ಪಲ್ ರೌಂಡ್, ಅರ್ಕಾನವನೀತ್ ಇತರ ತಳಿಗಳಾಗಿವೆ. ಸಸಿಗಳನ್ನು ನೆಡುವಾಗ ೭೫ ಸೆಂ.ಮೀ. X ೬೦ ಸೆಂ.ಮೀ. ಅಂತರವನ್ನು (ಸಾಲಿನಿಂದ ಸಾಲು X ಗಿಡದಿಂದ ಗಿಡ) ನೀಡಬೇಕು. ಮಳೆಗಾಲವಿರುವಾಗ ಹೆಚ್ಚು ನೀರು ಪೂರೈಸುವ ಅಗತ್ಯತೆ ಇರುವುದಿಲ್ಲ. ಆದರೆ ಬೇಸಿಗೆಯಲ್ಲಿ ಎರಡರಿಂದ ಮೂರು ದಿನಗಳಿಗೊಮ್ಮೆ ನೀರು ಕೊಡಬೇಕಾಗುವುದು. ಸತತವಾಗಿ ಒಂದೇ ಸ್ಥಳದಲ್ಲಿ ಬದನೆ ಬೆಳೆಯುವುದು ಸೂಕ್ತವಲ್ಲ. ಆಗಾಗ ಬೆಳೆಗಳನ್ನು ಬದಲಾಯಿಸಬೇಕು. ಸಸಿಗಳನ್ನು ನೆಟ್ಟ ಮೇಲೆ ಸುಮಾರು ಮೂರು ತಿಂಗಳಲ್ಲಿ ಕೊಯ್ಲು ಮಾಡಬಹುದು. ಕಾಯಿಗಳನ್ನು ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡುವುದು ಒಳ್ಳೆಯದು. ಮೂರು ತಿಂಗಳು ಕಾಲ ಕೊಯ್ಲು ಮುಂದುವರೆಸಬಹುದು. ಸುಧಾರಿತ ತಳಿಗಳು ಹೆಚ್ಚಿಗೆ ಇಳುವರಿ ನೀಡುವುವು. ಕಾಯಿ ಇನ್ನೂ ಎಳಸಿರುವಾಗಲೇ ಕೊಯ್ಲು ಮಾಡಬೇಕು. ಇಲ್ಲವಾದರೆ ಬಲಿತು ಹಣ್ಣಾದರೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ೪. ಸೌತೇಕಾಯಿ ಸೌತೆಯನ್ನು ನೇರವಾಗಿ ಸೇವನೆ ಮಾಡಬಹುದು. ಇದು ದೇಹಕ್ಕೆ ತಂಪು ಒದಗಿಸುತ್ತದೆ ಮತ್ತು ಆರೋಗ್ಯಕರವೂ ಹೌದು. ಇದನ್ನು ಪಲ್ಯ ಹಾಗೂ ಉಪ್ಪಿನಕಾಯಿ ತಯಾರಿಕೆಯಲ್ಲಿ ಹೇರಳವಾಗಿ ಬಳಸುವರು. ಇದು ಉಷ್ಣ ಪ್ರದೇಶದಲ್ಲಿ ಫಲಕಾರಿಯಾಗಿ ಬೆಳೆಯುವುದು. ಅತಿ ಉಷ್ಣಾಂಶವಿರುವ ಪ್ರದೇಶ ಸೂಕ್ತವಲ್ಲ. ಜೂನ್-ಜುಲೈ ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಬಿತ್ತನೆಗೆ ಸೂಕ್ತ ಸಮಯ. ’ಜಪಾನೀಸ್ ಲಾಂಗ್ ಗ್ರೀನ್’ ಎಂಬುದು ಸೌತೆಯ ಎಂದು ಉತ್ತಮ ತಳಿ. ಅದು ಅಲ್ಪಾವಧಿ ತಳಿ. ತಳಿಯ ಹೆಸರೇ ಸೂಚಿಸುವಮತೆ ಕಾಯಿಗಳು ಉದ್ದವಾಗಿರುವುವು. ’ಚೈನಾ’ ತಳಿ ಉತ್ತಮ ಗುಣಮಟ್ಟ ಹೊಂದಿದ್ದು, ದೀರ್ಘಾವಧಿಯ ತಳಿಯಾಗಿದೆ. ಸೌತೆಯು ಬಳ್ಳಿ ಸಸ್ಯ. ಸುಮಾರು ೨ ಮೀ. ಅಂತರದ ಸಾಲುಗಳಲ್ಲಿ ೭೫ ಸೆಂ.ಮೀ.ಗೆ ಒಂದರಂತೆ ಬಳ್ಳಿ ಬೆಳೆಸಬಹುದು. ೪-೫ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕಾಗುವುದು. ನೀರು ಪೂರೈಕೆ ಮಣ್ಣು ಮತ್ತು ಹವಾಗುಣವನ್ನವಲಂಬಿಸಿರುತ್ತದೆ. ಬೀಜ ಬಿತ್ತಿದ ಒಂದೂವರೆಯಿಂದ ಎರಡು ತಿಂಗಳಲ್ಲಿ ಬಳ್ಳಿಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಎಳೆಯ ಕಾಯಿಗಳು ಒಂದು ಹಂತ ತಲುಪಿದ ಕೂಡಲೇ ಕೊಯ್ಲು ಮಾಡಬೇಕು. ಇಲ್ಲವಾದರೆ ಬಳ್ಳಿಗಳಲ್ಲೇ ಬಲಿತು ಹಣ್ಣಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದಿಲ್ಲ. ೫. ಹಾಗಲಕಾಯಿ ಹಾಗಲಕಾಯಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಇದು ಔಷಧೀಯ ಗುಣಗಳನ್ನು ಹೊಂದಿದೆ. ವಿಶೇಷವಾಗಿ ಮಧುಮೇಹ ರೋಗಿಗಳು ಇದನ್ನುಪಯೋಗಿಸುವರು. ಇದಕ್ಕೆ ಆಶ್ರಯವಾಗಿ ಹಬ್ಬಲು ಅವಕಾಶ ಮಾಡಿದರೆ ಉತ್ತಮ ಇಳುವರಿ ನೀಡುವುದು. ಹಾಗಲಕಾಯಿ ಅಧಿಕ ಉಷ್ಣ ಮತ್ತು ಶೀತವಲಯದ ಪ್ರದೇಶಗಳನ್ನು ಹೊರತು ಪಡಿಸಿದರೆ, ಉಳಿದೆಡೆ ಚೆನ್ನಾಗಿ ಬೆಳೆಯಬಹುದು. ಬೆಳೆ ಆರಂಭಿಸಲು ಜೂನ್-ಜುಲೈ ಮತ್ತು ಜನವರಿ – ಫೆಬ್ರುವರಿ ತಿಂಗಳುಗಳು ಸೂಕ್ತವಾಗಿವೆ. ’ಅರ್ಕಾಹರಿತ್’ ತಳಿಯು ಚಿಕ್ಕಗಾತ್ರದ ಕಾಯಿಗಳನ್ನು ಮತ್ತು ’ಕೊಯಂಬತ್ತೂರ್‌‌ಲಾಂಗ್’ ತಳಿಯು ಉದ್ದನೆಯ ಕಾಯಿಗಳನ್ನು ಬಿಡುತ್ತವೆ. ’ಪೂಸಾದೋ ಮೌಸಮಿ’ ಮತ್ತೊಂದು ಉತ್ತಮ ತಳಿ. ಇದು ಮಳೆ ಮತ್ತು ಬೇಸಿಗೆ ಕಾಲಗಳೆರಡರಲ್ಲೂ ಯಶಸ್ವಿಯಾಗಿ ಫಲ ನೀಡುವುದು. ಬೀಜಗಳನ್ನು ಸುಮಾರು ೧೨ ಗಂಟೆಗಳ ಕಾಲ ನೀರಿನಲ್ಲಿ ನೆನಸಿ ಬಿತ್ತನೆಗೆ ಉಪಯೋಗಿಸಬೇಕು. ೬೦ ಘನ ಸೆಂ.