*ಐಂ*ಓಂ ಶ್ರೀ ಲಕ್ಷ್ಮಿವೆಂಕಟೇಶ್ವರಾಯ ನಮಃ* ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ರಚಿಸಿದವರು: ವಿದ್ಯಾವಿಶಾರದ ಕೀಳಾತ್ತೂರು ಶ್ರೀನಿವಾಸಾಚಾರ್ಯ,ಪಿ.ಓ.ಎಲ್ ಶಿರೋಮಣಿ ಮತ್ತು ಹಿಂದಿ ವಿಶಾರದ ಮುನ್ನುಡಿ:- ಜ್ಯೋತಿಷ್ಯ,ಹಸ್ತರೇಖೆ,ಸಂಖ್ಯಾ,ಈ ಮೂರು ಶಾಸ್ತ್ರಗಳು ಒಂದಕ್ಕೊಂದು ಹೆಣೆದುಕೊಂಡು ಇರುವ ಶಾಸ್ತ್ರಗಳು.ಕ್ರೈಸ್ತನಿಗಿಂತಲೂ ಪೂರ್ವದಲ್ಲಿಯೇ ಈ ಮೂರು ಶಾಸ್ತ್ರಗಳೂ ಭಾರತದಲ್ಲಿಯೂ ಗ್ರೀಸ್ ದೇಶದಲ್ಲಿಯೂ ಒಂದೇ ರೀತಿಯಾಗಿ ಅಭಿವೃದ್ದಿ ಹೊಂದುತ್ತಾ ಪ್ರಸಿದ್ದಿಗೆ ಬಂದಿತು. ಆದರೆ ಈ ಕಾಲದಲ್ಲಿ ಈ ಮೂರು ಶಾಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ,ಭವಿಷ್ಯ,ವರ್ತಮಾನ ಕಾಲಗಳ ಫಲಗಳನ್ನು ತಿಳಿಸುವ ಪಂಡಿತಮಣಿಗಳು ಅಮೇರಿಕಾ,ಬ್ರಿಟನ್,ಜರ್ಮನಿ,ಜಪಾನ್ ಮೊದಲಾದ ದೇಶಗಳಲ್ಲಿ ಈಗಲೂ ಇರುವರು,ಎಂದರೆ ಅತಿಶಯೋಕ್ತಿಯಾಗಲಾರದು. ಮಾನವನ ಭವಿಷ್ಯವನ್ನು ತಿಳಿಸುವ ಈ ಮೂರು ಶಾಸ್ತ್ರಗಳ ಮಹತ್ವವು ಸಮಾನವಾಗಿಯೇ ಇದ್ದರೂ ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡಕ್ಕಿಂತಲೂ ಸಂಖ್ಯಾ ಶಾಸ್ತ್ರ(ನ್ಯೂಮರಾಲಜಿ)ದಲ್ಲಿ ಮಾತ್ರ ಒಂದು ವೈಶಿಷ್ಟ್ಯ ಇದೆ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡೂ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರಾ ಆ ಬಗೆಯ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಗಳನ್ನು ಕೊಡುತ್ತದೆ. ...