ಯಾವ ಚಾಂದ್ರಮಾಸದಲ್ಲಿ ಸೂರ್ಯನ ಸಂಕ್ರಮಣವು ಇರುವುದಿಲ್ಲವೋ ಅದೇ ಅತಿರಿಕ್ತವಾಗಿ ಬರುವಂಥಹ ಅಧಿಕಮಾಸ. “ಸಂಕ್ರಾಂತಿರಹಿತೋ ಮಾಸೋಽಧಿಮಾಸ” – ಸಂಕ್ರಾಂತಿಯಿಂದ ರಹಿತವಾದ ಮಾಸ ಅಧಿಕಮಾಸ. ಈ ಅಧಿಕಮಾಸಕ್ಕೆ ಮೊದಲಿನ ಮಾಸದಲ್ಲಿ ಒಂದು ಸಂಕ್ರಮಣ ನಂತರದ ಮಾಸದಲ್ಲಿ ಒಂದು ಸಂಕ್ರಮಣ ಹೀಗೆ ಉಂಟಾಗಿ ಶುಕ್ಲ-ಕೃಷ್ಣಾದಿ ಉಭಯಪಕ್ಷಗಳಲ್ಲಿ ಸಂಕ್ರಮಣ ಬಾರದೇ ಇರುವುದೇ ಅಧಿಕ ಮಾಸದ ಉಪಲಬ್ಧಿಗೆ ಕಾರಣ. ಸೌರವರ್ಷ ಮತ್ತು ಚಾಂದ್ರವರ್ಷಗಳಲ್ಲಿ ವಾರ್ಷಿಕವಾಗಿ ಆಗುವ ಅಂತರದ ಫಲವಾಗಿ ಸರಿಸುಮಾರು ಮೂವತ್ಮೂರು ಮಾಸಗಳಿಗೊಮ್ಮೆ ನಮ್ಮ ಪಂಚಾಂಗಗಳಲ್ಲಿ ಅಧಿಕಮಾಸವನ್ನು ಸೇರಿಸಿ ಈ ಅಂತರವನ್ನು ಸರಿಹೊಂದಿಸಲಾಗುತ್ತದೆ. ಅಧಿಕಮಾಸವಿರುವ ಸಂವತ್ಸರದಲ್ಲಿ ಹದಿಮೂರು ಮಾಸಗಳಿರುತ್ತವೆ.
ಭಾರತದಾದ್ಯಂತ ನಾವು ಸೌರ-ಚಾಂದ್ರ ಹೀಗೆ ಮಿಶ್ರ ಸ್ವರೂಪದ ಪಂಚಾಂಗವನ್ನು ಅರ್ಥಾತ್ ಕಾಲಗಣನೆಯನ್ನು ಅನುಸರಿಸುತ್ತೇವೆ. ಸೌರವರ್ಷದಲ್ಲಿ ಸುಮಾರು 365 ದಿವಸಗಳಿರುತ್ತವೆ ಹಾಗು ಚಾಂದ್ರ ವರ್ಷದಲ್ಲಿ ಸರಾಸರಿ 354 ದಿವಸಗಳಿರುತ್ತವೆ. ಸೌರವರ್ಷ ಮತ್ತು ಚಾಂದ್ರವರ್ಷಗಳ ಮಧ್ಯೆ ಪ್ರತಿವರ್ಷ ಸರಾಸರಿ ಹನ್ನೊಂದು ದಿನಗಳ ಅಂತರವುಂಟಾಗುತ್ತದೆ. ಮೂರು ವರ್ಷಗಳಿಗೊಮ್ಮೆ ಈ ರೀತಿ ಲಭ್ಯವಾದ ಅತಿರಿಕ್ತ ದಿನಗಳನ್ನು ಒಂದು ಅಧಿಕಮಾಸವಾಗಿ ಚಾಂದ್ರವರ್ಷದಲ್ಲಿ ಸೇರಿಸಲಾಗುತ್ತದೆ. ಹಿಂದಿನ ಅಧಿಕಮಾಸದಿಂದ ಸುಮಾರಾಗಿ 32 ಮಾಸ 16 ದಿನಗಳು ಸಲ್ಲಲು ಹೊಸ ಅಧಿಕಮಾಸದ ಪ್ರಾಪ್ತಿಯಾಗುತ್ತದೆ. ಈ ರೀತಿ ಉಂಟಾದ ಮಾಸದಲ್ಲಿ ಸೂರ್ಯನ ರಾಶಿ ಪ್ರವೇಶ (ಸಂಕ್ರಮಣ) ಆಗುವುದಿಲ್ಲ. ಈ ಅತಿರಿಕ್ತ ಮಾಸ ಬರುವ ಮಾಸದ ನಂತರದ ನಿಜ ಮಾಸದ ಹೆಸರಿನಿಂದಲೇ ಈ ಅಧಿಕಮಾಸವನ್ನು ಕರೆಯಲಾಗುತ್ತದೆ. ಉದಾ, ಈ ವರ್ಷ ಅಧಿಕಮಾಸವು ಆಷಾಢ ಮಾಸದ ಮೊದಲು ಬಂದಿರುವುದರಿಂದ ಅದನ್ನು ಅಧಿಕ ಆಷಾಢ ಮಾಸವೆಂದು ಕರೆಯಲಾಗುತ್ತದೆ. ಒಂದು ವೇಳೆ ನಾವು ಕೇವಲ ಚಾಂದ್ರಮಾಸಾಧಾರಿತ ಪಂಚಾಂಗಗಳನ್ನೇ ಅನುಸರಿಸಿದರೆ ಋತುಗಳ ಗಣನೆ ಹಿಂದುಮುಂದಾಗುತ್ತದೆ. ಋತುಚಕ್ರ ಸೂರ್ಯನನ್ನು ಅವಲಂಬಿಸಿ ಇರುವುದರಿಂದ ಚಾಂದ್ರವರ್ಷಕ್ಕೆ ಅಧಿಕಮಾಸವೆಂಬ ಅತಿರಿಕ್ತ ಮಾಸದ ವಿಶೇಷ ಸಂಸ್ಕಾರವನ್ನು ಮಾಡಲಾಗುತ್ತದೆ.
ಅಧಿಕಮಾಸವು ಆಧ್ಯಾತ್ಮಿಕವಾಗಿ ಬಹಳ ಮಹತ್ವವನ್ನು ಪಡೆದಿದೆ. ಈ ಮಾಸದಲ್ಲಿ ಮಾಡಲ್ಪಡುವ ಶ್ರೀಹರಿಯ ಪ್ರೀತ್ಯರ್ಥ ಅನುಷ್ಠಾನಗಳು ಸಕಲ ಪಾಪಮೋಚಕ ಮತ್ತು ಸರ್ವಶ್ರೇಷ್ಠ ಫಲಪ್ರದಾಯಕಗಳಾಗಿವೆ. ನಮ್ಮ ಎಲ್ಲ ಮಲ(ಪಾತಕಗಳು – ಪಾಪಕರ್ಮಗಳು)ವನ್ನು ಕಳೆಯುವ ಕಾರಣದಿಂದಾಗಿ ಈ ಮಾಸಕ್ಕೆ ಮಲಮಾಸವೆಂದು ಸಹ ಕರೆಯಲಾಗುತ್ತದೆ. “ಮಲಾಪಕರ್ಷಕೋ ಮಾಸೋ ಮಲಮಾಸಸ್ತತೋ ಬುಧೈಃ” – ಮಲವನ್ನು ಕಳೆಯುವ ಮಾಸವಾದದ್ದರಿಂದ ಈ ಮಾಸವನ್ನು ಮಲಮಾಸವೆಂದು ಜ್ಞಾನಿಗಳಿಂದ ಕರೆಯಲಾಗಿದೆ.
