Skip to main content

ಕರ್ಕರಾಶಿಯಲ್ಲಿ ಗುರು ಗೋಚಾರ 19 ಜೂನ್ 2014, ಗುರುವಾರದಂದು ಕರ್ಕರಾಶಿಯಲ್ಲಿ ಪ್ರವೇಶ ಮಾಡುತ್ತಾನೆ

ಕರ್ಕರಾಶಿಯಲ್ಲಿ ಗುರು ಗೋಚಾರ 19 ಜೂನ್ 2014, ಗುರುವಾರದಂದು ಕರ್ಕರಾಶಿಯಲ್ಲಿ ಪ್ರವೇಶ ಮಾಡುತ್ತಾನೆ ನವಗ್ರಹಗಳಲ್ಲಿ ಗುರುಗ್ರಹವು ನೈಸರ್ಗಿಕವಾಗಿ ಹೆಚ್ಚು ಶುಭ ಎಂದು ಹೇಳಲಾಗಿದೆ. ಎಲ್ಲರ ಜೀವನದದಲ್ಲಿ ಗುರು ಅನುಗ್ರಹವಿದ್ದಲ್ಲಿಯೇ ಸಂಪತ್ತು, ಧನಪ್ರಾಪ್ತಿ, ಒಳ್ಳೆಯ ಸ್ಥಾನಮಾನ, ಕೌಟುಂಬಿಕ ಸುಖ ಶಾಂತಿ, ವಿವಾಹ ಯೋಗ, ಸಂತಾನ ಸುಖ, ಆರೋಗ್ಯ ಭಾಗ್ಯ, ಒಳ್ಳೆಯ ಬುದ್ಧಿ ಮೊದಲಾದವುಗಳನ್ನು ಸಾರ್ಥಕವಾಗಿ ಅನುಭವಿಸಲು ಸಾಧ್ಯ. ಇವುಗಳ ಕಾರಕನಾದ ಗುರುವು ತನ್ನ ಪ್ರತಿವಾರ್ಷಿಕ ಗೋಚಾರದಿಂದ ದ್ವಾದಶ ರಾಶಿಗಳ ಮೇಲೆ ಗುರುತರವಾದ ಪ್ರಭಾವವನ್ನು ಬೀರುತ್ತಾನೆ. ಗುರುವು ಪೂರ್ಣ ರಾಶಿಚಕ್ರವನ್ನು ಸುತ್ತಲು ಹನ್ನೆರಡು ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತಾನೆ. ಆದ್ದರಿಂದ, ಪ್ರತಿಯೊಂದು ರಾಶಿಯಲ್ಲಿ ಗುರುವಿನ ವಾಸ್ತವ್ಯ ಸರಿಸುಮಾರು ಒಂದು ವರ್ಷಗಳಷ್ಟಾಗಿರುತ್ತದೆ. ಗ್ರಹಗತಿಗಳಲ್ಲಿ ಉಂಟಾಗುವ ವಕ್ರೀ, ಸ್ತಂಭೀ ಚಾರಣಗತಿಗಳಿಂದಾಗಿ ಈ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಅವಧಿಯ ಅಂತರವನ್ನು ಕಾಣುಬಹುದು. ಗುರು ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಸಂಚಾರ ಮಾಡುತ್ತಾನೆ, ಈ ದೀರ್ಘ ಕಾಲಾವಧಿಯ ಗುರು ಗೋಚಾರಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಕೊಟ್ಟಿರುತ್ತಾರೆ. ದೇವಗುರು ಬ್ರಹಸ್ಪತಿಯು 19 ಜೂನ್ 2014, ಗುರುವಾರದಂದು ಕರ್ಕರಾಶಿಯಲ್ಲಿ ಪ್ರವೇಶ ಮಾಡುತ್ತಾನೆ. ಕರ್ಕರಾಶಿಯಲ್ಲಿ ಗುರು ಪ್ರವೇಶ ಸಮಯ ಮುಂಜಾನೆ 08ಗಂ 47ನಿಮಿಷ. ಪಂಚಾಂಗದಂತೆ ಅವತ್ತು ಜ್ಯೇಷ್ಠ ಮಾಸ – ಕೃಷ್ಣ ಪಕ್ಷ – ಸಪ್ತಮೀ ತಿಥಿ – ಪೂರ್ವಾ ಭಾದ್ರಪದ ನಕ್ಷತ್ರವಿರುತ್ತದೆ. ಪುಣ್ಯಕಾಲವು ಬೆಳಿಗ್ಗೆ 06ಗಂ 56ನಿಮಿಷದಿಂದ 10ಗಂ 38ನಿಮಿಷದ ವರೆಗೆ ಇರುತ್ತದೆ. ಗೌಣವಾಗಿ ಪುಣ್ಯಕಾಲವು ಆ ದಿವಸ ಸೂರ್ಯಾಸ್ತದ ಪರ್ಯಂತವಾಗಿ ಇರುತ್ತದೆ. (ಈ ಗುರು ರಾಶಿ ಪ್ರವೇಶ ಸಮಯ ದೇಶಾಂತರದಿಂದ ಬೇರೆ ಬೇರೆಯಾಗಿರುತ್ತದೆ, ಸ್ಥಾನೀಯ ಪಂಚಾಂಗಗಳನ್ನು ನೋಡಿಕೊಳ್ಳಬೇಕು) ಕರ್ಕರಾಶಿಯು ಗುರುವಿನ ಉಚ್ಚರಾಶಿಯಾಗಿದೆ. ದ್ವಾದಶರಾಶಿಗಳಲ್ಲಿ ನಿರಂತರ ನಡೆಯುತ್ತಿರುವ ಗ್ರಹಗಳ ಗತಿಯನ್ನು (ಗೋಚಾರ) ಎಂದು ಜ್ಯೋತಿಷ್ಯದಲ್ಲಿ ಕರೆಯಲಾಗುತ್ತದೆ. ಜನ್ಮಪತ್ರಿಕೆಯಲ್ಲಿ ವಿವಿಧ ಸ್ಥಾನಗಳಲ್ಲಿ ಸ್ಥಿತ ಗ್ರಹಗಳು ಆ ಸಮಯದ ಗ್ರಹಗೋಚಾರವೇ ಆಗಿವೆ. ಹೀಗಾಗಿ ಜನ್ಮಪತ್ರಿಕೆ ಜನ್ಮಸಮಯದ ಗೋಚಾರದ ಪಟ್ಟಿಯೇ ಆಗಿರುತ್ತದೆ. ಜನ್ಮಪತ್ರಿಕೆಯಲ್ಲಿಯ ಗ್ರಹಗಳು ಆಯುಷ್ಯದುದ್ದಕ್ಕು ಪ್ರಭಾವವನ್ನು ಹೇಗೆ ಬೀರುತ್ತವೇಯೋ, ಜೀವನದ ವಿವಿಧ ಕಾಲಖಂಡದಲ್ಲಿ ಅದೇ ಗ್ರಹಗಳು ವಿವಿಧ ರಾಶಿ-ಸ್ಥಾನಗಳಲ್ಲಿ ಸ್ಥಿತವಾಗಿ ಈ ಪ್ರಭಾವಕ್ಕೆ ಪೂರಕ ಅಥವಾ ವಿರೋಧಕಗಳಾಗಿರುತ್ತವೆ. ಆದ್ದರಿಂದ ಪ್ರಸಕ್ತ ಸಮಯದ ಗೋಚರಿಸುವ ಗ್ರಹಗಳ ಫಲಾಫಲ ವಿಚಾರವನ್ನು ಅವಶ್ಯವಾಗಿ ಮಾಡಲೇಬೇಕು. ಮುಹೂರ್ತಾದಿ ಗಣಿತಗಳಿಗಂತೂ ಇದು ಅತೀ ಅವಶ್ಯಕ. ಗುರುಗ್ರಹನು ಧನು ಮತ್ತು ಮೀನರಾಶಿಗಳ ಅಧಿಪತಿಯಾಗಿದ್ದು ಕರ್ಕ, ಮಕರ ರಾಶಿಗಳು ಕ್ರಮವಾಗಿ ಅವನ ಉಚ್ಚ ಮತ್ತು ನೀಚ ಕ್ಷೇತ್ರಗಳಾಗಿರುತ್ತವೆ. ಧನುವು ಮೂಲತ್ರಿಕೋಣ ರಾಶಿಯಾಗಿರುತ್ತದೆ. ಗುರು ಜ್ಯೋತಿಷ್ಯದಲ್ಲಿ ಪುರುಷ ಗ್ರಹ. ಗುರುವು ನೈಸರ್ಗಿಕವಾಗಿ ಶುಭ ಗ್ರಹನಾಗ್ರುತ್ತಾನೆ. ಗುರುವು ಆಕಾಶ ತತ್ವಕ್ಕೆ ಅಭಿಮಾನಿ ಮತ್ತು ವಾತ-ಕಫ ದೋಷಗಳ ಕಾರಕನಾಗಿದ್ದಾನೆ. ರವಿ-ಚಂದ್ರ-ಮಂಗಳರು ಮಿತ್ರ ಗ್ರಹರಾಗಿರುತ್ತಾರೆ, ಬುಧ-ಶುಕ್ರರು ಶತ್ರುಗ್ರಹಗಳಾಗಿದ್ದಾರೆ ಮತ್ತು ಶನಿ-ರಾಹುಗಳು ತಟಸ್ಥರಾಗಿರುತ್ತಾರೆ. ಬೃಹತ್ಪರಾಶರಿಯಲ್ಲಿ ಗುರುವಿನ ಸ್ವರೂಪವನ್ನು ಈ ರೀತಿ ವರ್ಣಿಸಿರುತ್ತಾರೆ – ಬ್ರಹದ್‍ಗಾತ್ರೋ ಗುರುಶ್ಚೈವ ಪಿಂಗಲೋ ಮೂರ್ದಜೇಕ್ಷಣೈಃ | ಕಫಪ್ರಕೃತಿಕೋ ಧಿಮಾನ್ ಸರ್ವಶಾಸ್ತ್ರವಿಶಾರದಃ || (ಬೃ-ಪ-ಹೋ ೦೩-೨೮) ಬೃಹತ್ತಾದ ದೇಹ, ಹಳದಿ ಬಣ್ಣದ ನೇತ್ರಗಳು ಮತ್ತು ಕೇಶಗಳುಳ್ಳ, ಕಫಪ್ರಕೃತಿಯುಳ್ಳವನೂ, ಸರ್ವಶಾಸ್ತ್ರಗಳನ್ನು ಬಲ್ಲವನೂ, ಬುದ್ಧಿವಂತನಾದವನು ಇವು ಗುರುವಿನ ಲಕ್ಷಣ. ಮಂತ್ರೇಶ್ವರರ ಪ್ರಕಾರ – ಪೀತದ್ಯುತಿಃ ಪಿಂಗಕಚೇಕ್ಷಣಃ ಸ್ಯಾತ್ ಪೀನೋನ್ನತೋರಾಚ್ಚ ಬೃಹಶ್ಚರೀರಃ | ಕಫಾತ್ಮಕಃ ಶ್ರೇಷ್ಠಮತಿಃ ಸುರೇಢ್ಯಃ ಸಿಂಹಾಬ್ಜನಾದಶ್ಚ ವಸುಪ್ರಧಾನಃ || (ಫ-ದೀ ೦೨-೧೨) ಗುರುವು ಹಳದಿ ಬಣ್ಣದ ಕಾಂತಿಯುತ ಶರೀರ ಉಳ್ಳವನು ನೀಲಿ ಮತ್ತು ಹಳದಿ ಮಿಶ್ರಿತ ಬಣ್ಣದ ಕಣ್ಣು ಮತ್ತು ಕೂದಲು ಉಳ್ಳವನು, ಸ್ಥೂಲ ಮತ್ತು ಎತ್ತರವಾದ ದೊಡ್ಡ ಗಾತ್ರದ ಶರೀರ ಉಳ್ಳವನು, ಕಫ ಪ್ರಕೃತಿಯವನು, ಶ್ರೇಷ್ಟವಾದ ಬುದ್ಧಿ ಉಳ್ಳವನು, ಸಿಂಹದ ಘರ್ಜನೆಯಂತೆ ಸ್ವರ ಉಳ್ಳವನು, ಧನಕಾರಕನು, ಮಂತ್ರಿಯು ಆಗಿರುತ್ತಾನೆ. ಗುರು ಶಬ್ದದ ಅರ್ಥವೇ ದೊಡ್ಡಗಾತ್ರದವನು, ಭಾರವಾದಂತವನು ಎಂಬುದಾಗಿದೆ. ಫಲದೀಪಿಕಾ ಮತದಂತೆ ಗುರುವಿನಿಂದ ಚಿಂತಿಸಬೇಕಾದ ವಿಷಯಗಳು – ಜ್ಞಾನಂ ಸದ್ಗುಣಮಾತ್ಮಜಂ ಚ ಸಚಿವಂ ಸ್ವಾಚಾರಮಾಚಾರ್ಯಕಮ್ ಮಾಹಾತ್ಮ್ಯಂ ಶ್ರುತಿಶಾಸ್ತ್ರಧೀಸ್ಮೃತಿಮತಿಂ ಸರ್ವೋನ್ನತಿಂ ಸದ್ಗತಿಮ್ | ದೇವಬ್ರಾಹ್ಮಣಭಕ್ತಿಮಧ್ವರತಪಃ ಶ್ರದ್ಧಾಶ್ಚ ಕೋಶಸ್ಥಲಂ ವೌದುಷ್ಯಂ ವಿಜಿತೇಂದಿಯಂ ಧನಸುಖಂ ಸಂಮಾನಮೀಢ್ಯಾದ್ದಯಾಮ್ || (ಫ-ದೀ ೦೨-೦೫) ಜ್ಞಾನ, ಸದ್ಗುಣ, ಮಕ್ಕಳು, ಮಂತ್ರಿ, ಸದಾಚಾರ, ವಿದ್ಯಾದಾರ, ಮಹತ್ವ, ವೇದ, ಶಾಸ್ತ್ರ ಮತ್ತು ಸ್ಮೃತಿ ಇತ್ಯಾದಿಗಳ ಜ್ಞಾನ, ಸಕಲ ವಿಚಾರಗಳಲ್ಲಿ ಅಭಿವೃದ್ಧಿ, ಸದ್ಗತಿ, ದೇವ-ಬ್ರಾಹ್ಮಣರಲ್ಲಿ ಭಕ್ತಿ, ತ್ಯಾಗ, ತಪಸ್ಸು, ಶ್ರದ್ಧೆ, ಕೋಶಾಗಾರ, ವಿದ್ವತ್ತು, ಜಿತೇಂದ್ರಿಯ, ಪತಿ, ಸುಖ, ಸನ್ಮಾನ, ಪ್ರಶಂಸೆ, ದಯೆ ಮೊದಲಾದ ವಿಚಾರ ಗುರುವಿನಿಂದ ಚಿಂತಿಸಬೇಕು. ಗೋಚಾರವನ್ನು ಚಂದ್ರರಾಶಿ ಅಥವಾ ಜನ್ಮರಾಶಿಯಿಂದ ತಿಳಿಯಬೇಕು. ಸರ್ವೇಷು ಲಗ್ನೇಷ್ವಪಿ ಸತ್ಸು ಚಂದ್ರಲಗ್ನಂ ಪ್ರಧಾನಂ ಖಲು ಗೋಚರೇಷು | ತಸ್ಮಾತ್ತದೃಕ್ಷಾದಪಿ ವರ್ತಮಾನಗ್ರಹೇಂದ್ರಚಾರೈಃ ಕಥಯೇತ್ಫಲಾನಿ || (ಫ-ದೀ, ಗೋಚರಫಲಾಧ್ಯಾಯ-೦೧) ಗೋಚರದ ಫಲಗಳನ್ನು ತಿಳಿಯಲು ಎಲ್ಲ ಲಗ್ನಗಳಲ್ಲಿ ಚಂದ್ರಲಗ್ನವೇ ಪ್ರಧಾನ ಆಗಿರುತ್ತದೆ. ಆದ್ದರಿಂದ ತಾತ್ಕಾಲಿಕ ಗ್ರಹರ ಚಾರದ ಫಲಾಫಲ ತಿಳಿಯಲು ಚಂದ್ರನಿಂದ (ಜನ್ಮರಾಶಿ) ಆ ಗ್ರಹಸ್ಥಿತ ರಾಶಿಗಳನ್ನು ಗಣಿಸಬೇಕು. ಗುರುಗ್ರಹದ ಗೋಚಾರವನ್ನು ನೋಡೋಣ – ಸ್ವಾಯಧರ್ಮತನಯಾಸ್ತಸಂಸ್ಥಿತೋ ನಾಕನಾಯಕ ಪುರೋಹಿತಃ ಶುಭಃ | ರಿಃಫರಂಧ್ರಖಜಲತ್ರಿಗೈರ್ಯದಾ ವಿದ್ಯತೇ ಗಗನಚಾರಿಭಿರ್ನ ಹಿ || (ಫ-ದೀ, ಗೋಚರಫಲಾಧ್ಯಾಯ-೦೭) ಜನ್ಮರಾಶಿಯಿಂದ ಗುರುವು ಶುಭಫಲ ನೀಡುವ ಸ್ಥಾನಗಳು 2-5-7-9-11 ಮತ್ತು ಅವುಗಳ ವೇಧರಾಶಿಗಳು 12-4-3-9-10-8 ಆಗಿರುತ್ತವೆ. ಬ್ರಹಸ್ಪತಿಯು ಜನ್ಮರಾಶಿಯಿಂದ 2-5-7-9-11 ನೇಯವನಾಗಿ ಸಂಚಾರ ಮಾಡುತ್ತಿರುವಾಗ ಶುಭನಾಗಿರುತ್ತಾನೆ. ಕರ್ಕಸ್ಥ ಗುರುವಿನ ಕುರಿತು ಈ ರಾಶಿಗಳು ಕ್ರಮವಾಗಿ ಮಿಥುನ-ಮೀನ-ಮಕರ-ವೃಶ್ಚಿಕ-ಕನ್ಯಾರಾಶಿಗಳಾಗಿವೆ. ಈ ರಾಶಿಯವರಿಗೆ ಶುಭಫಲ. ಇದೇ ರೀತಿ ಜನ್ಮರಾಶಿಯಿಂದ 4-6-8-12 ನೇಯವನಾಗಿ ಗುರುಗೋಚಾರವಾಗಲು ಅಶುಭ ಫಲವನ್ನು ಕೊಡುತ್ತಾನೆ. ಪ್ರಸಕ್ತ ಈ ರಾಶಿಗಳು ಕ್ರಮವಾಗಿ ಮೇಷ-ಕುಂಭ-ಧನು-ಸಿಂಹ ರಾಶಿಗಳಾಗಿವೆ. ಈ ರಾಶಿಗಳಿಗೆ ಅಶುಭ ಫಲ. ಉಳಿದ ರಾಶಿಗಳಾದ ವೃಷಭ-ಕರ್ಕ-ತುಲಾ ರಾಶಿಗಳಿಗೆ ಶುಭಾಶುಭ ಮಿಶ್ರಫಲ. ಈ ಗುರು ಗೋಚರದ ಮುಖ್ಯ ಶುಭ ಫಲಾನುಭವಿಗಳು ಮಿಥುನ, ಕನ್ಯಾ ಮತ್ತು ವೃಶ್ಚಿಕ ರಾಶಿಯವರು ಎಂದು ಹೇಳಬಹುದು. (ಗ್ರಹ ಗೋಚರಿಯ ಬಗ್ಗೆ ಒಂದು ಸೂಚನೆ – ಬರೀ ಗೋಚರೀ ಗ್ರಹದ ಫಲವನ್ನು ಮಾತ್ರ ಪೂರ್ಣವಾಗಿ ಮಾನ್ಯ ಮಾಡಬಾರದು. ಜಾತಕದಲ್ಲಿರುವ ಗೋಚರೀ ಗ್ರಹದ ಸ್ಥಿತಿಯನ್ನು, ಅಷ್ಟಕವರ್ಗ ಮತ್ತು ದಶಾಂತರ್ದಶಾದಿಗಳನ್ನು ಪರಿಗಣಿಸಿ ಫಲಗ್ರಹಣ ಮಾಡಬೇಕು. ಯಾವುದೇ ಗ್ರಹ ಗೋಚಾರದಲ್ಲಿ ಅಶುಭನಾಗಿ ಜಾತಕದಲ್ಲಿ ಶುಭನಾಗಿದ್ದಲ್ಲಿ ಅಶುಭ ಗೋಚಾರ ಫಲ ಕಡಿಮೆಯಾಗಿರುತ್ತದೆ. ಕೇವಲ ಗೋಚಾರವೊಂದೇ ಫಲ ನಿರ್ಣಾಯಕವಲ್ಲ. ಗೋಚಾರದ ಬಗ್ಗೆ ಅತೀಯಾದ ಪ್ರಚಾರ ಇತ್ತಿಚಿಗೆ ನಡೆಯುತ್ತಿರುವ ಕಾರಣ ಉದ್ವೇಗ ಭಯಪಡುವ ಅಗತ್ಯವಿಲ್ಲ.) ಕರ್ಕ ರಾಶಿಯು ಗುರುವಿನ ಉಚ್ಚರಾಶಿಯಾದುದರಿಂದ ಸಾಮಾನ್ಯವಾಗಿ ಎಲ್ಲ ದ್ವಾದಶರಾಶಿಯವರಿಗೂ ಶುಭ ಫಲವನ್ನೇ ಹೇಳಬಹುದು. ಗ್ರಂಥಗಳಲ್ಲಿ ಸ್ಥಾನಾಂತರದಿಂದ ಶುಭಾಶುಭ ಗೋಚಾರ ಫಲಗಳನ್ನು ಹೇಳಿರುವುದನ್ನು ಇಲ್ಲಿ ಸಮನ್ವಯ ಮಾಡಿ ಕೊಡಲಾಗುತ್ತಿದೆ. ಈ ಗುರು ಗೋಚಾರ ಎಲ್ಲರಿಗೂ ಆರ್ಥಿಕ ಲಾಭ ಮತ್ತು ಪ್ರಗತಿಯನ್ನು ತಂದುಕೊಡಲಿದೆ. ಅಶುಭ ಗುರು ಗೋಚಾರವಿದ್ದಾಗೆ ಸಾಮಾನ್ಯವಾಗಿ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಉದ್ವೇಗ, ಭಯ, ದ್ವಿಧಾ ಮನಸ್ತಿತಿ, ಯಾವಾಗಲೂ ಕಳವಳ ಚಿಂತೆ ಮೊದಲಾದ ಲಕ್ಷಣಗಳನ್ನು ನೋಡಬಹುದು. ಮಾರ್ಗದರ್ಶಕರ ಕೊರತೆ, ವಂಚನೆ ತಪ್ಪುದಾರಿಯನ್ನು