ಮೀ. ಅಳತೆಯ ಗುಂಡಿಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ ನಾಟಿ ಮಾಡಬಹುದು. ೪-೫ ದಿನಗಳಿಗೊಮ್ಮೆ ನೀರು ಪೂರೈಸುತ್ತಿರಬೇಕು. ಇದು ಮಣ್ಣು ಮತ್ತು ಹವಾಮಾನವನ್ನು ಅವಲಂಬಿಸಿರುತ್ತದೆ. ಎಳೆಯ ಕಾಯಿಗಳನ್ನು ಮಾತ್ರ ಕೊಯ್ಲು ಮಾಡಿ ಉಪಯೋಗಿಸಬೇಕು. ಕಾಯಿಗಳು ಬಲಿತು ಹಣ್ಣಾಗುವ ಹಂತ ತಲುಪಿದರೆ ರುಚಿ ಕಳೆದುಕೊಳ್ಳುತ್ತವೆ. ಬೀಜ ಬಿತ್ತಿದೆ ಎರಡು ತಿಂಗಳ ನಂತರ ಫಸಲು ಆರಂಭವಾಗುವುದು. ೬. ತಿಂಗಳ ಹುರುಳಿ ಇದನ್ನು ’ತಿಂಗಳ ಅವರೆ’ ಎಂತಲೂ ಕರೆಯುವರು. ಇದು ದ್ವಿದಳ ಧಾನ್ಯ ಗುಂಪಿಗೆ ಸೇರಿದ ಅಲ್ಪಾವಧಿ ತರಕಾರಿ ಬೆಳೆ. ಎಳೆಯದಾಗಿರುವಾಗ ಕಾಯಿಗಳನ್ನು ತುಂಡಿರಿಸಿ ಮತ್ತು ಬಲಿತ ಮೇಲೆ ಕಾಳುಗಳನ್ನು ಬೇರ್ಪಡಿಸಿ ತರಕಾರಿಯಾಗಿ ಉಪಯೋಗಿಸುತ್ತಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಬೆಳೆಯುತ್ತಾರೆ. ೨೫ ಸೆ. ರಿಂದ ೩೦ ಸೆ. ಉಷ್ಣಾಂಶ ಸೂಕ್ತ. ಜೂನ್-ಜುಲೈ ತಿಂಗಳು ಬೆಳೆಯ ಆರಂಭಕ್ಕೆ ಒಳ್ಳೆಯ ಸಮಯ. ಬೇಸಿಗೆಯಲ್ಲೂ ಬೆಳೆಯಬಹುದಾಗಿದೆ. ತಳಿಗಳಲ್ಲಿ ’ಪೊದೆ’ ಮತ್ತು ’ಹಬ್ಬುವ’ ವಿಧಗಳಿವೆ. ಪೊದೆ ಜಾತಿಯಲ್ಲಿ ’ಅರ್ಕಾಕೋಯಲ್’, ’ಬೆಂಗಳೂರ್‌ಬೀನ್ಸ್’, ’ಕಂಟೆಂಡರ್‌‌’, ’ಟೆಂಡರ್‌‌ಗ್ರೀನ್’ ಇತ್ಯಾದಿಗಳು. ’ಕೆಂಟುಕಿ ವಂಡರ್‌’ ಮತ್ತು ’ಬ್ಲೂಲೇಕ್’ ತಳಿಗಳು ಹಬ್ಬುವ ಜಾತಿಗೆ ಸೇರಿದವುಗಳಾಗಿವೆ. ಇದು ಅಧಿಕ ಇಳುವರಿ ನೀಡುವ ತಳಿಯಾಗಿದ್ದು, ಕಾಯಿಗಳಲ್ಲಿ ಹೆಚ್ಚಿಗೆ ನಾರು ಇರುವುದಿಲ್ಲ. ಪೊದೆ ತಳಿಗಳಿಗೆ ೩೦ ಸೆಂ.ಮೀ. X ೧೫ ಸೆಂ.ಮೀ. ಮತ್ತು ಹಬ್ಬುವ ತಳಿಗಳಿಗೆ ೬೦ ಸೆಂ.ಮೀ. X ೩೦ ಸೆಂ.ಮೀ. ಅಂತರ ಕೊಟ್ಟು ಬೀಜ ಬಿತ್ತನೆ ಮಾಡಬಹುದು. ಗಿಡಗಳಿಗೆ ಮಣ್ಣೇರಿಸಬೇಕು. ಹಬ್ಬುವ ತಳಿಗಳಿಗೆ ಕೋಲಿನಾಸರೆ ಕೊಟ್ಟು ಹಬ್ಬಲು ಅವಕಾಶ ಮಾಡಬೇಕು. ಹದ ನೋಡಿಕೊಂಡು ವಾರದಲ್ಲಿ ಎರಡು ಬಾರಿ ನೀರು ಪೂರೈಸಬೇಕು. ಬಿತ್ತನೆ ಮಾಡಿದ ನಂತರ ಪೊದೆ ತಳಿಗಳು ಹಬ್ಬುವ ಪೊದೆ ತಳಿಗಳಿಗಿಂತ ಎರಡು ತಿಂಗಳು ತಡವಾಗಿ ಕೊಯ್ಲಿಗೆ ಬರುತ್ತವೆ. ಕಾಯಿ ಬಲಿಯುವ ಮುನ್ನವೇ ಕೊಯ್ಲು ಮಾಡಬೇಕು. ೭. ಗೋರಿಕಾಯಿ ಇದಕ್ಕೆ ಚೌಳೀಕಾಯಿ ಎಂಬ ಹೆಸರಿದೆ. ಗಿಡವಾಗಿ ಬೆಳೆಯುವ ಇದರ ಕಾಯಿಗಳನ್ನು ಪಲ್ಯ ಮಾಡಲು ಹೆಚ್ಚಾಗಿ ಉಪಯೋಗಿಸುವರು. ಇದು ಗೊಂಚಲು ಗೊಂಚಲಾಗಿ ಕಾಯಿ ಬಿಡುವ ಒಂದು ರುಚಿಕರವಾದ ತರಕಾರಿ. ಖುಷ್ಕಿ ಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯುವ ಶಕ್ತಿ ಹೊಂದಿರುವುದರಿಂದ ನಮ್ಮ ರಾಜ್ಯದ ವಿವಿಧೆಡೆ ಬೆಳೆಯಬಹುದಾಗಿದೆ. ಇದನ್ನು ಬೆಳೆಯಲು ಅಧಿಕ ಉಷ್ಣಾಂಶ ಬೇಕು. ಜೂನ್-ಜುಲೈ ತಿಂಗಳುಗಳು ಬಿತ್ತನೆಗೆ ಸೂಕ್ತ. ಬೇಸಿಗೆಯಲ್ಲೂ ಬೆಳೆಯಬಹುದಾಗಿದೆ. ಗೋರಿಕಾಯಿಯಲ್ಲಿ ’ಪೂಸಾ ಮೌಸಮಿ’ ಮತ್ತು ’ಪೂಸಾ ನವಬಹಾರ್‌‌’ ಎಂಬ ಎರಡು ಉತ್ತಮ ತಳಿಗಳಿದ್ದು ಅಧಿಕ ಇಳುವರಿ ನೀಡುವುವು. ಗುಣಿಗಳಲ್ಲಿ ಬೀಜ ಬಿತ್ತನೆ ಮಾಡುವುದು ಒಳ್ಳೆಯದು. ಇದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುವುದು. ೪೫ ಸೆಂ.ಮೀ. ಅಂತರದಲ್ಲಿ ಸಾಲುಗಳನ್ನು ಬಿಟ್ಟು ಸಾಲಿನಲ್ಲಿ ೨೨ ಸೆಂ.