ಅಧಿಕಮಾಸ ಕಾಮ್ಯಕರ್ಮಗಳಿಗೆ ವರ್ಜ್ಯ-
ನ ಕುರ್ಯಾದಧಿಕೇ ಮಾಸೇ ಕಾಮ್ಯಂ ಕರ್ಮ ಕದಾಚನ |
ಅಧಿಕ ಮಾಸವು ಯಾವುದೇ ಕಾಮ್ಯ ಕರ್ಮಗಳನ್ನು ಮಾಡಲು ವರ್ಜ್ಯವೆಂದು ಶಾಸ್ತ್ರ ನಿರ್ಣಯವನ್ನು ಮಾಡಲಾಗಿದೆ. ಕಾಮ್ಯಕರ್ಮಗಳೆಂದರೆ ಯಾವುದಾದರೂ ಅಪೇಕ್ಷೆ-ಕಾಮನೆಯಿಂದ ದೇವರನ್ನು ಕುರಿತು ಆಚರಿಸಲಾಗುವ ಧಾರ್ಮಿಕ ಕರ್ಮಗಳು. ಶಾಂತಿಹೋಮಗಳು, ವ್ರತಗಳು, ಕಾಮ್ಯಮಹಾದಾನಗಳು ಮೊದಲಾದವು. ಗೃಹ್ಯ ಲೌಕಿಕ ಕರ್ಮಗಳಾದ ಚೌಲ, ಉಪನಯನ, ವಿವಾಹ, ನಾಮಕರಣ, ಅನ್ನಪ್ರಾಶನ, ನೂತನ ಗ್ರಹಾರಂಭ, ವಾಸ್ತು, ಗ್ರಹಪ್ರವೇಶ, ತೀರ್ಥಕ್ಷೇತ್ರ ಯಾತ್ರೆ, ದೇವತಾ ಪ್ರತಿಷ್ಠೆ, ಬಾವಿ-ಕೊಳ-ಕೆರೆ-ಉದ್ಯಾನಾದಿ ಸರ್ವಜನೋಪಯುಕ್ತಗಳ ನಿರ್ಮಾಣ, ನವೀನ ವಸ್ತ್ರ-ಅಲಂಕಾರಗಳ ಧಾರಣೆ, ವೃತ ನಿಯಮಾದಿಗಳು – ಇವು ಅಧಿಕಮಾಸದಲ್ಲಿ ವರ್ಜ್ಯಮಾಡಬೇಕು. ಈ ಮಾಸವು ಕೇವಲ ಪರಮಾತ್ಮ ಶ್ರೀಪುರುಷೋತ್ತಮ ರೂಪಿ ಶ್ರೀಹರಿಯ ಪೂಜಾನುಷ್ಠಾನರೂಪವಾಗಿ ಪಾಲಿಸತಕ್ಕದ್ದು ಇದು ಸ್ಪಷ್ಟ ಆದೇಶ. ಕಾಮ್ಯಕರ್ಮಗಳು ವರ್ಜ್ಯವಾಗಿದ್ದರೂ ಸಹ ನಿತ್ಯಕರ್ಮಗಳಾದ ಸಂಧ್ಯಾವಂದನೆ, ಜಪ, ನಿತ್ಯ ದೇವಪೂಜಾ, ಶ್ರಾದ್ಧ ಇತ್ಯಾದಿಗಳನ್ನು ಸರ್ವಥಾ ಬಿಡಬಾರದು. ಇವುಗಳ ಆಚರಣೆಗೆ ಅಧಿಕ ಮಾಸದಲ್ಲಿ ಹೆಚ್ಚಿನ ಫಲವಿದೆ, ಬಿಟ್ಟಲ್ಲಿ ಪ್ರತ್ಯವಾಯ ಮಹಾದೋಷ.
ಆಷಾಢ ಶುಕ್ಲ ಏಕಾದಶೀಯಿಂದ ಚಾತುರ್ಮಾಸವು ಪ್ರಾರಂಭವಾಗುತ್ತದೆ, ಅಂದು ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಆಷಾಢದ ಮೊದಲು ಅಧಿಕಮಾಸವಿರುವುದರಿಂದ ಚಾತುರ್ಮಾಸ, ವಿಷ್ಣುಶಯನೋತ್ಸವಗಳನ್ನು ನಿಜ ಆಷಾಢದಲ್ಲಿಯೇ ಆಚರಿಸಬೇಕು, ಅಧಿಕದಲ್ಲಿ ಅಲ್ಲ.
ಶ್ರೀಕೃಷ್ಣವಲ್ಲಭೋ ಮಾಸೋ ನಾಮ್ನಾ ಚ ಪುರುಷೋತ್ತಮಃ |
ತಸ್ಮಿನ್ ಸಂಸೇವಿತೇ ಬಾಲೇ ಸರ್ವಂ ಭವತಿ ವಾಂಛಿತಮ್ || (ಅಧಿಕಮಾಸ ಮಹಾತ್ಮೆ)
(ದುರ್ವಾಸ ಮಹರ್ಷಿಯು ಬಾಲೆಯನ್ನು ಕುರಿತು) ಹೇ ಬಾಲೆಯೇ! ಪುರುಷೋತ್ತಮ ಮಾಸವೆಂದು ಕರೆಯಿಸಿಕೊಳ್ಳುವ ಶ್ರೀಕೃಷ್ಣನಿಗೆ ಅತ್ಯಂತ ಪ್ರೀತಿಪಾತ್ರವಾದ ಈ ಮಾಸವನ್ನು ಯಾರು ಸೇವಿಸುತ್ತಾರೋ (ಆಚರಿಸುತ್ತಾರೋ) ಅವರ ಎಲ್ಲ ಮನೋಕಾಮನೆಗಳು ಈಡೇರುವವು.
