Skip to main content

ನವಗ್ರಹಗಳು – ಪರಿಚಯ

ಇದು ನವಗ್ರಹಗಳ ಕುರಿತಾದ ಹೊಸ ಲೇಖನ ಮಾಲಿಕೆ. ಪ್ರತಿಯೊಂದು ಗ್ರಹದ ಬಗ್ಗೆ ವಿವರವಾದ ಮಾಹಿತಿಯನ್ನು ಈ ಮಾಲಿಕೆಯಲ್ಲಿ ಕೊಡಲಾಗುವುದು. ಪ್ರಸಕ್ತ ಈ ಲೇಖನದಲ್ಲಿ ನವಗ್ರಹಗಳ ಕುರಿತ ಕೆಲವು ಮೂಲಭೂತ ವಿಷಯಗಳನ್ನು ನೋಡೊಣ. ಸೂರ್ಯಃ ಸೋಮೋ ಮಹೀಪುತ್ರಃ ಸೋಮಪುತ್ರೋ ಬೃಹಸ್ಪತೀ | ಶುಕ್ರಃ ಶನೈಶ್ಚರೋ ರಾಹುಃ ಕೇತುಶ್ಚೇತಿ ಗ್ರಹಾಃ ಸ್ಮೃತಾಃ || (ಯಾಜ್ಞವಲ್ಕ್ಯ ಸ್ಮೃತಿ 13-02) ಸೂರ್ಯ, ಚಂದ್ರ, ಭೂಮಿಪುತ್ರನಾದ ಕುಜ, ಚಂದ್ರಪುತ್ರನಾದ ಬುಧ, ಬೃಹಸ್ಪತಿ, ಶುಕ್ರ, ಶನೈಶ್ಚರ, ರಾಹು ಮತ್ತು ಕೇತು ಇವರನ್ನು ಗ್ರಹಗಳೆಂದು ಹೇಳಲಾಗಿದೆ. ಸೂರ್ಯಃ ಸೋಮಸ್ತಥಾ ಭೌಮೋ ಬುಧಜೀವಸಿತಾರ್ಕಜಾಃ | ರಾಹುಃ ಕೇತುರಿತಿ ಪ್ರೋಕ್ತಾ ಗ್ರಹಾ ಲೋಕಹಿತಾವಹಾಃ || (ಮತ್ಸ್ಯಪುರಾಣ 69-10) ಸೂರ್ಯ, ಸೋಮ (ಚಂದ್ರ), ಭೌಮ (ಮಂಗಳ), ಬುಧ, ಸಿತ (ಶುಕ್ರ), ಅರ್ಕಜ (ಶನಿ), ರಾಹು ಮತ್ತು ಕೇತುಗಳನ್ನು ಲೋಕಕ್ಕೆ ಹಿತವನ್ನುಂಟುಮಾಡುವ ಗ್ರಹಗಳು ಎಂದು ಕರೆಯಲಾಗುತ್ತದೆ. ನವಗ್ರಹಗಳು ಸನಾತನ ಧರ್ಮಾವಲಂಬಿಗಳಾದ ಭಾರತೀಯಯಲ್ಲಿ ನವಗ್ರಹಗಳ ಆರಾಧನೆ ಅತ್ಯಂತ ಪ್ರಾಚೀನಕಾಲದಿಂದ ನಡೆದುಬಂದಿದೆ. ಪ್ರತಿಯೊಂದು ವೈದಿಕ ಕರ್ಮದಲ್ಲಿ ಗ್ರಹಪೂಜೆಯು ಅವಿಭಾಜ್ಯ ಅಂಗವಾಗಿರುತ್ತದೆ. ಈ ಗ್ರಹಗಳು ಸಮಸ್ತ ಜೀವಜಾಲದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆಯೆಂದು ಆಸ್ತಿಕನಾದ ಪ್ರತಿಯೊಬ್ಬ ಭಾರತೀಯನ ವಿಶ್ವಾಸ. ಈ ನವಗ್ರಹಗಳ ಅಧ್ಯಯನವೇ ವೈದಿಕ ಜ್ಯೋತಿಷ್ಯ ಶಾಸ್ತ್ರ. ವಿವಿಧ ಗತಿಗಳಿಂದ ಆಕಾಶದಲ್ಲಿ ಸಂಚಾರಮಾಡುವ ಈ ಗ್ರಹಗಳು ಎಲ್ಲವನ್ನೂ ನಿಯಂತ್ರಿಸುತ್ತವೆಯೆಂಬುದು ಜ್ಯೋತಿಷ್ಯದ ಮೂಲಭೂತ ಸಿದ್ಧಾಂತ. ಇವು ದೃಶ್ಯವಾಗಿ ಕಣ್ಣಿಗೆ ಕಾಣುವ ಅವಕಾಶೀಯ ಕಾಯಗಳೂ ಹೌದು, ಖಗೋಳ ಗಣಿತದ ಸಾಂಕೇತಿಕ ಬಿಂದುಗಳು ಹೌದು, ಸಕಲ ಜೀವಜಾಲವನ್ನು ಸ್ವಕರ್ಮಾನುಸಾರ ಪ್ರೇರೇಪಿಸುವ ಅಗೋಚರ ದೈವೀ ಶಕ್ತಿಗಳೂ ಸಹ ಹೌದು, ಜೀವರು ಮಾಡುವ ಸಕಲ ಶುಭಾಶುಭ ಕರ್ಮಗಳಿಗೆ ಸಾಕ್ಷಿಯಾಗಿ ಫಲಸ್ವರೂಪ ಸುಖದುಃಖಾದಿಗಳನ್ನುಂಟುಮಾಡುವ ದೇವತಾ ಸ್ವರೂಪರಾದ ಲೋಕಪಾಲಕರೂ ಹೌದು. ವಿಶ್ವದ ಸೃಷ್ಟಿ-ಸ್ಥಿತಿ-ಲಯಕರ್ತೃನಾಗಿರುವ ಎಲ್ಲವನ್ನೂ ನಿಯಮನ ಮಾಡುವ ಪರಮಪುರುಷ ಪರಬ್ರಹ್ಮನಾದ ಶ್ರೀಮನ್ನಾರಾಯಣನೇ ಕಾಲನಿಯಾಮಕನಾಗಿ ಕಾಲಪುರುಷ ಎಂದು ಎಲ್ಲ ಶಾಸ್ತ್ರಗಳಲ್ಲಿ ಸ್ತುತಿಸಲ್ಪಟ್ಟಿದ್ದಾನೆ. ಈ ಕಾಲಪುರುಷನ ವಿಶ್ವರೂಪೀ ಶರೀರದ ಅಂಗವಿಭಾಗದಂತಿರುವ ಮೇಷಾದಿ ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾ ಅನೇಕಾನೇಕ ಯೋಗಗಳನ್ನು ಸೃಷ್ಟಿಸುತ್ತಾ ವಿಶ್ವದ ಸಮಸ್ತ ಘಟನಾಚಕ್ರದ ಸೂತ್ರಧಾರಂತೆ ನವಗ್ರಹಗಳು ಆ ಪರಮಾತ್ಮನನ್ನು ನಿರಂತರ ಸೇವಿಸುತ್ತಿರುತ್ತಾರೆ. ಆಕಾಶದಲ್ಲಿ ಗ್ರಹಗೋಲಕಗಳಂತೆ ಕಾಣುವ ಈ ನವಗ್ರಹರು ಎಲ್ಲ ಜೀವಜಾಲಗಳಲ್ಲಿ ತತ್ವರೂಪಗಳಿಂದ ಒಳಗೂ ಹೊರಗೂ ಇದ್ದು ತಮ್ಮ ಪ್ರಭಾವವನ್ನು ಆಯಾ ಜೀವಿಯ ಕರ್ಮಾನುಸಾರ ಬಿತ್ತರಿಸುತ್ತ ತಮ್ಮ ಕರ್ತವ್ಯವನ್ನು ಮಾಡುತ್ತಾರೆ. ಜೀವರ ಕರ್ಮಫಲವನ್ನು ಅವರವರ ಯೋಗ್ಯತೆ ಸಾಧನೆಗಳಿಗನುಗುಣವಾಗಿ ತಂದು ಕೊಡುವುದೇ ನವಗ್ರಹಗಳ ಕೆಲಸ. ಅವರಿಗೆ ಯಾರ ಮೇಲೆ ಪ್ರೀತಿಯೂ ಇಲ್ಲ ದ್ವೇಷವೂ ಇಲ್ಲ. ಜ್ಯೋತಿಷ್ಯದಲ್ಲಿ ಹೇಳಲಾಗುವಂತೆ ಗ್ರಹಪೀಡೆ, ಗ್ರಹಬಾಧೆ, ಕಾಟ, ದೋಷ ಇತ್ಯಾದಿಗಳು ನಮ್ಮ ಕರ್ಮಫಲಗಳ ಪ್ರತಿಫಲನಗಳು. ಇವುಗಳನ್ನು ಸೂಚಿಸುವ ಕಾರ್ಯ ಮಾತ್ರ ನವಗ್ರಹಗಳದು. ಕಾರಕತ್ವಗಳು ನವಗ್ರಹಗಳ ಅಭಿವ್ಯಕ್ತಿ ಮಾತ್ರ ಮೂಲ ಸ್ವರೂಪವಲ್ಲ. ನವಗ್ರಹರು ಸ್ವರೂಪತಃ ಭಗವಂತನ ಭಕ್ತರೂ ಅನುಯಾಯಿಗಳೂ ಅದ ಶ್ರೇಷ್ಠ ದೇವತೆಗಳು. ಭಗವಂತನ ವಿಶ್ವವ್ಯಾಪಾರವೆಂಬ ಲೀಲೆಯಲ್ಲಿ ಅವನ ಪ್ರೀತಿಗಾಗಿ ಅನೇಕ ಸೇವೆಗಳನ್ನು ಮಾಡುತ್ತಿರುವ ದೇವತೆಗಳಂತೆ ನವಗ್ರಹಗಳು ತಾವೂ ಸಹ ಜೀವಿಗಳಿಗೆ ಶುಭಾಶುಭ ಫಲಾಫಲಗಳನ್ನುಂಟು ಮಾಡಿ ತಮ್ಮ ಸೇವೆಯನ್ನು