ಮೀ. ಗೆ ಒಂದರಂತೆ ಗುಣಿಗಳನ್ನು ಮಾಡಿ ಬೀಜ ಬಿತ್ತಬೇಕು. ವಿಶೇಷವಾಗಿ ಕಾಳಜಿ ವಹಿಸುವ ಅವಶ್ಯಕತೆಯಿಲ್ಲ. ಗಿಡಗಳಿಗೆ ಮಣ್ಣೇರಿಸಬೇಕು. ಹವಾಮಾನವನ್ನವಲಂಬಿಸಿ ಎಂಟು ದಿನಗಳಿಗೊಮ್ಮೆ ನೀರು ಪೂರೈಸಬೇಕು. ಬಿತ್ತನೆ ಮಾಡಿದ ಒಂದೂವರೆ ತಿಂಗಳಿಗೆ ಕೊಯ್ಲು ಪ್ರಾರಂಭವಾಗುತ್ತದೆ. ಎಳೆಯವಾದ ಕಾಯಿಗಳನ್ನು ಮಾತ್ರ ಕೊಯ್ಲು ಮಾಡಬೇಕು. ಗೋರಿಕಾಯಿ ಸಹ ದ್ವಿದಳ ಧಾನ್ಯ ಗುಂಪಿಗೆ ಸೇರಿದ ತರಕಾರಿಯಾಗಿದೆ. ೮. ಮೂಲಂಗಿ ಮೂಲಂಗಿ ಬೇರು ತರಕಾರಿ. ಮಣ್ಣಿನಲ್ಲಿ ಬೆಳೆದ ಗೆಡ್ಡೆ ಭಾಗ ಮತ್ತು ಮೇಲೆ ಬೆಳೆದ ಸೊಪ್ಪು (ಎಲೆಗಳು) ಎರಡನ್ನೂ ತರಕಾರಿಯಾಗಿ ಉಪಯೋಗಿಸಲಾಗುವುದು. ಮೂಲಂಗಿ ಔಷಧೀಯ ಗುಣಗಳನ್ನು ಹೊಂದಿದೆ. ಮೂಲಂಗಿ ಯಶಸ್ವಿಯಾಗಿ ಬೆಳೆಯಲು ತಂಪಿನಿಂದ ಕೂಡಿದ ವಾತಾವರಣ ಮತ್ತು ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಬಿತ್ತನಗೆ ಜೂನ್-ಜುಲೈ, ಅಕ್ಟೋಬರ್‌‌ನವೆಂಬರ್‌‌ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಸೂಕ್ತ. ತಳಿಗಳಲ್ಲಿ ’ಜಪಾನೀಸ್ ವೈಟ್’ ಸುಮಾರು ೨೨ ಸೆಂ.ಮೀ. ಉದ್ದದ ಗೆಡ್ಡೆಗಳನ್ನು ಕೊಡುವುದು ಮತ್ತು ಇದರ ಬಿತ್ತನೆಗೆ ಅಕ್ಟೋಬರ್‌ನವೆಂಬರ್‌ತಿಂಗಳುಗಳು ಸೂಕ್ತ ಕಾಲ. ಇತರ ತಳಿಗಳೆಂದರೆ ’ಅರ್ಕಾ ನಿಶಾಂತ್’ ’ವೈಟ್ ಐಸಿಕಲ್’ ಇತ್ಯಾದಿ. ಬೀಜ ಬಿತ್ತಲು ೩ ಸೆಂ.ಮೀ. ಅಂತರದಲ್ಲಿ ಬೋದುಗಳನ್ನು ಮಾಡಿ ಪ್ರತಿ ೧೦ ಸೆಂ.ಮೀ. ಗೊಂದರಂತೆ ಬೀಜಗಳನ್ನು ಬಿತ್ತಬೇಕು. ಹವಾಗುಣವನ್ನನುಸರಿಸಿ ನೀರು ಪೂರೈಕೆ ಮಾಡಬೇಕು. ಎಳೆಯ ಮೂಲಂಗಿ ತಿನ್ನಲು ರುಚಿಕರ. ಬೀಜ ಬಿತ್ತಿದ ಸುಮಾರು ೫-೬ ವಾರಗಳಲ್ಲಿ ಕೊಯ್ಲು ಮಾಡಬಹುದು. ೯. ಗಜ್ಜರಿ (ಗಾಜು ಗಡ್ಡೆ) ಗಜ್ಜರಿ ಬೇರು ತರಕಾರಿ. ಮೂಲಂಗಿ ಗೆಡ್ಡೆಯ ಆಕಾರ ಹೊಂದಿರುವ ಇದು ಗಾತ್ರದಲ್ಲಿ ಚಿಕ್ಕದು. ಅಡುಗೆಯಲ್ಲಿ ಬಹುಬಗೆಯಾಗಿ ಗಜ್ಜರಿಯನ್ನು ಉಪಯೋಗಿಸುವುದುಂಟು. ಗಜ್ಜರಿಯನ್ನು ಹೆಚ್ಚಿಗೆ ಉಪಯೋಗಿಸುವುದರಿಂದ ಕಣ್ಣಿನ ಆರೋಗ್ಯ ಹಾಗೂ ದೃಷ್ಟಿ ಉತ್ತಮವಾಗುವುದು ಮತ್ತು ದಂತ ರಕ್ಷಣೆಗೂ ಒಳ್ಳೆಯದು. ಮೂಲಂಗಿಯಂತೆ ಗಜ್ಜರಿ ಬೆಳೆಗೂ ತಂಪಿನಿಂದ ಕೂಡಿದ ವಾತಾವರಣ ಬೇಕು. ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ವರ್ಷವಿಡೀ ಬೆಳೆಯಬಹುದು. ಜೂನ್-ಜುಲೈ, ಅಕ್ಟೋಬರ್‌‌ನವೆಂಬರ್‌ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಬೆಳೆ ಬೆಳೆಯಲು ಸೂಕ್ತ. ಗಜ್ಜರಿಯಲ್ಲಿ ಕೆಲವು ಉತ್ತಮ ತಳಿಗಳಿವೆ. ಅವುಗಳಲ್ಲಿ ’ಪೂಸಾ ಕೇಸರ್‌’, ’ಚೆಂಟನಿ’ ಮುಖ್ಯವಾದುವುಗಳು. ’ಪೂಸಾ ಕೇಸರ್‌‌’ ತಳಿ ಅಧಿಕ ಇಳುವರಿ ನೀಡುವುದು ಹಾಗೂ ಕೆರೋಟಿನ್ ಅಂಶ ಹೆಚ್ಚಾಗಿರುತ್ತದೆ. ’ಚೆಂಟನಿ’ ತಳಿ ಸಹ ಉತ್ತಮವಾದುದು. ಇದು ದೊಡ್ಡ ಗಾತ್ರದ ಗೆಡ್ಡೆಗಳನ್ನು ಬಿಡುವುದು. ಮಡಿಗಳಲ್ಲಿ ಗಜ್ಜರಿ ಬೆಳೆಸಬಹುದು. ಹದಗೊಳಿಸಿದ ಮಡಿಗಳಲ್ಲಿ ೨೦ ಸೆಂ.ಮೀ. ಅಂತರದ ಸಾಲುಗಳಲ್ಲಿ ಬೀಜ ತೆಳುವಾಗಿ ಬಿತ್ತನೆ ಮಾಡಬೇಕು. ಸಸಿಗಳು ಮೇಲೇಳುತ್ತಿದ್ದಂತೆ. ೧೦ ಸೆಂ.ಮೀ. ಅಂತರದಲ್ಲಿ ಒಂದೊಂದು ಸಸಿಯನ್ನು ಉಳಿಸಿಕೊಂಡು ಉಳಿದವುಗಳನ್ನು ಕಿತ್ತುಹಾಕಬೇಕು. ಅವಶ್ಯವೆನಿಸಿದಾಗ ನೀರು ಪೂರೈಸಬೇಕು. ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಕೊಯ್ಲಿನ ಸೂಚನೆ, ಬಿತ್ತನೆ ಮಾಡಿದ ಸುಮಾರು ಮೂರು ತಿಂಗಳಿಗೆ ಕೊಯ್ಲು ಮಾಡಬಹುದು. ೧೦. ಈರುಳ್ಳಿ ಪ್ರಮುಖ ಗೆಡ್ಡೆ ತರಕಾರಿಗಳಲ್ಲಿ ಈರುಳ್ಳಿ ಮುಖ್ಯವಾದುದು. ಪ್ರತಿ ದಿನ ಎಲ್ಲರೂ ಉಪಯೋಗಿಸುವ ತರಕಾರಿ ಎಂದರೆ ಈರುಳ್ಳಿ. ಇದರ ಮೇಲ್ಭಾಗದ ಸೊಪ್ಪು ಮತ್ತು ಗೆಡ್ಡೆಗಳ ಎರಡೂ ಭಾಗಗಳನ್ನು ಉಪಯೋಗಿಸುತ್ತಾರೆ. ಈರುಳ್ಳಿಯನ್ನು ವರ್ಷವಿಡೀ ಬೆಳೆಯಬಹುದು. ಜೂನ್-ಜುಲೈ, ಸೆಪ್ಟೆಂಬರ್‌‌ಅಕ್ಟೋಬರ್‌ಮತ್ತು ಜನವರಿ-ಫೆಬ್ರವರಿ ತಿಂಗಳುಗಳು ಬೇಸಾಯ ಆರಂಭಿಸಲು ಸೂಕ್ತವಾದ ಸಮಯ. ತಳಿಗಳಲ್ಲಿ ’ಬಳ್ಳಾರಿ ರೆಡ್’ ಉತ್ತಮ ಗುಣಗಳನ್ನು ಹೊಂದಿದೆ. ಗೆಡ್ಡೆಗಳ ಬಣ್ಣ ಕೆಂಪು. ಮತ್ತೊಂದು ’ಅರ್ಕಾಪ್ರಗತಿ’ ತಳಿಯನ್ನು ಹಲವಾರು