ತೋರುವ ಜನರ ಸಹವಾಸವುಂಟಾಗಬಹುದು. ಜಾಗರೂಕತೆ ಮತ್ತು ಚಿಂತನೆ ಬಹಳ ಮುಖ್ಯ. ಕೆಳಗೆ ಹೇಳಿದ ಗೋಚಾರ ಫಲಗಳನ್ನು ಪೂರ್ವಸೂಚನೆ ಮತ್ತು ಮಾರ್ಗದರ್ಶನಗಳೆಂದು ಧನಾತ್ಮಕವಾಗಿ ಪರಿಗಣಿಸಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಬರಬಹುದಾದ ತೊಂದರೆಗಳಿಂದ ಪಾರಾಗಬಹುದು. ಅಶುಭ ಫಲವಿದ್ದವರೂ ಫಲಸೂಚಿತ ವಿಷಯಗಳ ಕುರಿತು ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಬೇಕು. ಜ್ಯೋತಿಷ್ಯದ ಭಾಷೆಯಲ್ಲಿ ಹೇಳಲಾಗುವ ಫಲನಿರ್ದೇಶಗಳಿಂದ ಭಯಪಡುವ ಕಾರಣವಿರುವದಿಲ್ಲ. ಗ್ರಹಗಳ ಸಂಚಾರ ನಮ್ಮ ಕರ್ಮಗಳ ಫಲವನ್ನು ಸೂಚಿಸಲು ಇರುತ್ತದೆ. ವಾಸ್ತವಿಕ ಯಾವುದೇ ಗ್ರಹದಿಂದ ಪಕ್ಷಪಾತವಾಗಲಿ ಶುಭಾಶುಭ ಫಲಗಳನ್ನು ಉಂಟುಮಾಡುವುದಾಗಲಿ ಇರುವುದಿಲ್ಲ. ದೇವತೆಗಳಾದ ಗ್ರಹಗಳಿಗೆ ನಮ್ಮಿಂದ ಆಗಬೇಕಾದದ್ದು ಎನೂ ಇಲ್ಲ. ನಮ್ಮ ಕರ್ಮಗಳೇ ಈ ಫಲಗಳನ್ನು ಕೊಡುತ್ತವೆ. ಇದನ್ನೇ ಜ್ಯೊತಿಷ್ಯದಲ್ಲಿ ಗ್ರಹಪಿಡೆ ಅಥವಾ ದೋಷವೆಂದು ಕರೆಯುತ್ತಾರೆ. ಜ್ಯೋತಿಷ್ಯವೆಂಬ ಶಾಸ್ತ್ರವು ಗ್ರಹಗತಿಯನ್ನು ಆಧರಿಸಿ ಮುನ್ಸೂಚನೆಯನ್ನು ಪರಿಹಾರವನ್ನೂ ಸೂಚಿಸುತ್ತದೆ. ಇದೇ ಗ್ರಹಗತಿಯ ರಹಸ್ಯ. ಇನ್ನು ವಿಸ್ತಾರವಾಗಿ ದ್ವಾದಶ ರಾಶಿಗಳ ಮೇಲೆ ಗುರು ಗೋಚಾರದ ಫಲವನ್ನು ನೋಡೋಣ - ಮೇಷ – ನಾಲ್ಕನೇಯ ಮನೆಯಲ್ಲಿ ಗುರು ಸಂಚಾರ. ಈ ರಾಶಿಯವರಿಗೆ ಈ ಗೋಚಾರ ಕಾಲಾವಧಿಯಲ್ಲಿ ಪಾರಿವಾರಿಕ ಅಶಾಂತಿ, ವ್ಯರ್ಥ ಚಿಂತೆಗಳು, ಮಾನಸಿಕ ಅಶಾಂತಿ, ವರ್ಥ ಧನವ್ಯಯ, ಅತಿಯಾದ ಸಿಟ್ಟು, ವಿನಾಕಾರಣ ಜಗಳಗಳು, ವಾದ ವಿವಾದಗಳು ಸಂಭವಿಸುತ್ತವೆ. ಸುಳ್ಳು ವ್ಯವಹಾರ ಬಗ್ಗೆ ಎಚ್ಚರಿಕೆಯಿರಲಿ ವಂಚನೆಯ ಸಂಭವವಿದೆ. ವಾಹನ ಚಾಲನೆಯಲ್ಲಿ ದಕ್ಷತೆಯಿರಲಿ. ಮಾತುಲ ಸಂಬಂಧಿಕರು ಮತ್ತು ಪತ್ನೀ ಸಂಬಂಧಿಕರಿಂದ ಉಪದ್ರವವಿರುತ್ತದೆ. ಪೈತ್ರಕ ಆಸ್ಥಿಯ ಬಗ್ಗೆ ವಿವಾದಗಳು ಉಂಟಾಗುವ ಸಾಧ್ಯತೆಯಿರುತ್ತದೆ. ಪರದೇಶ ಗಮನ ಮತ್ತು ಹೆಚ್ಚಿನ ಪ್ರವಾಸದ ಯೋಗವಿರುತ್ತದೆ. ಸ್ಥಾನಮಾನಗಳಲ್ಲಿ ಅನಪೇಕ್ಷಿತ ಬದಲಾವಣೆಯಾಗಬಹುದು. ಮನೆ ಸ್ಥಾವರ ಮುಂತಾದ ವಿಷಯಗಳ ವ್ಯವಹಾರಗಳಲ್ಲಿ ವಿವಾದವುಂಟಾಗುತ್ತದೆ. ನಿಮ್ಮ ರಾಶ್ಯಾಧಿಪತಿಯಾದ ಕುಜನು ಗುರುವಿನ ಮಿತ್ರಗ್ರಹನಾದುದರಿಂದ ಜಪ, ದಾನ ಮೊದಲಾದ ಪರಿಹಾರೋಪಾಯಗಳಿಂದ ಶಾಂತಿ. ವೃಷಭ – ಮೂರನೇಯ ಮನೆಯಲ್ಲಿ ಗುರು ಸಂಚಾರ. ಇದು ಸ್ವಜನ ಬಾಂಧವರು ಮತ್ತು ಮಿತ್ರರಲ್ಲಿ ಮನಸ್ತಾಪ, ವಿಯೋಗ, ವ್ಯಾಜ್ಯ ಸೂಚಕವಾಗಿದೆ. ವ್ಯವಹಾರದಲ್ಲಿ ಪಾಲುದಾರರಿಂದ ಹಾನಿಯ ಸಂಭವ. ಹೊಸ ಯೋಜನೆಗಳು ಮುಂದುವರೆಯದೇ ಹೋಗಬಹುದು. ವ್ಯಾಪಾರ ಉದ್ಯೋಗಾದಿಗಳಲ್ಲಿ ಸ್ಥಗಿತತೆ, ಮಾನಸಿಕ ಪೀಡೆ, ಮಿತ್ರಹಾನಿ, ನಿಷ್ಫಲ ಪ್ರಯತ್ನಗಳು ಆರ್ಥಿಕ ತೊಂದರೆಗಳು, ಶಾರೀರಿಕ ರೋಗ ಮೂದಲಾದ ತೊಂದರೆಗಳು ಆಗಬಹುದು. ನಿರುಪಯುಕ್ತ ಪ್ರವಾಸಗಳು ವ್ಯರ್ಥ ಧನ ವ್ಯಯದ ಸಂಭವ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಅಡೆತಡೆಗಳು ಆಗಬಹುದು. ಆದರೆ ಕೆಲವು