ತಸ್ಮಾತ್ಸರ್ವಾತ್ಮನಾ ಸರ್ವೈಃ ಸ್ನಾನಪೂಜಾಜಪಾದಿಕಮ್ |
ವಿಶೇಷೇಣ ಪ್ರಕರ್ತವ್ಯಂ ದಾನಂ ಶಕ್ತ್ಯನುಸಾರತಃ || (ಅಧಿಕಮಾಸ ಮಹಾತ್ಮೆ)
ಆದುದರಿಂದ, ಎಲ್ಲರೂ ಈ ಅಧಿಕಮಾಸದಲ್ಲಿ ಸ್ನಾನ, ವಿಷ್ಣುಪುಜೆ, ಜಪ (ಹರಿನಾಮ ಸ್ಮರಣೆ) ವಿಶೇಷವಾಗಿ ಮಾಡಬೇಕು ಮತ್ತು ಶಕ್ತ್ಯನುಸಾರ ದಾನಗಳನ್ನು ಮಾಡಬೇಕು.
ಯೇನಾಹಮರ್ಚಿತೋ ಭಕ್ತ್ಯಾ ಮಾಸೇಽಸ್ಮಿನ್ ಪುರುಷೋತ್ತಮೇ |
ಧನಪುತ್ರಸುಖಂ ಭುಕ್ತ್ವಾ ಪಶ್ಚಾದ್ ಗೋಲೋಕವಾಸಭಾಕ್ || (ಅಧಿಕಮಾಸ ಮಹಾತ್ಮೆ)
ಪುರುಷೋತ್ತಮಮಾಸದಲ್ಲಿ ಪುರುಷೋತ್ತಮನಾಮಕನಾದ ಶ್ರೀಕೃಷ್ಣನನ್ನು ಆರಾಧಿಸಿದವರು ಇಹದಲ್ಲಿ ಧನ, ಪುತ್ರಸುಖಾದಿಗಳನ್ನು ಭೋಗಿಸಿ ನಂತರ ಪರಮಾತ್ಮನ ಉತ್ತಮಲೋಕವಾದ ಗೋಲೋಕವನ್ನು ಹೊಂದುವರು.
ಅಧಿಕಮಾಸ ದಾನಗಳು ಮತ್ತು ಆಚರಣೆಗಳು-
ಅಧಿಕಮಾಸವು ದಾನಗಳ ಮಾಸವೆಂದೇ ಪ್ರಸಿದ್ಧವಾಗಿದೆ. ಈ ಮಾಸ ಬಂತೆಂದರೆ ಸಜ್ಜನರು ಅನೇಕ ದಾನಗಳು, ಬ್ರಾಹ್ಮಣ ಭೋಜನ, ದಾಂಪತ್ಯ ಭೋಜನ, ಉಪವಾಸ, ಪಾರಾಯಣ ಹೀಗೆ ನಾನಾ ವ್ರತ-ಅನುಷ್ಠಾನಗಳನ್ನು ಮಾಡಿ ಕೃತಾರ್ಥರಾಗುತ್ತಾರೆ. ಉಳಿದೆಲ್ಲ ಮಾಸಗಳಲ್ಲಿ ಮಾಡುವ ಎಲ್ಲ ಕರ್ಮಗಳಿಗಿಂತಲೂ ಈ ಮಾಸದಲ್ಲಿ ಮಾಡಲ್ಪಡುವ ಸ್ವಲ್ಪ ಪುಣ್ಯಕರ್ಮಗಳು ಸಹ ಅಸಾದ್ರಶ್ಯ ಫಲಗಳನ್ನು ತಂದು ಕೊಡುತ್ತವೆ. ಎಲ್ಲ ರೀತಿ ಪ್ರಾಚೀನ ದೋಷಗಳು, ಗ್ರಹಭಾದೆಗಳು, ಪಿತ್ರ್ಯ-ಬ್ರಹ್ಮಾದಿ ಶಾಪಗಳು ಸಹ ಈ ಮಾಸದ ಶುದ್ಧಾಚರಣೆಯಿಂದ ನಾಶಹೊಂದುವವು. ನಿರಂತರ ಏಳ್ಗೆ ಬಯಸುವ ಎಲ್ಲರೂ ಪ್ರತಿ ಬಾರಿಯು ಅಧಿಕಮಾಸವು ಪ್ರಾಪ್ತವಾದಾಗ ತಪ್ಪದೇ ಆಚರಿಸಿ ಉದ್ಧೃತರಾಗಬಹುದು. ಅಧಿಕದಲ್ಲಿ ಮಾಡಲ್ಪಡುವ ಎಲ್ಲ ಅನುಷ್ಠಾನಗಳಿಗೆ ಅಧಿಕವಾದ ಫಲವಿರುತ್ತದೆ.