ದಿನಗಳವರೆಗೆ ಕೆಡದಂತೆ ಇಡಬಹುದು. ಇವಲ್ಲದೇ ’ಅರ್ಕಾನಿಕೇತನ್’, ’ಅರ್ಕಾಕಲ್ಯಾಣ್‌’ ಬೇಸಾಯದಲ್ಲಿವೆ. ಚೌಕಾಕಾರದ ಮಡಿಗಳಲ್ಲಿ ಬೀಜ ಬಿತ್ತನೆ ಮಾಡಿ ಸಸಿಗಳು ಮೇಲೇಳಾಗುತ್ತಿದ್ದಂತೆ ಹೆಚ್ಚುವರಿ ಸಸಿಗಳನ್ನು ತೆಗೆದು ತೆಳುಗೊಳಿಸಬೇಕು. ಕೈತೋಟದಲ್ಲಿನ ಮಡಿಗಳಲ್ಲಿ ಬಿತ್ತನೆಯ ಈ ಕ್ರಮ ಅನುಕೂಲಕರ. ಅವಶ್ಯಕತೆ ನೋಡಿಕೊಂಡು ನೀರು ಪೂರೈಕೆ ಮಾಡಬೇಕು. ಎಲೆಗಳು ಬಾಡುತ್ತ ಹಳದಿ ಬಣ್ಣಕ್ಕೆ ತಿರುಗುತ್ತಿದ್ದಂತೆ ಕೊಯ್ಲು ಆರಂಭಿಸಬಹುದು. ನಂತರ ನೆರಳಿನಲ್ಲಿ ಕೆಲವು ದಿನಗಳವರೆಗೆ ಒಣಗಿಸಿದರೆ ಶೇಖರಣಾ ಸಾಮರ್ಥ್ಯ ಹೆಚ್ಚುವುದು. ಮೊಳಕೆ ಬಂದ ಗೆಡ್ಡೆಗಳು ಮತ್ತು ಗಾಯಗಳಾದುವುಗಳನ್ನು ಪ್ರತ್ಯೇಕಿಸಬೇಕು. ೧೧. ಬೆಳ್ಳುಳ್ಳಿ ದಿನ ನಿತ್ಯದ ಅಡುಗೆಯಲ್ಲಿ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಒಂದು ಉತ್ತಮ ಗೆಡ್ಡೆ ತರಕಾರಿ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಈರುಳ್ಳಿಯಂತೆ ಇದನ್ನು ನೀರು ಬಸಿದುಹೋಗುವ ಮಣ್ಣಿನಲ್ಲಿ ಬೆಳೆಯುವರು. ಸೆಪ್ಟೆಂಬರ್‌ಅಕ್ಟೋಬರ್‌ತಿಂಗಳುಗಳು ಬಿತ್ತನೆಗೆ ಸೂಕ್ತ ಸಮಯ. ಬೆಳ್ಳುಳ್ಳಿಯಲ್ಲಿ ’ರಾಜೆಲ್ಲೆ ಗೆಡ್ಡೆ’ ಎಂಬ ತಳಿ ಜನಪ್ರಿಯವಾಗಿದೆ. ಅನುಕೂಲಕರ ರೀತಿಯಲ್ಲಿ ಮಡಿಗಳನ್ನು ತಯಾರಿಸಿ ಗೆಡ್ಡೆಗಳನ್ನು ಬಿಡಿಸಿ ನೆಡಬಹುದು. ಅವಶ್ಯಕತೆ ನೋಡಿಕೊಂಡು ನೀರು ಪೂರೈಕೆ ಮಾಡಬೇಕು. ಮೇಲಿನ ಎಲೆಗಳು ಬಾಡುತ್ತಾ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬಹುದು. ನಂತರ ಗೆಡ್ಡೆಗಳನ್ನು ನೆರಳಿನಲ್ಲಿ ಹರಡಿ ಒಣಗಿಸಬೇಕು. ೧೨. ಕೋಸು ತರಕಾರಿಗಳು ಕೋಸು ತರಕಾರಿಗಳಲ್ಲಿ ’ಎಲೆಕೋಸು’, ’ಹೂವು ಕೋಸು’ ಮತ್ತು ’ಗೆಡ್ಡೆ ಕೋಸು’ ಎಂಬ ಮೂರು ಬಗೆ ಬೆಳೆಗಳು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವರು. ಆದರೆ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲೂ ಇವುಗಳ ಉಪಯೋಗ ಹೆಚ್ಚಾಗುತ್ತಿದೆ. ಕೋಸು ತರಕಾರಿಗಳನ್ನು ಬೆಳೆಯಲು ತಂಪಾದ ವಾತಾವರಣ ಬೇಕು. ಹೀಗಾಗಿ ಚಳಿಗಾಲದಲ್ಲಿ ಈ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಬಹುದು. ಈ ಬಳೆಗೆ ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಎಲೆಕೋಸು : ಇದರಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತಳಿಗಳಿವೆ. ’ಪ್ರೈಡ್ ಆಪ್ ಇಂಡಿಯಾ’ ಮತ್ತು ’ಗೋಲ್ಡನ್ ಏಕರ್‌‌’ ಅಲ್ಪಾವಧಿ ತಳಿಗಳು. ಇವು ಎರಡರಿಂದ ಎರಡೂವರೆ ತಿಂಗಳಿಗೆ ಕೊಯ್ಲಿಗೆ ಬರುತ್ತವೆ ಹಾಗೂ ’ಲೇಟ್ ಡ್ರಮ್ ಹೆಡ್’ ಮತ್ತು ’ಡ್ಯಾನಿಷ್ ಬಾಲ್ ಹೆಡ್’ ದೀರ್ಘಾವಧಿ ತಳಿಗಳು. ಇವು ಸುಮಾರು ನಾಲ್ಕು ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ೪೫ ಸೆಂ.ಮೀ. X ೧೫ ಸೆಂ.ಮೀ. ಅಂತರದಲ್ಲಿ ಬೋದುಗಳ ಮೇಲೆ ನಾಲ್ಕು ವಾರಗಳ ಸಸಿಗಳನ್ನು ನಾಟಿ ಮಾಡಬಹುದು. ಅವಶ್ಯಕತೆಗನುಸಾರವಾಗಿ ನೀರು ಪೂರೈಕೆ ಮಾಡಬಹುದಾಗಿದೆ ಮತ್ತು ತಳಿಗಳ ಅವಧಿಗನುಸಾರವಾಗಿ ಕೊಯ್ಲು ಮಾಡಬೇಕಾಗುವುದು. ಹೂವು ಕೋಸು : ಹೂವು ಕೋಸು ಬೆಳೆಯಲ್ಲಿ ಮೂರು ಬಗೆಯ ತಳಿಗಳಿವೆ. ಕೊಯ್ಲು ಅವಧಿಗನುಸರಿಸಿ ವಿಂಗಡಣೆ ಮಾಡಲಾಗಿದೆ. (i) ಅಲ್ಪಾವಧಿ ತಳಿಗಳು : ೬೦-೮೦ ದಿನಗಳಲ್ಲಿ ಕೊಯ್ಲಿಗೆ ಬರುತ್ತವೆ. ಉದಾ| ಅರ್ಲಿ ಮತ್ತು ಸ್ನೋಬಾಲ್. (ii) ಮಧ್ಯಮಾವಧಿ ತಳಿಗಳು : ೮೦-೧೦೦ ದಿನಗಳಲ್ಲಿ ಕೊಯ್ಲಿಗೆ ಬರುತ್ತವೆ. ಉದಾ|| ಸ್ನೋ ಬಾಲ್. (iii) ದೀರ್ಘಾವಧಿ ತಳಿಗಳು : ೧೦೦-೧೨೦ ದಿನಗಳಲ್ಲಿ ಕೊಯ್ಲಿಗೆ ಬರುತ್ತವೆ. ಉದಾ|| ಸ್ನೋ ಬಾಲ್ -೧೬. ನಾಟಿಗೆ ಬೋದುಗಳನ್ನು ತಯಾರಿಸಬೇಕು. ಅಲ್ಪಾವಧಿ ತಳಿಗಳಿಗೆ ೪೫ X ೪೨ ಸೆಂ.