ಶುಭಫಲಗಳನ್ನು ಸಹ ಹೇಳಲಾಗಿದೆ ನೌಕರೀ ಉದ್ಯೋಗ ಮೊದಲಾದ ಕಾರ್ಯ ಕ್ಷೇತ್ರಗಳಲ್ಲಿ ಉಂಟಾಗುವ ಬದಲಾವಣೆಯಿಂದ ಲಾಭವಿರುತ್ತದೆ. ವ್ಯಾಜ್ಯದ ವ್ಯವಹಾರಗಳಲ್ಲಿ ಅನುಕೂಲ ವಿಜಯವುಂಟಾಗುತ್ತದೆ. ಗುರುಶಾಂತಿ ಪರಿಹಾರಗಳನ್ನು ಅವಶ್ಯ ಮಾಡಬೇಕು. ಮಿಥುನ – ಎರಡನೇಯ ಮನೆಯಲ್ಲಿ ಗುರು ಸಂಚಾರ. ಮಿಥುನ ರಾಶಿಗೆ ದ್ವಿತೀಯದಲ್ಲಿ ಗುರುಸಂಚಾರ ಅತ್ಯಂತ ಶುಭಪ್ರದವಾಗಿದೆ. ಇವರು ಗುರುಗೋಚಾರ ಶುಭಫಲದ ವಿಶೇಷ ಫಲಾನುಭವಿಗಳಾಗಿದ್ದಾರೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಕೃಷಿ, ಉದ್ಯೋಗ ಮತ್ತು ವ್ಯವಹಾರಗಳಲ್ಲಿ ವಿಶೇಷ ಲಾಭವಿರುತ್ತದೆ. “ಸ್ವಾವಾಚಾಂ ಫಲಮ್” ಮಾತನಾಡಿದ್ದೆಲ್ಲ ನಿಜವಾಗುವುದು. ದ್ರವ್ಯಸಂಚಯ, ಸಂಪಾದನೆ, ಧಾನ್ಯಗಳ ಸಂಗ್ರಹ ಹೆಚ್ಚುತ್ತದೆ. ಕುಟುಂಬ ಸುಖ, ಸಂತತಿಯಿಂದ ಸಂತೋಷ ಪ್ರಾಪ್ತಿ, ಬಂಧು ಜನರಿಂದ ಸಹಾಯ, ಶತ್ರುನಾಶ, ಧರ್ಮಕಾರ್ಯಗಳಲ್ಲಿ ಅಭಿರುಚಿ ಹೆಚ್ಚುತ್ತದೆ. ಗುರು ಪ್ರೀತ್ಯರ್ಥ ದಾನವನ್ನು ಅವಶ್ಯವಾಗಿ ಮಾಡಿ. ಕರ್ಕ – ಒಂದನೇಯ ಮನೆಯಲ್ಲಿ ಗುರು ಸಂಚಾರ. ಜನ್ಮರಾಶಿಯಿಂದ ಗುರು ಸಂಚಾರದಿಂದ ಉದ್ಯೋಗ, ವ್ಯವಸಾಯ, ನೌಕರೀ, ಆದಾಯ, ವಾಸಿಸುವ ಮನೆ, ಕೆಲಸ ಮಾಡುವ ಸ್ಥಳ ಮೊದಲಾದವುಗಳಲ್ಲಿ ಬದಲಾವಣೆಯುಂಟಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಅಥವಾ ಮೇಲಧಿಕಾರಿಗಳ ಕೋಪವನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಮಾನಸಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಳ್ಳಿ, ದೈಹಿಕ ವ್ಯಾಧಿಗಳಿಗಿಂತಲೂ ಮಾನಸಿಕ ಖಿನ್ನತೆ, ಭಯ, ಬುದ್ಧಿಗೇಡಿತನ ಉಂಟಾಗಬಹುದು. ಯಾವುದೇ ಕಾರಣಕ್ಕೂ ಯರ ಮೇಲೂ ಸಿಟ್ಟು ಮಾಡಿಕೊಳ್ಳಬೇಡಿ, ವಾದ ವಿವಾದ ಜಗಳಗಳಿಂದ ದೂರವಿರಿ. ಶತ್ರುಭಯವಿರುತ್ತದೆ. ವ್ಯರ್ಥ ಖರ್ಚು ಧನದ ಅಪವ್ಯಯವಾಗಬಹುದು. ಕೆಲಸಕ್ಕಾಗಿ ಪರದೇಶಗಮನದ ಯೋಗವಿದೆ. ಗುರುವಿನ ಅನುಗ್ರಹ ಪ್ರಾಪ್ತಿಗಾಗಿ ಶಾಂತಿಕರ್ಮ ಪರಿಹಾರೋಪಾಯಗಳನ್ನು ಅವಶ್ಯವಾಗಿ ಮಾಡಿರಿ. ಸಿಂಹ – ಹನ್ನೆರಡನೇಯ ಮನೆಯಲ್ಲಿ ಗುರು ಸಂಚಾರ. ಸಿಂಹರಾಶಿಗೆ ಗುರು ಗೋಚಾರದಿಂದ ಕೌಟುಂಬಿಕ ವಿರಸಗಳು, ದಾಂಪತ್ಯದಲ್ಲಿ ವಿರಸ, ದೇಹದಲ್ಲಿ ವೃಣಬಾಧೆ, ಅನವಶ್ಯಕ ಸಾಲಗಳು, ಸ್ವಜನರಿಂದ ಅಪವಾದ ನಿಂದೆಗಳು, ಸ್ಥಳಾಂತರವಾಗುವ ಸಾಧ್ಯತೆ, ನೌಕರಿಯಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ, ಮಾನಸಿಕ ಉದ್ವೇಗಗಳು, ಭೂ ಸಂಪತ್ತಿನ ವಿಷಯದಲ್ಲಿ ಸಂಬಂಧಿಕರ ಜೊತೆಗೆ ವಿವಾದಗಳು, ಪರಿವಾರ ಮತ್ತು ಮಿತ್ರರಿಂಗ ದೂರವಾಗುವ ಯೋಗ. ಸ್ವಂತ ಮಾಡಿದ ಆಸ್ತಿಯನ್ನು ಮಾರಾಟ ಮಾಡಬೇಕಾಗಬಹುದು, ಅತೀಯದ ದುಂದುವೆಚ್ಚ. ಯಾವುದೇ ಕಾರಣಕ್ಕೂ ಸುಲಭದ ಧನ ಪ್ರಾಪ್ತಿಗಾಗಿ ತಾತ್ಕಾಲಿಕ ಮಾರ್ಗಗಳನ್ನು ಅನುಸರಿಸುವುದು ಬೇಡ (ಲಾಟರೀ, ಜೂಜಾಟ ಮೊದಲಾದವುಗಳನ್ನು ಆಡಬೇಡಿರಿ). ವಂಚಕರಿಂದ ಎಚ್ಚರಿಕೆಯಿರಲಿ. ಗುರು ಜಪ, ದಾನ, ಶಾಂತಿ ಮೊದಲಾದವುಗಳನ್ನು ಅವಶ್ಯವಾಗಿ ಮಾಡಿಸಿಕೊಳ್ಳಬೇಕು. ಕನ್ಯಾ – ಹನ್ನೊಂದನೇಯ ಮನೆಯಲ್ಲಿ ಗುರು ಸಂಚಾರ. ಇವರಿಗೆ ಅತ್ಯಂತ ಉತ್ತಮ ಫಲವಿರುತ್ತದೆ. ಈ ವರ್ಷ ನಿಮ್ಮ ಎಲ್ಲ ಮನೋಕಾಮನೆಗಳು ಇಡೇರುತ್ತವೆ. ಏಕಾದಶ ಗುರುವಿನಿಂದ ಸೌಖ್ಯ ವೃದ್ಧಿಯಾಗಲಿದೆ, ಉದ್ಯೋಗ, ನೌಕರೀ, ವ್ಯವಸಾಯಗಳಲ್ಲಿ ಉತ್ತಮ ಪ್ರಗತಿಯಿರುತ್ತದೆ. ಆಕಸ್ಮಿಕ ಧನಲಾಭಗಳು, ವಿಶೇಷ ಸುಸಂಧಿಗಳು ಒದಗಿ ಬರುತ್ತವೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಉತ್ತಮ ಯಶ. ಅವಿವಾಹಿತರಿಗೆ ಕಂಕಣಭಾಗ್ಯ, ಸಂತಾನಾಪೇಕ್ಷಿಗಳಿಗೆ ಸಂತತಿಲಾಭವಿರುತ್ತದೆ. ಎಲ್ಲದರಲ್ಲಿ ಪ್ರತಿಷ್ಟೆ, ಉನ್ನತಿಯ ಯೋಗ. ಧನ ಧಾನ್ಯ ಸಮೃದ್ಧಿ, ಪಾರಿವಾರಿಕ ಸುಖ ಶಾಂತಿ, ಶತ್ರುಗಳ ಪರಾಜಯ. ಈ ವರ್ಷ ಸ್ಥಾವರ ಆಸ್ತಿ ಮನೆ ವಾಹನ ಖರಿದೀಗಾಗಿ ಉತ್ತಮವಾಗಿರುತ್ತದೆ. ಉತ್ತಮ ಗುರುವಿನ ಪ್ರಸನ್ನತೆಗಾಗಿ ಗುರೂಪಾಸನೆ ಮಾಡಬೇಕು. ತುಲಾ – ಹತ್ತನೇಯ ಮನೆಯಲ್ಲಿ ಗುರು ಸಂಚಾರ. ಗುರು ಗೋಚಾರವು ಮಿಶ್ರಫಲದಾಯಕವಾಗಿದೆ. ಹೊಸಕಾರ್ಯಗಳಲ್ಲಿ ವಿಳಂಬ, ಕೆಲಸಗಳಲ್ಲಿ ಹಿನ್ನಡೆ, ಹಣದ ದುರ್ವ್ಯಯ, ಕಾರ್ಯಕ್ಷೇತ್ರದಲ್ಲಿ ಪರಿವರ್ತನೆ, ವ್ಯರ್ಥ ಅನುಪಯುಕ್ತ ಪ್ರವಾಸಗಳು, ಶ್ವಾಸ ಸಂಬಂಧೀ ತೊಂದರೆಗಳು (ಕೆಮ್ಮು, ನೆಗಡಿ), ಮಾನಸಿಕ ಖಿನ್ನತೆಗಳು ಮೊದಲಾದ ಫಲಗಳಿವೆ. ಕರ್ಮದಲ್ಲಿ ಗುರುಸಂಚಾರದಿಂದ ಅನೇಕ ಉತ್ತಮ ಅನುಕೂಲಗಳು ಸಹ ಅನುಭವದಿಂದ ಕಂಡುಬಂದಿವೆ. ಹೊಸ ಕಾರ್ಯಕ್ಷೇತ್ರಗಳಲ್ಲಿ ಕೆಲಸ, ಬದಲಾವಣೆ, ಹೆಚ್ಚಿದ ಕ್ರಿಯಾಶೀಲತೆಯಿಂದ ಲಾಭವೂ ಇರುತ್ತದೆ. ಗುರು ಶಾಂತಿ-ಪರಿಹಾರೋಪಾಯಗಳನ್ನು ಮಾಡಿಕೊಳ್ಳುವುದು ಉತ್ತಮ. ನಿಮಗೆ ಶನಿಯ ಸಾಡೇಸಾತಿಯು ಸಹ ನಡೆದಿರುತ್ತದೆ ಆದರೆ ಗುರು ಗೋಚಾರವು ಶುಖಪ್ರದವಾಗಿರುತ್ತದೆ. ವೃಶ್ಚಿಕ – ಒಂಬತ್ತನೇಯ ಮನೆಯಲ್ಲಿ ಗುರು ಸಂಚಾರ. ಭಾಗ್ಯದಲ್ಲಿ ಗುರುಸಂಚಾರ ವೃಶ್ಚಿಕರಾಶಿಯವರಿಗೆ ಬಹಳ ಶುಭಪ್ರದವಾಗಿರುತ್ತದೆ. ಉದ್ಯೋಗ ವ್ಯವಹಾರದಲ್ಲಿ ಉತ್ತಮ ಪ್ರಗತಿ, ಧನಲಾಭ, ಸಂಪತ್ತಿಯ ಲಾಭ, ಕೌಟುಂಬಿಕ ಸುಖ, ತೀರ್ಥಯಾತ್ರಾ ಯೋಗ, ಸಾರ್ವಜನಿಕ ವಲಯದಲ್ಲಿ ಮಾನ ಸಮ್ಮಾನ, ವಾದ ವಿವಾದಗಳಲ್ಲಿ ಜಯ, ಆರೋಗ್ಯಲಾಭ ಮೊದಲಾದ ಶುಭ ಫಲಗಳು. ಹೋಸ ಯೋಜನೆಗಳನ್ನು ಪ್ರಾರಂಭಿಸಲು ತುಂಬ ಅನುಕೂಲವಾದ ಕಾಲ. ಎಲ್ಲ ಕಾರ್ಯಗಳಲ್ಲಿ ವಿಜಯ. ಸ್ಥಾವರ ಆಸ್ತಿವಿಷಯಗಳ ವ್ಯವಹಾರಗಳಿಂದ ಲಾಭ. ಉತ್ತಮ ಭೋಜನ ಪ್ರಾಪ್ತಿಯೋಗ. ನೌಕರಿಯಲ್ಲಿರುವರಿಗೆ ಹೆಚ್ಚುವರಿ ಜವಾಬ್ದಾರಿ ಮತ್ತು ಬಡ್ತಿ, ಧರ್ಮವಿಷಯಗಳಲ್ಲಿ ಆಸಕ್ತಿ, ಮೇಲಧಿಕಾರಿಗಳಿಂದ ಮತ್ತು ರಾಜಕೀಯ ವ್ಯಕ್ತಿಗಳಿಂದ ಲಾಭ. ಗುರು ಉಪಾಸನೆಯಿಂದ ಶೀಘ್ರ ಫಲ. ಧನು – ಎಂಟನೇಯ ಮನೆಯಲ್ಲಿ ಗುರು ಸಂಚಾರ. ಅಷ್ಟಮದಲ್ಲಿ ಗುರು ಸಂಚಾರದಿಂದ ವಿದ್ಯಾನಾಶ, ಕೌಟುಂಬಿಕ ಕಲಹ, ಸಂತತಿ ವಿಷಯದಲ್ಲಿ ಕ್ಲೇಶ, ಅನಾರೋಗ್ಯ, ಶತ್ರುಪೀಡೆ, ಮಾನಸಿಕ ಚಿಂತೆಯಲ್ಲಿ ಹೆಚ್ಚಳ, ವ್ಯರ್ಥವಾಗಿ ತಿರುಗಾಟ, ಎಲ್ಲಾ ಕೆಲಸಗಳಲ್ಲಿ ವಿಳಂಬ, ಆರ್ಥಿಕ ಸಮಸ್ಯೆಗಳಿಂದಾಗಿ ಚಿಂತೆ, ಕಳ್ಳರ ಭಯ ಮೊದಲಾದ ಅಶುಭ ಫಲಗಳು ಹೇಳಲ್ಪಟ್ಟಿವೆ. ಧನು ರಾಶಿಯು ಗುರುವಿನ ಸ್ವಾಧಿಪತ್ಯದ ರಾಶಿಯಾಗುರುವುದರಿಂದ ಮೇಲೆ ಹೇಳಿದ ಫಲಗಳಲ್ಲಿ ಅಲ್ಪ ಮಾತ್ರ ಗ್ರಾಹ್ಯ. ಉತ್ತಮ ಫಲವೂ ಸಹ ಇರುತ್ತದೆ. ನೌಕರಿಯಲ್ಲಿ ಬದಲಾವಣೆಯಿಂದ, ಹೆಚ್ಚಿನ ಜವಾಬ್ದಾರಿಯಿಂದ ಅನುಕೂಲವಿರುತ್ತದೆ. ಅಪೇಕ್ಷೆ ಮತ್ತು ಖರ್ಚುಗಳನ್ನು ಕಡಿಮೆ ಮಾಡಿಕೊಂಡಲ್ಲಿ ಸಾಲಬಾಧೆಗಳಿಂದ ಪಾರಾಗಬಹುದು. ವಿದ್ಯಾರ್ಥಿಗಳು ಶಿಕ್ಷಣದ ಹೆಚ್ಚಿನ ಕಾಳಜಿ ವಹಿಸಬೇಕು. ನೀವು ಅವಶ್ಯವಾಗಿ ಗುರು ಜಪ, ದಾನ, ಪೂಜಾದಿಗಳನ್ನು ಮಾಡಬೇಕು. ಮಕರ – ಎಳನೇಯ ಮನೆಯಲ್ಲಿ ಗುರು ಸಂಚಾರ. ಸಪ್ತಮ ಗುರು ಉತ್ತಮ ಕೌಟುಂಬಿಕ ಸಾಮಂಜಸ್ಯವನ್ನು ಕೊಡುತ್ತಾನೆ. ಹೆಂಡತಿಯ ಜೊತೆ ಒಳ್ಳೆಯ ಹೊಂದಾಣಿಕೆಯಿದೆ. ವಿವಾಹ ಯೋಗವಿರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸಿದೆ. ಉನ್ನತ ಅಧಿಕಾರಿಗಳು ಅಥವಾ ರಾಜಕಾರಣಿಗಳಿಂದ ಸಹಾಯವಿರುತ್ತದೆ, ತನ್ನಿಮಿತ್ತ ಲಾಭವಿರುತ್ತದೆ. ಆರೋಗ್ಯವು ಸುಧಾರಿಸುತ್ತದೆ. ಕೋರ್ಟು ವಿವಾದಗಳಲ್ಲಿ ಯಶಸ್ಸು, ಸಾಮಾಜಿಕ ಮಾನ ಸನ್ಮಾನ, ಸಾರ್ಥಕ ಮತ್ತು ಲಾಭದಾಯಕ ಪ್ರವಾಸಗಳು ಜರುಗಬಹುದು. ತೀರ್ಥ ಯಾತ್ರಾದಿ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ವಾಹನ ಮತ್ತು ಸ್ಥಾವರ ಪ್ರಾಪ್ತಿಯ ಯೋಗವಿರುತ್ತದೆ. ಗುರು ಪ್ರಸಾದಕ್ಕಾಗಿ ಗುರುಸೇವೆ ಪೂಜನಾದಿಗಳನ್ನು ಮಾಡಬೇಕು. ಕುಂಭ – ಆರನೇಯ ಮನೆಯಲ್ಲಿ ಗುರು ಸಂಚಾರ. ಷಷ್ಟಮ ಭಾವದಲ್ಲಿ ಗುರುವಿನ ಗೋಚಾರದಿಂದ ಬಾಂಧವ ಮತ್ತು ಮಿತ್ರರೊಂದಿಗೆ ಕಲಹ, ವ್ಯವಹಾರಾದಿಗಳಲ್ಲಿ ವಿವಾದಗಳಾಗಬಹುದು. ಕೌಟುಂಬಿಕ ಕಲಹಗಳು, ಶಾರೀರಿಕ ಪೀಡೆ, ಉದರ ವ್ಯಾಧಿ ಅಪಚನ ಮೋದಲಾದ ಅನಾರೋಗ್ಯಗಳಾಗಬಹುದು. ಎಲ್ಲದರಲ್ಲಿ ತಾಳ್ಮೆಯುರಲಿ. ಪತ್ನಿ ಮತ್ತು ಮಕ್ಕಳೊಂದಿಗೆ ಮತಭೇದಗಳು, ಮೇಲಧಿಕಾರಿಗಳೊಂದಿಗೆ ಮತಭೇದ, ಕಾರ್ಯಗಳಲ್ಲಿ ವಿಳಂಬ, ಸೋದರ ಬಂಧುಗಳಿಂದ ಕಲಹಗಳು, ಅಗ್ನಿಯಿಂದ ಭಯ, ದುರ್ವಿಷಯಗಳಲ್ಲಿ ಆಸಕ್ತಿ, ಪಾಪಕರ್ಮಗಳಲ್ಲಿ ತೊಡಗುವುದರಿಂದ ಮಾನಸಿಕ ಕ್ಲೇಶ ಮೊದಲಾದ ಫಲಗಳನ್ನು ಹೇಳಲಾಗಿದೆ. ಕುಂಭ ರಾಶಿಯವರು ಗುರು ಅನುಗ್ರಹವನ್ನು ಪಡೆಯಲು ಗುರು ಜಪ, ಪೂಜನಾದಿಗಳನ್ನು ಅವಶ್ಯವಾಗಿ ಮಾಡಬೇಕು. ಮೀನ – ಐದನೇಯ ಮನೆಯಲ್ಲಿ ಗುರು ಸಂಚಾರ. ಪಂಚಮದಲ್ಲಿ ಗುರುಚಾರ ಬಹಳ ಶುಭವಾಗಿರುತ್ತದೆ. ಮೀನವು ಗುರುವಿನ ಆಧಿಪತ್ಯದ ರಾಶಿಯಾಗಿರುತ್ತದೆ. ಸಂತಾನ ಪ್ರಾಪ್ತಿ, ವಿದ್ಯೆಯಲ್ಲಿ ಒಳ್ಳೆಯ ಪ್ರಗತಿ, ಕೌಟುಂಬಿಕ ಸುಖ, ವಿವಾಹ ಯೋಗ, ಉದ್ಯೋಗ ವ್ಯವಸಾಯದಲ್ಲಿ ಪ್ರಗತಿ, ನೌಕರಿಯಲ್ಲಿ ಬಡ್ತಿ, ಅಧಿಕಾರ ಪ್ರಾಪ್ತಿ, ಆಕಸ್ಮಿಕ ಧನಲಾಭಗಳು, ಆರೋಗ್ಯಲಾಭ, ಆತ್ಮವಿಶ್ವಾಸ, ಸ್ವಜನ ಬಾಂಧವರಿಂದ ಸುಖ, ಸಾಮಾಜಿಕ ಪ್ರತಿಷ್ಠೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೀಗೆ ಶುಭ ಫಲಗಳನ್ನು ಹೇಳಲಾಗಿದೆ. ವಿಶೇಷವಾಗಿ ವ್ಯಾಪಾರ ಮತ್ತು ಹಣದ ನಿಯೋಜನಗಳಿಂದ ಲಾಭ. ಗುರುವಿನ ಗೋಚಾರ ಯಾವ ಪಾದದಿಂದ ಯವ್ಯಾವ ರಾಶಿಗೆ ಮತ್ತು ಫಲ - ಮೇಷ-ಕನ್ಯಾ-ಕುಂಭ ರಾಶಿಯವರಿಗೆ ಸುವರ್ಣ ಪಾದ, ಚಿಂತಾ ಫಲ. ಮಿಥುನ-ತುಲಾ-ಮಕರ ರಾಶಿಯವರಿಗೆ ರೌಪ್ಯ ಪಾದ ಶುಭ ಫಲ. ವೃಶಭ-ಸಿಂಹ-ಧನು ರಾಶಿಯವರಿಗೆ ತಾಮ್ರ ಪಾದ ಶ್ರೀಪ್ರಾಪ್ತಿ. ಕರ್ಕ-ವೃಶ್ಚಿಕ-ಮೀನ ರಾಶಿಯವರಿಗೆ ಲೋಹ ಪಾದ ಕಷ್ಟ. ಶ್ರೀಬೃಹಸ್ಪತಿ ಪ್ರಸನ್ನತೆಗಾಗಿ ಉಪಾಯಗಳು - ಜೀವನದಲ್ಲಿ ಶೀಘ್ರ ಪ್ರಗತಿಗಾಗಿ ಗುರು ಅನುಗ್ರಹ ಬೇಕೇ ಬೇಕು ಗುರು ಗೋಚಾರದ ಫಲವೇನೇ ಇದ್ದರೂ ಗುರುವನ್ನು ಪ್ರಸನ್ನಗೊಳಿಸಿಕೊಳ್ಳುವುದು ಸಹ ಸಾಧ್ಯ ಮತ್ತು ಸುಲಭ. ಪ್ರಾರ್ಥನಾ ಮಾತ್ರದಿಂದ ರಕ್ಷಣೆ ಮತ್ತು ಅನುಗ್ರಹ ಮಾಡುವವನು ದೇವಗುರು. ಶುದ್ಧ ಸಾತ್ವಿಕ ಆಚರಣೆ, ದೇವ-ಪಿತೃ-ಗುರು-ಹಿರಿಯರಲ್ಲಿ ಶ್ರಧ್ಧೆ ಮತ್ತು ಆದರ ಇವು ಗುರು ಅಪೇಕ್ಷಿಸುವ ಗುಣಗಳು. ಗುರು ಶೀಘ್ರವಾಗಿ ಪ್ರಸನ್ನನಾಗಿ ಅನುಗ್ರಹವನ್ನು ಮಾಡುತ್ತಾನೆ. ಗುರುಸ್ತೋತ್ರದ ಜಪ, ಪಾರಾಯಣವನ್ನು ಮಾಡಬೇಕು. ಜಪಸಂಖ್ಯೆಯು 19000. ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ | ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ || ಈ ಪುರಾಣೋಕ್ತ ಶ್ರೀವೇದವ್ಯಾಸರಿಂದ ರಚಿತವಾದ ನವಗ್ರಹ ಸ್ತೋತ್ರಾಂತರ್ಗತ ಗುರುಸ್ತೋತ್ರದ ಜಪವನ್ನು ಮಾಡಬೇಕು. ಪೂರ್ಣ ಜಪಸಂಖ್ಯೆ 19000 ದಷ್ಟು ಮಾಡಬೇಕು. ಕನಿಷ್ಟ ಪಕ್ಷ ಪ್ರತಿನಿತ್ಯ 108 ರಷ್ಟಾದರೂ ಮಾಡಬೇಕು. ಜಪಾನಂತರ ದಾನ-ದಕ್ಷಿಣಾದಿಗಳನ್ನು ಮಾಡಬೇಕು. ದೇವಗುರು ಬೃಹಸ್ಪತಿಯ ವೇದೋಕ್ತ ಮಂತ್ರದ ಜಪವನ್ನು ಯೋಗ್ಯ ಬ್ರಾಹ್ಮಣ ಪುರೋಹಿತರಿಂದ ಮಾಡಿಸಿಕೊಳ್ಳಬಹುದು. ಅವರಿಗೆ ದಕ್ಷಿಣೆ ಮತ್ತು ಬೃಹಸ್ಪತಿ ಕುರಿತಾದ ದಾನಗಳನ್ನು ತಪ್ಪದೇ ಕೊಡಬೇಕು. ಸಾಧ್ಯವಾದಲ್ಲಿ ಶಾಂತಿ ಹೋಮವನ್ನು ಸಹ ಮಾಡಿಸಿಕೊಳ್ಳಬಹುದು. ಗುರು ಪ್ರೀತ್ಯರ್ಥ ದಾನದ ವಸ್ತುಗಳು – ಸುವರ್ಣ, ಕಾಂಸ್ಯ (ಕಂಚು), ಪುಷ್ಪರಾಗ, ಕಡಲೆ, ಸಕ್ಕರೆ, ಹಳದಿ ಬಣ್ಣದ ವಸ್ತ್ರಗಳು, ಹಳದಿ ಬಣ್ಣದ ಹೂವುಗಳ ದಾನವನ್ನು ಯೋಗ್ಯ ಗ್ರಹಸ್ಥ ಬ್ರಾಹ್ಮಣರಿಗೆ ದಕ್ಷಿಣಾ ಸಹಿತವಾಗಿ ಮಾಡಬೇಕು. ಸ್ಕಂದಪುರಾಣೋಕ್ತ ಬೃಹಸ್ಪತಿ ಸ್ತೋತ್ರ, ಬ್ರಹ್ಮಯಾಮಲೋಕ್ತ ಬೃಹಸ್ಪತಿಕವಚ, ನಾರದಪುರಾಣೋಕ್ತ ದತ್ತಾತ್ರೇಯ ಸ್ತೋತ್ರ, ದತ್ತಾತ್ರೇಯ ಅಷ್ಟೋತ್ತರಶತನಾಮ ಸ್ತೋತ್ರ, ಶ್ರೀಶಂಕರಾಚಾರ್ಯ ವಿರಚಿತ ದಕ್ಷಿಣಾಮೂರ್ತಿ ಸ್ತೋತ್ರ, ಶ್ರೀ ರಾಘವೇಂದ್ರ ಸ್ತೋತ್ರ ಮೊದಲಾದವುಗಳ ಪ್ರತಿನಿತ್ಯ ಪಾರಾಯಣವನ್ನು ಮಾಡಬೇಕು. ಗುರುಗಳ ಚರಿತ್ರೆಯ ಪಾರಾಯಣವನ್ನು ಸಹ ಮಾಡಬಹುದು. ಗುರುಮಠಗಳ ಕುರಿತು ಯಾತ್ರೆ, ಗುರುಗಳ ಸೇವೆ, ವೇದಾಧ್ಯಾಯಿಗಳಾದ ಬ್ರಾಹ್ಮಣರಿಗೆ ದಾನ, ದತ್ತಾತ್ರೇಯ ದೇವಸ್ಥಾನಗಳ ದರ್ಶನಾದಿಗಳನ್ನು ಮಾಡಿ ಗುರು ಅನುಗ್ರವನ್ನು ಸಂಪಾದಿಸಿಕೊಳ್ಳಬೇಕು. ಗುರು ಉಪಾಸನೆಯ ಕುರಿತು ಇನ್ನೂ ಕೆಲವು ಮಾಹಿತಿಗಳನ್ನು ಮುಂದಿನ ಲೇಖನಗಳಲ್ಲಿ ನೋಡೋಣ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