ದುಃಸ್ವಪ್ನಂ ಚೈವ ದಾರಿದ್ಯಂ ದುಷ್ಕೃತಂ ತ್ರಿವಿಧಂ ಚ ಯತ್ |
ತತ್ ಸರ್ವಂ ವಿಲಯಂ ಯಾತಿ ಕೃತೇ ಶ್ರೀಪುರುಷೋತ್ತಮೇ ||
ದುಃಸ್ವಪ್ನ, ದಾರಿದ್ರ್ಯ ಹಾಗೂ ದುಷ್ಕೃತ ಎಂಬ ಮೂರು ವಿಧವಾದ ಅನಿಷ್ಟಗಳು ಪುರುಷೋತ್ತಮಮಾಸದ ಆಚರಣೆಯಿಂದ ನಾಶವಾಗುತ್ತವೆ.
ಅಶ್ವಮೇಧಸಹಸ್ರಾಣಿ ವಾಜಪೇಯಶತಾನಿ ಚ |
ಅಧಿಮಾಸದಿನೈಕಸ್ಯ ಕಲಾಂ ನಾಱಂತಿ ಷೋಡಶೀಮ್ || (ಪದ್ಮ ಪುರಾಣ)
ಸಾವಿರಾರು ಅಶ್ವಮೇಧ, ನೂರಾರು ವಾಜಪೇಯೀ ಯಾಗಗಳು ಅಧಿಕಮಾಸದ ಕೇವಲ ಒಂದು ದಿನದ ಹದಿನಾರನೇ ಒಂದಂಶದಷ್ಟಕ್ಕೂ ಸರಿಸಾಟಿಯಾಗಲಾರವು.
ಅಪೂಪ ದಾನ-
ಅಧಿಕಮಾಸದಲ್ಲಿ ವಿಧಿಸಿರುವ ಎಲ್ಲಾ ದಾನಗಳಲ್ಲಿ ಈ ದಾನ ವಿಶೇಷ ಮತ್ತು ಮಹಾಫಲಪ್ರದ. ಅಪೂಪ ಅಥವಾ ಅನಾರಸಗಳೆಂಬ ಸಿಹಿ ಪದಾರ್ಥವನ್ನು ಶುದ್ಧವಾದ ತುಪ್ಪದಿಂದ ತಯಾರಿಸಿ, ಶ್ರೀಹರಿಗೆ ನಿವೇದಿಸಿ ಮೂವತ್ತುಮೂರು ಸಂಖ್ಯೆಯಷ್ಟು ಅಪೂಪಗಳನ್ನು ಕಂಚಿನ ಪಾತ್ರೆಯಲ್ಲಿ ಬೆಲ್ಲ ಮತ್ತು ತುಪ್ಪ ಇವುಗಳ ಸಹಿತ ಇಟ್ಟು ಯೋಗ್ಯರಾದ ಬ್ರಾಹ್ಮಣರಿಗೆ ದಕ್ಷಿಣೆಯ ಸಹಿತವಾಗಿ ಅವೆಲ್ಲವನ್ನು ದಾನಮಾಡಬೇಕು. ಅಪೂಪದಾನ ಫಲ ಸಮಗ್ರವಾಗಿ ಪಾಪನಾಶ. ಅಪೂಪದಾನವು ಭೂದಾನಕ್ಕೆ ಸಮನಾಗಿದೆಯೆಂದು ಪ್ರಮಾಣವಚನಗಳಿವೆ. ಈ ದಾನವನ್ನು ಮಾಸಾದ್ಯಂತ ಪ್ರತಿನಿತ್ಯವೂ ಹೇಳಲಾಗಿದೆ, ಆದರೆ ಪ್ರತಿನಿತ್ಯ ಅಸಾಧ್ಯವಾದಲ್ಲಿ ಈ ಮಾಸದಲ್ಲಿ ಒಂದು ಬಾರಿಯಾದರೂ ಮಾಡಬಹುದು. ಇಲ್ಲಿನ ಮೂವತ್ತುಮೂರು ಅಪೂಪಗಳಲ್ಲಿ ವಿಶೇಷವಾದ ಭಗವಂತನ ಮೂವತ್ತುಮೂರು ರೂಪಗಳ ಸಾನ್ನಿಧ್ಯವಿರುತ್ತದೆ.