ಮೀ. ಅಂತರ ನೀಡಿ ಸಸಿಗಳನ್ನು ನಾಟಿ ಮಾಡಬೇಕು. ಮಧ್ಯಮಾವಧಿ ಮತ್ತು ದೀರ್ಘಾವಧಿ ತಳಿಗಳಿಗೆ ೬೦ X ೪೫ ಸೆಂ.ಮೀ. ಅಂತರ ನೀಡಿ ಸಸಿಗಳನ್ನು ನಾಟಿ ಮಾಡಬೇಕು. ಅವಶ್ಯಕತೆಯನ್ನನುಸರಿಸಿ ನೀರು ಪೂರೈಕೆ ಮಾಡಬೇಕು ಮತ್ತು ತಳಿಗಳ ಅವಧಿಗನುಸಾರವಾಗಿ ಕೊಯ್ಲು ಮಾಡಬೇಕು. ಗೆಡ್ಡೆಕೋಸು : ಗೆಡ್ಡೆಕೋಸಿನಲ್ಲಿ ’ವೈಚ್ ವೆಯೆನ್ನಾ’ ಮತ್ತು ’ಪರ್ಪಲ್ ವಿಯೆನ್ನಾ’ ಪ್ರಮುಖವಾದ ತಳಿಗಳು. ಜೂನ್-ಜುಲೈ ತಿಂಗಳಲ್ಲಿ ಬೆಳೆಯಬಹುದು. ಬೋದುಗಳನ್ನು ತಯಾರಿಸಿ ೩೦ ಸೆಂ.ಮೀ. X ೨೨ ಸೆಂ.ಮೀ. ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ೩-೪ ವಾರಗಳ ಸಸಿಗಳನ್ನು ನಾಟಿಗೆ ಬಳಸಬಹುದು. ನಾಟಿ ಮಾಡಿದ ನಂತರ ೨-೩ ತಿಂಗಳಲ್ಲಿ ಕೊಯ್ಲು ಮಾಡಬಹುದು. ೧೩. ಸೊಪ್ಪು ತರಕಾರಿಗಳು ಸೊಪ್ಪು ತರಕಾರಿಗಳು ಸತ್ವಭರಿತವಾಗಿವೆ. ಮಕ್ಕಳು, ಗರ್ಭಿಣೆಯರು, ವಯಸ್ಸಾದವರು ಹೆಚ್ಚಾಗಿ ಸೊಪ್ಪಿನ ತರಕಾರಿಗಳನ್ನು ಬಳಸುವುದು ಆರೋಗ್ಯಕ್ಕೆ ಹಿತಕರ. ಸೊಪ್ಪುಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೆರೋಟಿನ್ ಹಾಗೂ ಅನೇಕ ಜೀವಸತ್ವಗಳು ಸಿಗುತ್ತವೆ. ಇವು ಕಣ್ಣುಗಳ ಆರೋಗ್ಯ ಕಾಪಾಡುವುವು. ಕೈತೋಟದಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಯುವುದು ಸುಲಭ. ಸಮತೋಲನ ಆಹಾರದಲ್ಲಿ ಸೊಪ್ಪುಗಳ ಪಾತ್ರ ಬಹಳ ಮಹತ್ವದ್ದು. ಕೊತ್ತಂಬರಿ ಸೊಪ್ಪು : ಅಡುಗೆಗೆ ಕೊತ್ತಂಬರಿ ಸೊಪ್ಪು ನಿತ್ಯವೂ ಬೇಕು. ಇದು ಅಡುಗೆಗೆ ವಿಶಿಷ್ಟವಾದ ರುಚಿ ಕೊಡುವುದಲ್ಲದೇ ತಯಾರಿಸಿದ ಪದಾರ್ಥಗಳು ಸುವಾಸನೆ ಬೀರುತ್ತವೆ. ಶಾಖಾಹಾರಿ ಮತ್ತು ಮಾಂಸದ ಹಲವಾರು ಬಗೆಯ ತಯಾರಿಕೆಗಳಲ್ಲಿ ಕೊತ್ತಂಬರಿಯ ಉಪಯೋಗ ಹೆಚ್ಚು. ಕೊತ್ತಂಬರಿ ಸಸ್ಯದ ಕಾಂಡ, ಎಲೆ ಮತ್ತು ಬೀಜ ಮೂರನ್ನೂ ಸಂಪೂರ್ಣವಾಗಿ ಉಪಯೋಗಿಸುತ್ತಾರೆ. ತಂಪು ಹವಾಮಾನದಲ್ಲಿ ಈ ಬೆಳೆ ಚೆನ್ನಾಗಿ ಬೆಳೆಯುವುದು ಹಾಗೂ ವರ್ಷದ ಎಲ್ಲ ಕಾಲಗಳಲ್ಲಿ ಬೆಳೆಯಬಹುದು. ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಬೆಳೆಯುವುದು ಸೂಕ್ತ. ಗ್ವಾಲಿಯರ್‌‌, ಸಿ.ಎಸ್.-೬, ಸಿ.ಬಿ.-೨ ಎಂಬ ಕೆಲವು ಉತ್ತಮ ತಳಿಗಳಿವೆ. ಸಿಂಪೋ ಎಸ್-೩೩ ಎಂಬ ತಳಿ ಅತ್ಯುತ್ತಮ ಗುಣಗಳನ್ನು ಹೊಂದಿದೆ. ಈ ತಳಿಯಿಂದ ದೊಡ್ಡ ಗಾತ್ರದ ಸಸ್ಯಗಳನ್ನು ಬೆಳೆಯಬಹುದಲ್ಲವೇ ಸೊಪ್ಪಿನ ಪ್ರಮಾಣ ಕೂಡಾ ಹೆಚ್ಚು. ಬಿತ್ತನೆಗೆ ಮೊದಲು ಬೀಜಗಳನ್ನು ಹೋಳು ಮಾಡಿ ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ, ನಂತರ ನೆರಳಿನಲ್ಲಿ ಒಣಗಿಸಿ, ಬೀಜೋಪಚಾರ ಮಾಡುವುದು ಒಳ್ಳೆಯದು. ಒಂದು ಕಿ.ಗ್ರಾಂ ಬೀಜಕ್ಕೆ ೨.೫ ಗ್ರಾಂ ಥೈರಾಮ್ ಔಷಧಿ ಬೆರೆಸಿ ಉಪಚರಿಸಬೇಕು. ನಂತರ ಮಡಿಗಳಲ್ಲಿ ಹರಡಿ, ಮೇಲೆ ತೆಳು ಮಣ್ಣಿನ ಪದರ ಹಾಕಿ ನೀರು ಪೂರೈಸುತ್ತಿರಬೇಕು. ಮೆಣಸಿನಕಾಯಿ ಹಾಗೂ ಇನ್ನಿತರ ಕೆಲವು ತರಕಾರಿ ಬೆಳೆಗಳಲ್ಲಿ ಮಿಶ್ರ ಬೆಳೆಯಾಗಿಯೂ ಕೊತ್ತಂಬರಿಯನ್ನು ಬೆಳೆಯಬಹುದು. ಮಣ್ಣು ಮತ್ತು ಹವಾಮಾನವನ್ನನುಸರಿಸಿ ನೀರು ಪೂರೈಕೆ ಮಾಡಬೇಕಾಗುವುದು. ಕೊತ್ತಂಬರಿಯನ್ನು ಸೊಪ್ಪು ಮತ್ತು ಬೀಜ ಇವೆರಡಕ್ಕೂ ಬೆಳೆಯುವರು. ಸೊಪ್ಪಿಗಾಗಿ ಬೆಳೆದರೆ ಮಡಿಗಳಿಗೆ ನೀರು ಪೂರೈಕೆ ಮಾಡಿ ಸಸಿಗಳನ್ನು ಕಿತ್ತು ಕಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಬಹುದು. ಬೀಜಕ್ಕಾಗಿ ಬೆಳೆಯುತ್ತಿದ್ದರೆ ಹೂವು ಕಾಯಿ ಕಚ್ಚಿ ಬಲಿತಾದ ನಂತರ ಕೊಯ್ಲು ಮಾಡಬಹುದು. ಮೆಂತ್ಯ ಸೊಪ್ಪು : ಬಹು ಜನರು ಇಷ್ಟ ಪಡುವ ಸೊಪ್ಪು ತರಕಾರಿಯಾಗಿದ್ದು ಪಲ್ಯ, ಸಾರು, ಪಚ್ಚಡಿ ಮುಂತಾದವುಗಳಿಗೆ ಉಪಯೋಗಿಸುತ್ತಾರೆ. ಇದು ಔಷಧೀಯ ಗುಣಗಳನ್ನೂ ಹೊಂದಿದೆ. ಸಾಕಷ್ಟು ಸತ್ವಗಳನ್ನು ಹೊಂದಿರುವ ಮೆಂತ್ಯ ಸೊಪ್ಪು ಬೆಳೆಯುವುದೂ ಸುಲಭ. ಮಂಜು ವಾತಾವರಣ ಬಿಟ್ಟರೆ, ಉಳಿದೆಲ್ಲ ಕಾಲಗಳಲ್ಲಿ ಬೆಳೆಯಬಹುದು. ಗೋಡು ಮಣ್ಣು ಹೆಚ್ಚು ಸೂಕ್ತ. ವರ್ಷದ ಎಲ್ಲ ಕಾಲಗಳಲ್ಲೂ ಬೆಳೆಯಬಹುದು. ಮೆಂತ್ಯ ಸೊಪ್ಪಿನಲ್ಲಿ ಹಲವಾರು ಜನಪ್ರಿಯ ತಳಿಗಳಿವೆ. ಅವುಗಳಲ್ಲಿ ಕಸೂರಿ, ಇ.ಸಿ. ೪೯೧೧, ಮಾರ್ಗರೇಟ್ ಮುಂತಾದವುಗಳು ಮುಖ್ಯವಾದವುಗಳು. ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ ಬೀಜಗಳನ್ನು ಸಮನಾಗಿ ಬಿತ್ತನೆ ಮಾಡಬೇಕು. ಮೇಲೆ ಮಣ್ಣು ಹರಡಿ, ಹಗುರವಾಗಿ ನೀರು ಪೂರೈಕೆ ಮಾಡಬೇಕು. ಬೀಜಗಳು ಗಟ್ಟಿಯಾಗಿರುವುದರಿಂದ ಬೇಗನೆ ಮೊಳಕೆಯೊಡೆಯುವುದಿಲ್ಲವಾದ ಕಾರಣ ಬಿತ್ತನೆ ಮಾಡುವ ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಹಾಕಿ ನಂತರ ಬಿತ್ತನೆಗೆ ಉಪಯೋಗಿಸಬಹುದು ಹಾಗೂ ಈ ಬೆಳೆಯನ್ನು ತರಕಾರಿ ತೋಟದಲ್ಲಿ ಮಿಶ್ರ ಬೆಳೆಯಾಗಿಯೂ ಬೆಳೆಯಬಹುದು. ಬಿತ್ತನೆ ಮಾಡಿದ ೩೦-೪೫ ದಿನಗಳಲ್ಲಿ ಸೊಪ್ಪು ಕೊಯ್ಲಿಗೆ ಸಿದ್ಧವಾಗುವುದು. ಬೀಜ ಬೇಕೆನ್ನುವುದಾದರೆ, ಬೆಳೆ ಬಲಿತು ಒಣಗಿದ ಮೇಲೆ ಕೊಯ್ಲು ಮಾಡಬೇಕಾಗುವುದು. ಇದರಲ್ಲಿ ಕೂಳೆ ಬೆಳೆ ಸಾಧ್ಯ. ಭೂಮಿಯ ಮಟ್ಟಕ್ಕೆ ಕತ್ತರಿಸಿ ಸೊಪ್ಪು ಪಡೆದುಕೊಂಡ ಮೇಲೆ ರಸಗೊಬ್ಬರ ಮತ್ತು ನೀರು ಪೂರೈಕೆ ಮಾಡಬೇಕು. ಒಂದೇ ಬಿತ್ತನೆಯಿಂದ ಸುಮಾರು ನಾಲ್ಕು ಬೆಳೆ ಪಡೆಯಬಹುದು. ಪಾಲಕ್ : ಪಾಲಕ್ ವಾರ್ಷಿಕ ಬೆಳೆ. ಇದರ ಕಾಂಡ ಮತ್ತು ಎಲೆಗಳನ್ನು ತರಕಾರಿಯಾಗಿ ಬಳಸುವರು. ಸೊಪ್ಪಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ಇಡೀ ವರ್ಷ ಬೆಳೆಯಬಹುದು. ಆದರೆ ಚಳಿಗಾಲ ಹೆಚ್ಚು ಸೂಕ್ತ. ಈ ಬೆಳಗೆ ನೀರು ಬಸಿದು ಹೋಗುವ ಭೂಮಿ ಉತ್ತಮ. ತಳಿಗಳಲ್ಲಿ ’ಆಲ್‌ಗ್ರೀನ್’ ಉತ್ತಮವಾದುದು ದೊಡ್ಡ ಎಲೆಗಳಿಂದ ಕೂಡಿದ ’ಜಾಬ್ನರ್‌‌ಗ್ರೀನ್’ ತಳಿಯನ್ನು ಉದಯಪುರ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದೆ. ’ಪೂಸಾ ಜ್ಯೋತಿ’, ’ಪೂಸಾ ಹರಿತ್’ ಇತರ ಪ್ರಮುಖ ತಳಿಗಳು. ಇವನ್ನು ಮಡಿಗಳಲ್ಲಿ ಬಿತ್ತನೆ ಮಾಡಬಹುದು ಸುಮಾರು ೨೦ ಸೆಂ.ಮೀ. ಅಂತರದ ಸಾಲುಗಳಲ್ಲಿ ೧೦ ಸೆಂ.ಮೀ. ಅಂತರದಲ್ಲಿ ಬಿತ್ತಬೇಕು. ಬೇಸಿಗೆಯಲ್ಲಿ ನೀರಿನ ಪೂರೈಕೆ ಹೆಚ್ಚು ಬೇಕಾಗುವುದು. ಚಳಿಗಾಲದಲ್ಲಿ ಹವಾಮಾನವನ್ನನುಸರಿಸಿ ನೀರು ಪೂರೈಸಬೇಕು. ಬಿತ್ತನೆ ಮಾಡಿದ ೩೦-೪೦ ದಿನಗಳಲ್ಲಿ ಕಟಾವು ಮಾಡಬಹುದು. ಆಮೇಲೆ ೨-೩ ವಾರಗಳಿಗೊಮ್ಮೆ ಕೊಯ್ಲು ಮಾಡಬೇಕು. ಹೀಗೆ ಸುಮಾರು ೩-೪ ಕೊಯ್ಲು ಮಾಡಬಹುದು. ತಂಪಾದ ಸಮಯದಲ್ಲಿ ಕೊಯ್ಲು ಮಾಡುವುದು ಒಳ್ಳೆಯದು. ಚಳಿಗಾಲದಲ್ಲಿ ಬೆಳೆಸಿದ ಬೆಳೆಯಿಂದ ಅಧಿಕ ಇಳುವರಿ ಪಡೆಯಬಹುದು. ದಂಟು : ದಂಟು ಬಹುವಾರ್ಷಿಕ ಸೊಪ್ಪು. ವರ್ಷದಲ್ಲಿ ೫-೬ ಬೆಳೆ ಪಡೆಯಲು ಸಾಧ್ಯ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಔಷಧಿಯಾಗಿಯೂ ದಂಟನ್ನು ಬಳಸುವುದುಂಟು. ಕೈತೋಟದಲ್ಲಿ ಚೆನ್ನಾಗಿ ಬೆಳೆಸಲು ಸಾಧ್ಯ. ದಂಟು ಉಷ್ಣ ಪ್ರದೇಶದಲ್ಲಿ ಚೆನ್ನಾಗಿಯೂ ಮಳೆಗಾಲದಲ್ಲಿ ಸಮೃದ್ಧಿಯಾಗಿಯೂ ಬೆಳೆಯುವುದು. ಮಳೆಗಾಲ ಹೊರತುಪಡಿಸಿ ಇನ್ನುಳಿದ ದಿನಗಳಲ್ಲೂ ಬೇಸಾಯ ಸಾಧ್ಯ. ನೀರು ಬಸಿದು ಹೋಗುವ ಗೋಡು ಮಣ್ಣು ಸೂಕ್ತ. ಪೂಸಾ ಚೌಲಾಯ್, ಪಾಲಿಗ್ಯಾಮಸ್, ಕೊ-೧, ಕೊ-೨, ಕೊ-೩ ದಂಟಿನ ಮುಖ್ಯ ತಳಿಗಳು. ಪೂಸಾ ಚೌಲಾಯ್ ತಳಿಯನ್ನು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಕೊ-೧, ಕೊ-೨ ಮತ್ತು ಕೊ-೩ ಈ ತಳಿಗಳನ್ನು ಕೊಯಮತ್ತೂರ (ತಮಿಳುನಾಡು) ಕೃಷಿ ಕಾಲೇಜು ಬಿಡುಗಡೆ ಮಾಡಿವೆ. ಕೈತೋಟದಲ್ಲಿ ಸಿದ್ಧಪಡಿಸಿದ ಡಿಗಳಲ್ಲಿ ಬೀಜ ಬಿತ್ತಬೇಕು. ಬೀಜ ಗಾತ್ರದಲ್ಲಿ ತುಂಬಾ ಸಣ್ಣದಾಗಿರುವುದರಿಂದ ಮರಳಿನೊಂದಿಗೆ ಬೆರೆಸಿ ಬಿತ್ತನೆ ಮಾಡಬೇಕು. ಸಸಿಯಾಗಿ ಸ್ವಲ್ಪ ಎತ್ತರಕ್ಕೆ ಬೆಳೆದ ಮೇಲೆ ಹೆಚ್ಚುವರಿ ಸಸಿಗಳನ್ನು ಕಿತ್ತು ಹಾಕಿ, ತೆಳುಗೊಳಿಸಬೇಕು. ಇದರಿಂದ ಸಸಿಗಳು ಸದೃಢವಾಗಿ ಬೆಳೆಯಲು ಸಾಧ್ಯವಾಗುವುದು. ಅವಶ್ಯಕತೆ ನೋಡಿಕೊಂಡು ನೀರು ಪೂರೈಸಬೇಕು. ತರಕಾರಿ ತೋಟದಲ್ಲಿ ದಂಟನ್ನು ಮಿಶ್ರ ಬೆಳೆಯಾಗಿಯೂ ಬೆಳೆಯಬಹುದು. ಬೀಜಗಳನ್ನು ಬಿತ್ತನೆ ಮಾಡಿದ ಮೇಲೆ ೪-೬ ವಾರಗಳಲ್ಲಿ ಸುಮಾರು ೪೫ ಸೆಂ.ಮೀ. ಎತ್ತರದವರೆಗೆ ದಂಟಿನ ಸೊಪ್ಪು ಬೆಳೆಯುವುದು. ಬೆಳೆಯನ್ನು ಭೂಮಿಯ ಮಟ್ಟಕ್ಕೆ ಕತ್ತರಿಸಿ ನೀರು ಮತ್ತು ಪೋಷಕಾಂಶಗಳನ್ನು ಪೂರೈಸಿದರೆ ಕೂಳೆಬೆಳೆಯನ್ನೂ ಪಡೆಯಬಹುದು. ಪುದೀನ : ಪುದೀನ ಸೊಪ್ಪಿನಿಂದ ವಿಶೇಷವಾಗಿ ಚಟ್ನಿ ಮತ್ತು ಸೂಪ್ ತಯಾರಿಸುವರು. ಇದು ಅಡುಗೆ ಪದಾರ್ಥಗಳಿಗೆ ಹೆಚ್ಚಿನ ಕಂಪನ್ನು ನೀಡುವುದಲ್ಲದೇ ಔಷಧೀಯ ಗುಣಗಳನ್ನೂ ಹೊಂದಿದೆ. ಇದೊಂದು ಸಸ್ಯ ಮೂಲಿಕೆ. ಎಲೆಗಳಿಂದ ತೈಲ ತೆಗೆದು ಕೆಲವು ಪದಾರ್ಥಗಳಲ್ಲಿ ಉಪಯೋಗಿಸುವರು. ಉದಾ: ಕ್ರೀಮ್, ಮಧ್ಯ (ಪಾನೀಯ) ಮುಂತಾಗಿ. ಇದು ತಂಪು ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಬೆಳೆಗೆ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ವರ್ಷವಿಡೀ ಯಾವ ಋತುಮಾನದಲ್ಲಾದರೂ ಬೆಳೆಯಬಹುದು. ಪುದೀನ ಸೊಪ್ಪು ಬೆಳೆಯಲು ಸಾಕಷ್ಟು ನೀರು ಬೇಕಾಗುವುದು. ಕಾಂಡ ಮತ್ತು ಬೇರು ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಕಾಂಡದ ತುಂಡುಗಳನ್ನು ನಾಟಿಗೆ ಉಪಯೋಗಿಸುವುದು ಸೂಕ್ತ. ೨೦ ಸೆಂ.ಮೀ. X ೧೫ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬಹುದು. ಸೊಪ್ಪನ್ನು ಭೂಮಿಯ ಮಟ್ಟಕ್ಕೆ ಕೊಯ್ಲು ಮಾಡುತ್ತಿದ್ದರೆ ಮುಂದೆ ಮೂರರಿಂದ ನಾಲ್ಕು ವರ್ಷಗಳವರೆಗೆ ಬೆಳೆ ಬರುತ್ತಿರುತ್ತದೆ. ನುಗ್ಗೆ : ನುಗ್ಗೇಕಾಯಿ ಮತ್ತು ಸೊಪ್ಪನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಇದೊಂದು ಬಹುವಾರ್ಷಿಕ ಬೆಳೆ. ನುಗ್ಗೆ ಎಲ್ಲರೂ ಇಷ್ಟಪಡುವ ತರಕಾರಿ. ಕಾಯಿಗಳಲ್ಲಿ ಮಾತ್ರವಲ್ಲದೇ ಸೊಪ್ಪು ಮತ್ತು ಹೂವುಗಳಲ್ಲೂ ಸಾಕಷ್ಟು ಪೌಷ್ಠಿಕಾಂಶಗಳಿವೆ. ಕೈತೋಟದಲ್ಲೊಂದು ನುಗ್ಗೆ ಮರವಿದ್ದರೆ ಹಲವಾರು ವರ್ಷಗಳವರೆಗೆ ಅದರ ಪ್ರಯೋಜನ ಪಡೆಯಬಹುದು. ಉಷ್ಣವಲಯದಲ್ಲಿ ನುಗ್ಗೆ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚು ಮಳೆಯಾಗುವ ಪ್ರದೇಶ ಅಷ್ಟೊಂದು ಯೋಗ್ಯವಲ್ಲ. ಬಿರುಗಾಳಿಗೆ ಮರ ಮುರಿದು ಬೀಳುವ ಸಂಭವವಿರುತ್ತದೆ. ಜೂನ್-ಜುಲೈ ತಿಂಗಳುಗಳು ಬೀಜ ಬಿತ್ತಲು ಸೂಕ್ತವಾದ ಕಾಲ. ತಳಿಗಳಲ್ಲಿ ಜಾಫ್ನಾ, ಸಿ.ಓ.-೧, ಪಿ.ಕೆ.ಎಂ.-೧, ಜಿ.ಕೆ.ವಿ.ಕೆ.-೧ ಇತ್ಯಾದಿ ಜನಪ್ರಿಯವಾಗಿವೆ. ತಳಿಗಳಿಗನುಸಾರವಾಗಿ ಕಾಯಿಗಳು ೩೦ ರಿಂದ ೧೦೦ ಸೆಂ.ಮೀ. ವರೆಗೆ ಉದ್ದವಾಗಿರುತ್ತವೆ. ಬಿತ್ತಿದ ಬೀಜದಿಂದ ಅಥವಾ ರೆಂಬೆ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೀಜದಿಂದ ಬೆಳೆಸುವುದಾದರೆ ಪಾಲಿಥೀನ್ ಚೀಲಗಳಲ್ಲಿ ಬೀಜ ಬಿತ್ತಿ ಸಸಿ ಬೆಳೆದ ಮೇಲೆ ನಾಟಿ ಮಾಡಬಹುದು. ಇನ್ನು ರೆಂಬೆಯ ತುಂಡುಗಳಿಂದ ಅಭಿವೃದ್ಧಿಪಡಿಸುವುದಾದರೆ ಸುಮಾರು ೯೦-೧೨೦ ಸೆಂ.ಮೀ. ಉದ್ದ ಮತ್ತು ೧೫-೧೮ ಸೆಂ.ಮೀ. ದಪ್ಪ ಇರುವ ರೆಂಬೆಗಳನ್ನು ಆಯ್ಕೆ ಮಾಡಿ ೯೦ ಚದರ ಸೆಂ.ಮೀ. ಅಳತೆಯ ಗುಂಡಿಗಳಲ್ಲಿ ಗೊಬ್ಬರ ಮಿಶ್ರಣ ತುಂಬಿ ನಾಟಿ ಮಾಡಬೇಕು. ನಂತರ ಅವಶ್ಯಕತೆಗೆ ತಕ್ಕಂತೆ ನೀರು ಪೂರೈಕೆ ಮಾಡಬೇಕು. ಗಾಳಿಯಿಂದ ರಕ್ಷಿಸಲು ಸುಮಾರು ೬೦ ಸೆಂ.ಮೀ. ಎತ್ತರದವರೆಗೆ ಗಿಡಗಳಿಗೆ ಮಣ್ಣೇರಿಸಬೇಕು. ಆರಂಭದ ದಿನಗಳಲ್ಲಿ ನೀರು ಕಡಿಮೆ ಪೂರೈಕೆ ಬೆಳವಣಿಗೆಗೆ ಅನುಕೂಲ ಮತ್ತು ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಕಡುವುದು ಅವಶ್ಯಕ. ಹೂವು ಬಿಡುವ ಸಮಯದಲ್ಲಿ ಬೇಕಾಗುವಷ್ಟು ನೀರು ಪೂರೈಕೆ ಮಾಡಿದರೆ ಗಿಡದಲ್ಲಿ ಕಾಯಿ ಕಚ್ಚುವ ಸಂಖ್ಯೆ ಹೆಚ್ಚಾಗುವುದು. ರೆಂಬೆ ತುಂಡು ನಾಟಿ ಮಾಡಿದ ಒಂದು ವರ್ಷದಲ್ಲಿ ಮತ್ತು ಸಸಿಗಳು ನೆಟ್ಟ ಎರಡು ವರ್ಷಗಳಲ್ಲಿ ಹೂವು ಬಿಟ್ಟು ಫಲ ಬಿಡಲು ಪ್ರಾರಂಭಿಸುತ್ತವೆ. ಕರಿಬೇವು : ಕರಿಬೇವು ಪರಿಮಳಕ್ಕೆ ಹೆಸರುವಾಸಿ. ಕರಿಬೇವಿಲ್ಲದೆ ಒಗ್ಗರಣೆ ಇಲ್ಲ. ಪ್ರತಿದಿನವೂ ಉಪಯೋಗವಾಗುವ ಅಡುಗೆಮನೆಯ ಸಸ್ಯ ’ಕರಿಬೇವು’. ಇದು ಕೆಲವು ಔಷಧೀಯ ಗುಣಗಳನ್ನು ಹೊಂದಿದೆ. ಬಹುವಾರ್ಷಿಕ ಬೆಳೆಯಾದ ಇದು ಸುಮಾರು ೩೦ ವರ್ಷಗಳವರೆಗೆ ಉತ್ತಮ ಇಳುವರಿ ಕೊಡಬಲ್ಲದು. ಮನೆ ಉಪಯೋಗಕ್ಕೆ ದಿನವೂ ತಾಜಾ ಸೊಪ್ಪು ಉಪಯೋಗಿಸಬಹುದು. ಮಾರಾಟ ಮಾಡುವುದಾದರೆ ಒಂದು ವರ್ಷದಲ್ಲಿ ಎರಡು ಬಾರಿ ಕೊಯ್ಲು ಮಾಡಬಹುದು. ಕರಿಬೇವಿನ ಗಿಡ ಕೈತೋಟಕ್ಕೊಂದು ಶೋಭೆ. ಇದನ್ನು ಬೆಳೆಯಲು ಒಣ ಹವೆ ಸೂಕ್ತ. ಭೂಮಿಯಲ್ಲಿ ನೀರು ಬಸಿದು ಹೋಗುವಂತಿರಬೇಕು. ಮಳೆಗಾಲದ ಆರಂಭದಲ್ಲಿ ನಾಟಿ ಮಾಡಬಹುದು. ತಳಿಗಳಲ್ಲಿ ’ಸುವಾಸಿನಿ’ ಮತ್ತು ’ಧಾರವಾಡ-೨’ ಎಂಬ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು ಉತ್ತಮ ಗುಣಮಟ್ಟ ಹೊಂದಿವೆ. ಇವಲ್ಲದೆ ಅನೇಕ ಸ್ಥಳೀಯ ತಳಿಗಳು ಬೇಸಾಯದಲ್ಲಿವೆ. ಬೀಜ ಬಿತ್ತಿದ ಸಸಿಯನ್ನು ನಾಟಿಗೆ ಉಪಯೋಗಿಸಬಹುದು. ಬಲಿತು ಪೂರ್ಣ ಮಾಗಿದ ಆರೋಗ್ಯಕರ ಬೀಜಗಳನ್ನು ಸಂಗ್ರಹಿಸಿ ಅವುಗಳ ಮೇಲಿನ ಸಿಪ್ಪೆ ತೆಗೆದು ನೀರಿನಿಂದ ತೊಳೆದು, ನಂತರ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ, ಗೊಬ್ಬರ ಮಿಶ್ರಣ ತುಂಬಿದ ಪಾಲಿಥೀನ್ ಚೀಲಗಳಲ್ಲಿ ಊರಿ ಸಸಿಗಳನ್ನು ಬೆಳೆಸಬಹುದು. ಎರಡು ತಿಂಗಳ ವಯಸ್ಸಿನ ಸಸಿಗಳನ್ನು ನಾಟಿಗೆ ಬಳಸಬಹುದು. ಒಂದು ಘನ ಮೀ. ಅಳತೆಯ ಗುಂಡಿಗಳನ್ನು ತೋಡಿ ಗೊಬ್ಬರ ಮಿಶ್ರಣ ತುಂಬಬೇಕು. ನಂತರ ಸಸಿಗಳನ್ನು ಗುಂಡಿಯ ಮಧ್ಯಭಾಗದಲ್ಲಿ ನೆಟ್ಟು ನೀರು ಪೂರೈಕೆ ಮಾಡಬೇಕು. ಸಸಿಗಳಿಗೆ ಆಸರೆಯಾಗಿ ಕೋಲು ಕೊಟ್ಟು ನಿಲ್ಲಿಸಬಹುದು. ಸಕಾಲಕ್ಕೆ ನೀರು ಪೂರೈಸುತ್ತಿರಬೇಕು. ಇದರಿಂದ ಸೊಪ್ಪು ಚೆನ್ನಾಗಿ ಬೆಳೆಯಲೂ ಪ್ರೋತ್ಸಾಹಿಸಿದಂತಾಗುತ್ತದೆ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಒದಗಿಸುವುದು ಅವಶ್ಯ. ಮುಖ್ಯ ಕಾಂಡದ ಮೇಲೆ ಬರುವ ರೆಂಬೆಗಳನ್ನು ಭೂಮಟ್ಟದಿಂದ ಸುಮಾರು ೬೦ ಸೆಂ.ಮೀ. ಎತ್ತರದವರೆಗೆ ಬರದಂತೆ ಕಟಾವು ಮಾಡುತ್ತಿರಬೇಕು. ಸಸಿಗಳನ್ನು ನಾಟಿ ಮಾಡಿದ ೪-೫ ತಿಂಗಳ ನಂತರ ಸೊಪ್ಪನ್ನು ಕೊಯ್ಲು ಮಾಡಬಹುದು. ಮರ ದೊಡ್ಡದಾಗುತ್ತಿದ್ದಂತೆ ಇಳುವರಿಯೂ ಹೆಚ್ಚಾಗುವುದು. ಬಲಿತ ಕರಿಬೇವಿನ ಎಲೆಗಳು ಹೆಚ್ಚಿನ ಪರಿಮಳದಿಂದ ಕೂಡಿರುತ್ತವೆ. ಒಂದು ಮರದಿಂದ ಆರು ತಿಂಗಳಿಗೊಮ್ಮೆ ಸುಮಾರು ೨೫-೫೦ ಕಿ.ಗ್ರಾಂ ಸೊಪ್ಪನ್ನು ಪಡೆಬಹುದು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...