ಲಗ್ನದ ಚಂದ್ರನ ಮಹತ್ವ? ಕುಂಡಲಿಯ ಲಗ್ನದಲ್ಲಿ ಪೂರ್ಣಿಮಾ ಚಂದ್ರನು ಇದ್ದರೆ ಇಂತಹ ಜಾತಕದವರು ಉತ್ತಮ ರೂಪ, ಮೃದುತ್ವದ ದೇಹ ಹೊಂದಿರುತ್ತಾರೆ. ವೃಷಭ, ಮೇಷ ಕರ್ಕಾಟಕ ಲಗ್ನವಾಗಿ ಇಲ್ಲಿ ಚಂದ್ರನಿದ್ದರೆ ಇವರು ರೂಪವಂತರೂ, ಹಣವಂತರೂ ಆಗುತ್ತಾರೆ. ಬೇರೆ ರಾಶಿಗಳಲ್ಲಿ ಚಂದ್ರನಿದ್ದರೆ ಇವರು ಜಡತೆ ರೋಗ, ಬಡತನವನ್ನು ಅನುಭವಿಸುತ್ತಾರೆ. ಕರ್ಕಾಟಕ, ವೃಷಭ, ಮೇಷ ಲಗ್ನದಲ್ಲಿ ಚಂದ್ರನಿದ್ದರೆ ದಯೆ, ದಾಕ್ಷಿಣ್ಯ, ಚತುರತೆ, ಸುಂದರ, ಧನಿಕ, ಗುಣವಂತರು ಆಗಿರುತ್ತಾರೆ. ಲಗ್ನದಲ್ಲಿರುವ ಚಂದ್ರನಿಂದ ಇಪ್ಪತ್ತೇಳನೇ ವರ್ಷದಲ್ಲಿ ಕಾಯಿಲೆಗಳು ಬರುತ್ತವೆ. ಲಗ್ನದಲ್ಲಿ ಚಂದ್ರ ಪಾಪಗ್ರಹ ಯುತನಾಗಿದ್ದರೆ ಇವರಿಗೆ ಆಗಾಗ ಶೀತ ಬಾಧೆ ಇರುತ್ತದೆ. ಲಗ್ನದಲ್ಲಿ ಬಲಿಷ್ಠವಾದ ಚಂದ್ರನು ಇದ್ದರೆ ಇಂತಹ ಜಾತಕದವರು ಮಹಾ ಚತುರರೂ, ಅಲ್ಲದೆ ಮುಖಂಡತ್ವವನ್ನು ವಹಿಸುವವರೂ ಆಗಿರುತ್ತಾರೆ. ಸ್ತ್ರೀಯರಿಂದ ಗೌರವ, ಸ್ಥಾನಮಾನಗಳು ಸಿಗುತ್ತದೆ. ಇವರು ಪರಾಕ್ರಮಿಗಳಾಗಿದ್ದು, ರಾಜ ವೈಭವವನ್ನು ಹೊಂದುತ್ತಾರೆ. ಚಂದ್ರನು ಚರ ರಾಶಿ ಅಥವಾ ಉಭಯ ರಾಶಿ ಗತನಾದರೆ ಸಂಚಾರಿ, ಸ್ಥಿರ ಇಲ್ಲದ ಬುದ್ಧಿ, ಸ್ತ್ರೀಯರ ಸ್ವಭಾವ, ಮಿತ್ರ ವತ್ಸಲ, ದಯಾಳು, ಸಮಾಜದೊಂದಿಗೆ ಬೆರೆತುಕೊಂಡಿರುತ್ತಾರೆ. ಸ್ತ್ರೀಯರಿಗೆ ಪ್ರಿಯನಾಗಿದ್ದು, ಮಿತ್ರರೊಂದಿಗೆ ಇರುವವನೂ, ಉದಾರಿಯೂ, ಸಜ್ಜನನೂ ಆಗಿರುತ್ತಾನೆ. ಸಾರ್ವಜನಿಕ ಹಿತಾಸಕ್ತಿಯುಳ್ಳವನಾಗಿದ್ದು, ಬಹು ಜನರೊಂದಿಗೆ ಬೆರೆತು ನೀಚ ಜನರಿಂದ ಮಾನ್ಯತೆ ಪಡೆಯುತ್ತಾರೆ. ...