ಮಾಡುತ್ತಿರುತ್ತಾರೆ. ಆದ್ದರಿಂದಲೇ ಜ್ಯೋತಿಷ್ಯವು ಎಲ್ಲರೂ ನವಗ್ರಹಗಳಿಗೆ ಅಧೀನವೆಂದು ಹೇಳುತ್ತದೆ. ಗ್ರಹಾಧೀನಂ ಜಗತ್ಸರ್ವಂ ಗ್ರಹಾಧೀನಾ ನರಾವರಾಃ | ಸೃಷ್ಟಿಸಂರಕ್ಷಣಸಂಹಾರಾಃ ಸರ್ವೇ ಚಾಪಿ ಗ್ರಹಾನುಗಾಃ || ಸಮಸ್ತ ಜಗತ್ತು ಗ್ರಹಗಳ ಅಧೀನವಾಗಿದೆ, ಮನುಷ್ಯರು ಮತ್ತು ಇತರ ಜೀವಗಳು ಗ್ರಹಗಳ ಅಧೀನರೇ ಆಗಿರುತ್ತಾರೆ. ಸೃಷ್ಟಿ-ಪಾಲನೆ-ಸಂಹಾರ ಎಲ್ಲವೂ ಗ್ರಹಗಳ ಅನುಗಾಮಿಯೇ (ಗ್ರಹಸೂಚಿತವೇ) ಆಗಿವೆ. ಆಯುಶ್ಚ ವಿದ್ಯಾಂ ಚ ತಥಾ ಸುಖಂ ಚ ಧರ್ಮಾರ್ಥಕಾಮಾನ್ ಬಹುಪುತ್ರತಾಂ ಚ | ಶತ್ರುಕ್ಷಯಂ ರಾಜಸು ಪೂಜ್ಯತಾಂ ಚ ತುಷ್ಟಾ ಗ್ರಹಾಃ ಸರ್ವಮೇತದ್ ದಿಶಂತಿ || ಪ್ರಸನ್ನರಾದ ನವಗ್ರಹರು ಆಯುಷ್ಯ, ವಿದ್ಯೆ ಮತ್ತು ಸುಖವನ್ನು ಕೊಡುತ್ತಾರೆ. ಧರ್ಮ-ಅರ್ಥ-ಕಾಮ (ತ್ರಿವರ್ಗ), ಬಹುಸಂತತಿಯನ್ನು ಕೊಡುತ್ತಾರೆ. ಶತ್ರುಗಳನ್ನು ನಾಶಮಾಡುತ್ತಾರೆ. ಅನೇಕ ರಾಜರಿಂದ ಪೂಜ್ಯತ್ವವನ್ನು (ಮರ್ಯಾದೆ) ಸಹ ಪ್ರದಾನ ಮಾಡುತ್ತಾರೆ. ಗ್ರಹ ಎಂದರೇನು ಎಂಬುದನ್ನು ಮೊದಲು ತಿಳಿಯಬೇಕು. ಇವತ್ತು ನಾವು ಗ್ರಹ ಎಂಬ ಶಬ್ದವನ್ನು ಇಂಗ್ಲೀಷ್ ಭಾಷೆಯ planet ಎಂಬ ಶಬ್ದದ ಸಮಾನಾರ್ಥಕವಾಗಿ ಬಳಸುತ್ತೇವೆ (ಪಾಶ್ಚಾತ್ಯ ಅಧ್ಯಯನ ಪದ್ಧತಿಯ ಪ್ರಭಾವ). ವಿಜ್ಞಾನ ವಿಷಯಕವಾಗಿ ಈ ಬಳಕೆ ಸಿಂಧುವಾದದ್ದು. ಆದರೆ ಜ್ಯೋತಿಷ್ಯ ಶಾಸ್ತ್ರೀಯವಾಗಿ ಸಮಾನಾರ್ಥಕವಾಗಿ ಈ ಬಳಕೆ ಸಮಗ್ರವಾಗಿ ಅಷ್ಟು ಸರಿಯಾದುದಲ್ಲ. ಸಂಸ್ಕೃತದಲ್ಲಿ ಗ್ರಹ ಶಬ್ದವು ಗ್ರಹ (ಗೃಹ) ಎಂಬ ಧಾತುಜನ್ಯವಾಗಿದ್ದು ಗ್ರಹಣ, ಉಪಾದಾನ ಎಂಬರ್ಥದಲ್ಲಿ ಬಳಸಲಾಗುತ್ತದೆ (ಗೃಹ ಗ್ರಹಣೇ, ಗ್ರಹ ಉಪಾದಾನೇ). ಇದರ ಅರ್ಥ ಹಿಡಿದುಕೊಳ್ಳುವುದು, ತೆಗೆದುಕೊಳ್ಳುವುದು, ಸ್ವೀಕರಿಸು, ಅಂಗೀಕರಿಸುವುದು ಎಂದೆಲ್ಲ ಆಗುತ್ತದೆ. ಜೀವಿಗಳನ್ನು ಗ್ರಹಿಸಿ (ತಮ್ಮ ಅಧೀನವಾಗಿಸಿ) ತಮ್ಮ ಪ್ರಭಾವವನ್ನು ತೋರಿಸುವುದು ಗ್ರಹ ಎಂದು ಅರ್ಥಮಾಡಬಹುದು. ಗ್ರಹ ಹಿಡಿದುಕೊಂಡಿದೆ ಎಂಬ ಜಾನಪದ ಪ್ರಯೋಗವೂ ಸಹ ಇದನ್ನೇ ಸೂಚಿಸುತ್ತದೆ. ಗ್ರಹಗಳು ನಮ್ಮನ್ನು ಹಿಡಿದುಕೊಂಡು ನಮ್ಮಿಂದ ಅನೇಕ ಕರ್ಮಗಳನ್ನು ಮಾಡಿಸುತ್ತವೆ ಎಂಬ ನಂಬಿಕೆ ಬಹಳ ಪ್ರಾಚೀನವಾದದ್ದು. ಆಯುರ್ವೇದದಲ್ಲಿಯು ಇಂತಹ ಗ್ರಹಗಳ ಉಲ್ಲೇಖ ಬರುತ್ತದೆ. ಚಿಕ್ಕ ಮಕ್ಕಳಿಗೆ ಪೂತನಾದಿ ಬಾಲಗ್ರಹಗಳ ಬಾಧೆಯಿಂದ ಆಗುವ ಅನಾರೋಗ್ಯದ ಚರ್ಚೆ ಕೌಮಾರಭೃತ್ಯ (ಶಿಶು ಆಯುರ್ವೇದ) ವಿವರಿಸುತ್ತದೆ. ಇದೇ ರೀತಿ ಜ್ಯೋತಿಷ್ಯದಲ್ಲಿ ನವಗ್ರಹಗಳನ್ನು ವರ್ಣಿಸಲಾಗಿದೆ. ಆದರೆ ನವಗ್ರಹಗಳು ನಮ್ಮಿಂದ ಅನಿಷ್ಟ ಕರ್ಮಗಳನ್ನು ಮಾಡಿಸುತ್ತವೆ, ಗ್ರಹಗಳ ಹಿಡಿತದಿಂದಾಗಿ ನಾವು ಕಷ್ಟಪಡುತ್ತಿದ್ದೇವೆ ಎಂದು ತಿಳಿಯುವುದು ಮಾತ್ರ ಸರಿಯಲ್ಲ. ಗ್ರಹಗಳ ಪ್ರಭಾವವೆಂಬುದು ಸ್ವಕರ್ಮ ಫಲದ ಸೂಚನೆ ಎಂದರ್ಥ. ಗ್ರಹಗಳು ಉಂಟು ಮಾಡುವ ಪ್ರಭಾವವನ್ನು (ಅಥವಾ ಸ್ವಕರ್ಮವಶಾತ್ ಒದಗಬಹುದಾದ ಇಷ್ಟ-ಅನಿಷ್ಟಗಳನ್ನು) ಗಣಿತದಿಂದ ಬಹಳ ಮೊದಲೇ ಸೂಚಿಸುವುದರಿಂದ ಕಾಲಸೂಚಕಗಳಾಗಿವೆ. ಅಷ್ಟೇ ಅಲ್ಲದೇ ಅನಿಷ್ಟ ಪ್ರಭಾವವನ್ನು ತಡೆಗಟ್ಟಲೂ ಪರಿಹಾರಕರೂ ಆಗಿರುತ್ತಾರೆ. ಗ್ರಹಗಳ ಪ್ರಭಾವವೆಂಬುದು ಜ್ಯೋತಿಷ್ಯದ ಆಧ್ಯಾತ್ಮಿಕ ಆಂತರ್ಯವನ್ನು ತಿಳಿದವರಿಗೆ ಮಾತ್ರ ಜ್ಞೇಯವಾಗಿದೆ. ಜನಸಾಮಾನ್ಯರಲ್ಲಿ ಗ್ರಹಗಳ ಕುರಿತು ಇರುವ ಭೀತಿ ಅಜ್ಞಾನಮೂಲಕವಾದದ್ದು. ಗ್ರಹ ಶಬ್ದಕ್ಕೆ ಇನ್ನೂ ಅನೇಕ ಅರ್ಥಗಳು ಇವೆ. “ಗ್ರಹ್ಣಾತಿ ಗತಿವಿಶೇಷಾನ್” ವಿಶಿಷ್ಟವಾದ ಗತಿಗಳನ್ನು ಹೊಂದಿರುವುದು ಗ್ರಹ ಎಂದು ಕರೆಯಲಾಗುತ್ತದೆ. ಮಾರ್ಗಿ, ವಕ್ರೀ, ಸ್ತಂಭೀ ಮೊದಲಾದ ಗತಿಗಳೇ ಗ್ರಹಗಳು ತೋರುವ ಗತಿವಿಶೇಷಗಳು. ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಪ್ರಾಯಶಃ ಗ್ರಹ ಶಬ್ದವನ್ನು ಈ ಅರ್ಥದಲ್ಲಿಯೇ ಬಳಸುತ್ತಿದ್ದರು. planet ಶಬ್ದದ ಮೂಲ ಗ್ರೀಕ್ ಶಬ್ದ planetes ಎಂದಾಗಿದ್ದು ಅಲೆದಾಡು ಅಥವಾ ಅಲೆಮಾರಿಗಳು ಎಂಬ ಅರ್ಥ. ಆಕಾಶದಲ್ಲಿ ಕೆಲವು ಕಾಯಗಳು ಸ್ಥಿರವಾಗಿರುತ್ತವೆ ಮತ್ತು ಕೆಲವು ಅಲೆದಾಡುತ್ತಿರುತ್ತವೆ. ಸ್ಥಿರವಾದ ಕಾಯಗಳು ನಕ್ಷತ್ರಗಳು, ಅಲೆಮಾರಿಗಳು ಗ್ರಹಗಳು. ಆಕಾಶೇ ಯಾನಿ ದೃಶ್ಯಂತೇ ಜ್ಯೋತಿರ್ಬಿಂಬಾನ್ಯನೇಕಶಃ || ತೇಷು ನಕ್ಷತ್ರಸಂಜ್ಞಾನಿ ಗ್ರಹಸಂಜ್ಞಾನಿ ಕಾನಿಚಿತ್ | ತಾನಿ ನಕ್ಷತ್ರನಾಮಾನಿ ಸ್ಥಿರಸ್ಥಾನಾನಿ ಯಾನಿ ವೈ || ಗಚ್ಛಂತೋ ಭಾನಿ ಗ್ರಹ್ಣಂತಿ ಸತತಂ ಯೇ ತು ತೇ ಗ್ರಹಾಃ | (ಬ್ರಹತ್ಪರಾಶರ ಹೋರಾ 3-2,3,4) ಆಕಾಶದಲ್ಲಿ ಕಾಣುವ ಅನೇಕ ಜ್ಯೋತಿರ್ಮಯ ಬಿಂಬಗಳ ಪೈಕಿ ಕೆಲವು ನಕ್ಷತ್ರಗಳಾಗಿವೆ ಮತ್ತು ಕೆಲವು ಗ್ರಹಗಳಾಗಿವೆ. ಅವುಗಳಲ್ಲಿ ಯಾವುದರ ಸ್ಥಾನಗಳು ಸ್ಥಿರವಾಗಿವೆ ಅವುಗಳನ್ನು ನಕ್ಷತ್ರಗಳೆಂದು ಕರೆಯಲಾಗುತ್ತದೆ. ಯಾವ ಕಾಯಗಳು ಆಕಾಶದಲ್ಲಿ ಪೂರ್ವಾಭಿಮುಖವಾಗಿ ನಕ್ಷತ್ರಗಳನ್ನು ದಾಟುತ್ತ ಚರಿಸುತ್ತವೆಯೋ ಅವುಗಳನ್ನು ಗ್ರಹಗಳೆಂದು ಕರೆಯಲಾಗುತ್ತದೆ. ಭಾರತೀಯ ಜ್ಯೋತಿಷ್ಯ ಅದರಲ್ಲೂ ಫಲಜ್ಯೋತಿಷ್ಯ (ಅಥವಾ ಹೋರಾಶಾಸ್ತ್ರ) ಎಲ್ಲ ಶಾಸ್ತ್ರೀಯ ನಿರ್ಣಯಕ್ಕಾಗಿ (ಫಲನಿರ್ಣಯ, ಮುಹೂರ್ತ, ಪ್ರಶ್ನೆ ಇತ್ಯಾದಿ) ಮತ್ತು ಗ್ರಹಗಣಿತದ (ಗೋಚಾರ, ಗ್ರಹಣ, ಸಂಕ್ರಮಣ ಇತ್ಯಾದಿ) ಸೌಲಭ್ಯಕ್ಕಾಗಿ ಭೂಕೇಂದ್ರಿತ ಗ್ರಹವ್ಯವಸ್ಥೆಯನ್ನು ಅನುಸರಿಸುತ್ತದೆ. ಈ ಗ್ರಹವ್ಯವಸ್ಥೆಯಲ್ಲಿ ಭೂಮಿಯು ಎಲ್ಲ ಗ್ರಹ ನಕ್ಷತ್ರಗಳ ಕೇಂದ್ರದಲ್ಲಿದೆ ಮತ್ತು ಅವು ಭೂಮಿಯನ್ನು ವಿಶಿಷ್ಠ ಗತಿಗಳಿಂದ ಸುತ್ತುತ್ತವೆ. ಇಲ್ಲಿ ಭೂಮಿಯನ್ನು ಕೇಂದ್ರಸ್ಥಾನೀಯವೆಂದು ಕಲ್ಪಿಸುವುದು ಕೇವಲ ನಿರೀಕ್ಷಣಾ ಸೌಕರ್ಯಕ್ಕಾಗಿ. ಪುರಾಣಗಳ ಪ್ರಕಾರ ಕೇಂದ್ರಸ್ಥಾನೀಯವಾದ ಭೂಮಿಯ ಸುತ್ತ ಸೂರ್ಯ, ಚಂದ್ರ, ಬುಧ, ಶುಕ್ರ, ಅಂಗಾರಕ, ಗುರು ಮತ್ತು ಶನಿಗಳು ಸುತ್ತುತ್ತಿರುತ್ತಾರೆ. ರಾಹು ಮತ್ತು ಕೇತುಗಳು ಛಾಯಾಗ್ರಹಗಳಾಗಿದ್ದಾರೆ. ನಕ್ಷತ್ರಮಂಡಲವು ಚಂದ್ರಕಕ್ಷೆಯ ನಂತರ ಹರಡಿದೆ. ಭಾರತೀಯ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಒಂಬತ್ತೇ ಇವೆ, ಈ ಸಂಖ್ಯೆ ನಿಶ್ಚಿತವಾದದ್ದು. ಈ ಗ್ರಹಗಳ ಪಟ್ಟಿಯಲ್ಲಿ ಹೊಸ ಸಂಶೋಧಿತ ಗ್ರಹಗಳನ್ನು ಪರಿಗಣಿಸುವಂತಿಲ್ಲ. ಅವುಗಳಿಗೆ ಶಾಸ್ತ್ರಕಾರರು ಫಲನಿರ್ಣವನ್ನು ಹೇಳಿರುವುದಿಲ್ಲ. ಆಧಿನಿಕ ಖಗೋಳ ವಿಜ್ಞಾನದ ಪ್ರಕಾರ ಗ್ರಹವ್ಯವಸ್ಥೆ ಸೂರ್ಯಕೇಂದ್ರಿತ ಸೌರವ್ಯೂಹವಾಗಿದೆ. ವಿಜ್ಞಾನದ ಪ್ರಕಾರ ಸೂರ್ಯ ಒಂದು ಗ್ರಹವೇ ಅಲ್ಲ ಅದು ಒಂದು ನಕ್ಷತ್ರ. ಅಂತೆಯೇ ಚಂದ್ರವೂ ಸಹ ಗ್ರಹವಲ್ಲ, ಭೂಮಿಯ ಉಪಗ್ರಹ. ರಾಹು-ಕೇತುಗಳು ಉಲ್ಲೇಖ ಇಲ್ಲ. ವೈಜ್ಞಾನಿಕ ಸೌರವ್ಯೂಹದ ಮಾದರಿಯನ್ನು ಮುಂದಿರಿಸಿಕೊಂಡು ಜ್ಯೋತಿಷ್ಯವನ್ನು ವಿಶ್ಲೇಷಣೆ ಮಾಡುವುದು ಸರಿಯಲ್ಲ. ಭಾರತೀಯ ಜ್ಯೋತಿಷ್ಯವೂ ಸಹ ಸೌರಕೇಂದ್ರಿತ ಗ್ರಹಮಂಡಲವನ್ನೇ ಒಪ್ಪುತ್ತದೆ. ಮೊದಲೇ ಹೇಳಿದಂತೆ ಭೂಕೇಂದ್ರ ಗ್ರಹವ್ಯವಸ್ಥೆ ನಿರೀಕ್ಷಣೆ ಮತ್ತು ಗಣಿತದ ಸೌಲಭ್ಯಕ್ಕಾಗಿ. ಆದರೆ ಗ್ರಹ ಎಂಬ ಪಾರಿಭಾಷಿಕ ಪದದ ಅರ್ಥದಲ್ಲಿರುವ ಶಾಸ್ತ್ರೀಯತೆ ವಿಜ್ಞಾನಕ್ಕೂ ಮತ್ತು ಜ್ಯೋತಿಷ್ಯಕ್ಕೂ ಅಂತರವನ್ನುಂಟುಮಾಡುತ್ತದೆ. ಮೊದಲು ವಿಜ್ಞಾನದ ಪ್ರಕಾರ ಗ್ರಹವೆಂದರೆ ಏನು ಎಂಬುದನ್ನು ನೋಡೋಣ. International Astronomical Union (IAU) ಎಂಬ ಸಂಸ್ಥೆ ಯಾವ ಅವಕಾಶೀಯ ಕಾಯವನ್ನು ಗ್ರಹ (planet) ಎನ್ನಬೇಕು ಎಂಬುದನ್ನು ನಿರ್ಧರಿಸಲು ಕೆಲವು ನಿಯಮಗಳನ್ನು ಅನುಸರಿಸುತ್ತದೆ. – ಅದು ಸೂರ್ಯನ ಸುತ್ತ ಸುತ್ತುತ್ತಲಿರಬೇಕು – ಗೋಳಾಕಾರ ಅಥವಾ ಗೋಳಾಕಾರಕ್ಕೆ ಹತ್ತಿರವಾದ ಆಕಾರವನ್ನು ಪಡೆದುಕೊಳ್ಳುವಷ್ಟು ಮೊತ್ತದ ಘನತ್ವವನ್ನು ಹೊಂದಿರಬೇಕು – ಉಪಗ್ರಹವಾಗಿರಬಾರದು (ಯಾವುದೇ ಬೇರೆ ಕಾಯವನ್ನು ಸುತ್ತುತ್ತಿರಬಾರದು) – ಅದರ ಕಕ್ಷೆಯಲ್ಲಿ ಯಾವುದೇ ಕ್ಷುದ್ರಕಾಯಗಳು ಅಥವಾ ಅವಕಾಶಿಯ ಅವಶೇಷಗಳ ಸಮೂಹವು ಇರಬಾರದು. ಇಷ್ಟೇ ಅಲ್ಲದೇ ಸೌರಮಂಡಲಲ್ಲಿರುವ ಅನೇಕ ಕುಬ್ಜಗ್ರಹಗಳನ್ನೂ ಕೂಡ ಗ್ರಹ ಎನ್ನಲು ಬರುವದಿಲ್ಲ. ಜ್ಯೋತಿಷ್ಯವು ಈ ಮೇಲಿನ ನಿಯಮಗಳನ್ನು ಅನುಮೋದಿಸುವುದೇ ಆದರೆ ಸೂರ್ಯ, ಚಂದ್ರರನ್ನು ಗ್ರಹಗಳೆಂದು ಕರೆಯಲು ಬರುವುದಿಲ್ಲ. ಅಂತೆಯೇ ಯುರೇನಸ್, ನೆಪ್ಚೂನ್ ಗಳನ್ನು ಸಹ ಗ್ರಹಗಳೆಂದು ಕರೆಯಬೇಕಾದೀತು (ಆಧುನಿಕ ಜ್ಯೋತಿಷ್ಕರು ಇವುಗಳಿಗೂ ಫಲನಿರ್ಣಯ ಮಾಡುತ್ತಿದ್ದಾರೆ). ಪ್ಲೂಟೋ ಈಗಾಗಲೇ IAU ಪ್ರಕಾರ ಗ್ರಹಪಟ್ಟದಿದ ಪದಚ್ಯುತಿಯನ್ನು ಹೊಂದಿದೆ. (ಪ್ಲೂಟೋ ಕುರಿತಾಗಿ ಗ್ರಹ ಫಲಾದೇಶ ಹೇಳುತ್ತಿರುವವರ ಗತಿ ಏನು?). ಪ್ಲೂಟೋ ಆಚೆ, ಮಂಗಳ-ಗುರು ಕಕ್ಷೆಗಳ ಮಧ್ಯೆ ಅನೇಕ ಕ್ಷುದ್ರ-ಕುಬ್ಜಗ್ರಹಗಳಿದ್ದು ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಇನ್ನು ಮೇಲಿನ ನಿಯಮಗಳಿಗೆ ಸರಿಹೊಂದುವ ಹೊಸ ಕಾಯದ ಪತ್ತೆಯಾದರೆ ಅದನ್ನೂ ಗ್ರಹವೆಂದು ಪರಿಗಣಿಸಬೇಕಾದೀತು ಫಲನಿರ್ಣಯ ಮಾಡಬೇಕಾದೀತು. ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿರುವ ಕೇವಲ 88 ದಿನಗಳಲ್ಲಿ ಸೂರ್ಯಪ್ರದಕ್ಷಿಣೆ ಮಾಡುವ ಬುಧಗ್ರಹ ಗ್ರಹವೋ ಅಥವಾ ಕುಬ್ಜಗ್ರಹವೋ ಎಂಬ ಚರ್ಚೆಯೊಂದಿದೆ. ಈ ಎಲ್ಲ ಕಾರಣಗಳಿಂದ ಖಗೋಳ ವಿಜ್ಞಾನ ಹೇಳುವ ಗ್ರಹದ ವ್ಯಾಖ್ಯೆ ಜ್ಯೋತಿಷ್ಯ ಶಾಸ್ತ್ರೀಯವಾಗಿ ಅಗ್ರಾಹ್ಯವಾಗಿದೆ. ಶಾಸ್ತ್ರಗಳ ರೀತ್ಯಾ ಗ್ರಹವೆಂದರೆ ಒಂದು ನಿರ್ದಿಷ್ಟ ಆಕಾಶ ಕಾಯವನ್ನು ಪ್ರತಿನಿಧಿಸುವ ದೇವತಾತತ್ತ್ವ ವಿಶೇಷ. ಇಂತಹ ಗ್ರಹ ದೇವತಾತತ್ತ್ವ ಸಂಖ್ಯೆಯಲ್ಲಿ ಒಂಬತ್ತು ಇವೆ. ಗಣಿತವನ್ನು ಆಧರಿಸಿ ಈ ಗ್ರಹಗಳ ಗತಿವಿಶೇಷವನ್ನು ನಾವು ತಿಳಿದುಕೊಳ್ಳಬಹುದು. ಕರ್ಮಾನುಸಾರ ಫಲಸೂಚಕರಾಗಿ ಈ ಗ್ರಹಗಳ ಪ್ರಭಾವವಿರುತ್ತದೆ. ಭೂಮಿಯು ಸಮಸ್ತ ಜೀವಜಾಲಕ್ಕೆ ಆಶ್ರಯಸ್ಥಾನವಾದುದರಿಂದ ನಾವು ಭೂಕೇಂದ್ರವ್ಯವಸ್ಥೆಯನ್ನು ಕಲ್ಪಿಸಿ ಗ್ರಹಗಳ ಮಧ್ಯಭಾಗದಲ್ಲಿದ್ದು ಅವುಗಳ ಪ್ರಭಾವಕ್ಕೆ ಒಳಗಾಗಿದ್ದೇವೆ. ಇದು ಜ್ಯೋತಿಷ್ಯ ರೀತ್ಯಾ ಗ್ರಹದ ಪರಿಭಾಷೆ. ಇದರಿಂದ ವಿಜ್ಞಾನಕ್ಕೆ ಯಾವುದೇ ವಿರೋಧವಾಗುವುದಿಲ್ಲ, ಇದು ಪ್ರಾಚೀನರು ಅನುಮೋದಿಸಿದ ಒಂದು ಪದ್ಧತಿ ವಿಶೇಷ. ಜ್ಯೋತಿಷ್ಯವನ್ನು ವಿಜ್ಞಾನವೆಂದು, ವೈಜ್ಞಾನಿಕ ಜ್ಯೋತಿಷೀಗಳೆಂದು ಹೇಳಿಕೊಳ್ಳುವ ಜ್ಯೋತಿಷ್ಕರಿಗೆ ಇದು ಗಮನದಲ್ಲಿರಲಿ. ಶಾಸ್ತ್ರವನ್ನು ಮುಂದಿರಿಸಿ ವಿಜ್ಞಾನವನ್ನು, ವಿಜ್ಞಾನವನ್ನು ಮುಂದಿರಿಸಿ ಶಾಸ್ತ್ರವನ್ನು ಟೀಕಿಸುವವರು ಇವೆರಡೂ ತನ್ನದೇ ಆದ ವ್ಯಾಖ್ಯೆ, ಪರಿಭಾಷೆ, ಪದ್ಧತಿ ಮತ್ತು ಮಿತಿಗಳನ್ನೊಳಗೊಂಡಿವೆ ಎಂಬುದನ್ನು ಮರೆಯಬಾರದು. ಆಧುನಿಕ ವಿಜ್ಞಾನಾಧಾರಿತವಲ್ಲದ್ದು ಎಂದು ಜ್ಯೋತಿಷ್ಯದ ಟೀಕೆ ಸರಿಯಲ್ಲ. ಕಲೆ, ಶಿಲ್ಪ, ಸಾಹಿತ್ಯ, ಸಂಗೀತ, ಶಾಸ್ತ್ರ, ಧರ್ಮ ಮೊದಲಾದವುಗಳು ವೈಜ್ಞಾನಿಕವಾಗಿಯೇ ಇರಬೇಕೆಂಬ ವಾದವೇ ಅಪ್ರಬುದ್ಧವಾದ. ವೈದಿಕ ಮೂಲದ ಎಲ್ಲ ವಿದ್ಯೆಗಳ ಗುರಿ ಇಹಪರಗಳಲ್ಲಿ ಸುಖಪ್ರಾಪ್ತಿ ಮತ್ತು ಆತ್ಯಂತಿಕವಾಗಿ ಪರಮ ಪುರುಷಾರ್ಥ ಪ್ರಾಪ್ತಿ. ಕೇವಲ ಭೌತಿಕ ಜಿಜ್ಞಾಸೆ ಶಾಸ್ತ್ರಗಳ ಗುರಿಯೂ ಅಲ್ಲ ಪ್ರಯೋಜನವೂ ಅಲ್ಲ. ಸಾಧನೆ ಮತ್ತು ಸಂಶೋಧನೆಗಳೆರಡೂ ಆಧ್ಯಾತ್ಮಿಕ ಉನ್ನತಿಯನ್ನು ತಂದುಕೊಡುವಂಥವುಗಳಾಗಿರಬೇಕೆಂಬ ಆಶಯ ಶಾಸ್ತ್ರಗಳದ್ದಾಗಿದೆ. ಜ್ಯೋತಿಷ್ಯವನ್ನು ವಿಜ್ಞಾನ ಅಥವಾ ಪಾಶ್ಚಾತ್ಯ ಮನೋವಿಜ್ಞಾನದ ದೃಷ್ಟಿಯಿಂದ ವಿಮರ್ಶಿಸುವುದು ಸರಿಯಲ್ಲ. ವಿಜ್ಞಾನದ ಪರಿಭಾಷೆಯಲ್ಲಿ ಜ್ಯೋತಿಷ್ಯವನ್ನು ವಿವರಿಸುವುದೂ ಸಹ ಸರಿಯಲ್ಲ. ವೈದಿಕ ಮೌಲ್ಯ ಮತ್ತು ತತ್ತ್ವಶಾಸ್ತ್ರವನ್ನು ಆಧಾರಿಸಿಯೇ ಭಾರತೀಯ ವಿದ್ಯೆಗಳನ್ನು ತಿಳಿದುಕೊಳ್ಳಬೇಕು. ಗ್ರಹಗಳು ತಮ್ಮ ಪ್ರಭಾವವನ್ನು ಗುರುತ್ವಾಕರ್ಶಣ ಶಕ್ತಿಯಿಂದಾಗಿಯೋ ಅಥವಾ ಇನ್ಯಾವುದೋ ವಿದ್ಯುದಾಯಸ್ಕಾಂತೀಯ ಶಕ್ತಿಯಿಂದಾಗಿಯೋ ಉಂಟುಮಾಡುತ್ತವೆ ಎಂಬ ವಿವರಣೆ ಅಲ್ಪಬುದ್ಧಿ ಪ್ರಲಾಪ ಮಾತ್ರ. ಗ್ರಹಪ್ರಭಾವಕ್ಕೆ ನಾವು ಕರ್ಮಸಿದ್ಧಾಂತವನ್ನೇ ಅನುಸರಿಸಬೇಕು. ಗೀತೆಯಲ್ಲಿ ಹೇಳಿರುವಂತೆ ಈ ಕರ್ಮದ ಗತಿಯು ಬಹಳ ಗಹನವಾದದ್ದು ಮತ್ತು ಜ್ಞಾನಿಗಳಿಗೆ ಮಾತ್ರ ಗೋಚರವಾದದ್ದು.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