ಅಪೂಪದಾನದ ಕಾಲಕ್ಕೆ ಹೇಳಬೇಕಾದ ಮಂತ್ರ –
ವಿಷ್ಣುರೂಪೀ ಸಹಸ್ರಾಂಶುಃ ಸರ್ವಪಾಪಪ್ರಣಾಶನಃ |
ಅಪೂಪಾನ್ನಪ್ರದಾನೇನ ಮಮ ಪಾಪಂ ವ್ಯಪೋಹತು ||
ನಾರಾಯಣ ಜಗದ್ಬೀಜ ಭಾಸ್ಕರಪ್ರತಿರೂಪಕ |
ವ್ರತೇನಾನೇನ ಪುತ್ರಾಂಶ್ಚ ಸಂಪದಂ ಚಾಭಿವರ್ಧಯ ||
ಯಸ್ಯ ಹಸ್ತೇ ಗದಾಚಕ್ರೇ ಗರುಡೋ ಯಸ್ಯ ವಾಹನಮ್ |
ಶಂಖಃ ಕರೆತಲೇ ಯಸ್ಯ ಸ ಮೇ ವಿಷ್ಣುಃ ಪ್ರಸಿದತು ||
ಕಲಾಕಾಷ್ಠಾದಿರೂಪೇಣ ನಿಮೇಷಘಟಿಕಾದಿನಾ |
ಯೋ ವಂಚಯತಿ ಭೂತಾನಿ ತಸ್ಮೈ ಕಾಲಾತ್ಮನೇ ನಮಃ ||
ಕುರುಕ್ಷೇತ್ರಮಂ ದೇಶಃ ಕಾಲಃ ಪರ್ವ ದ್ವಿಜೋ ಹರಿಃ |
ಪೃಥ್ವೀಸಮಮಿದಂ ದಾನಂ ಗೃಹಾಣ ಪುರುಷೋತ್ತಮ ||
ಮಲಾನಾಂ ವಿಷುದ್ಧ್ಯರ್ಥಂ ಪಾಪಪ್ರಶಮನಾಯ ಚ |
ಪುತ್ರಪೌತ್ರ್ಯಾದಿವೃದ್ಧ್ಯರ್ಥಂ ತವ ದಾಸ್ಯಾಮಿ ಭಾಸ್ಕರ ||
ಸಹಸ್ರಕಿರಣಗಳಿಗೆ ಅಧಿಪತಿಯು ಎಲ್ಲ ಪಾಪಗಳನ್ನು ನಾಶಮಾಡುವವನು ಆದ ಸೂರ್ಯಾಂತರ್ಯಾಮಿಯಾದ ಹೇ ವಿಷ್ಣುವೇ, ಈ ಅಪೂಪಗಳ ದಾನದಿಂದ ನನ್ನ ಎಲ್ಲ ಪಾಪಗಳನ್ನು ಪರಿಹರಿಸು. ಜಗತ್ತಿಗೆ ಬೀಜನಾದ ಭಾಸ್ಕರನ ಪ್ರತಿರೂಪಿಯಾದ ಹೇ ಪುರುಷೋತ್ತಮನೇ ಈ ವ್ರತದಿಂದ ನನ್ನ ಪುತ್ರಾದಿಗಳ ಸಂಪತ್ತನ್ನು ವರ್ಧನಮಾಡು. ಯಾರ ಕೈಯಲ್ಲಿ ಗದಾ ಮತ್ತು ಚಕ್ರವಿದೆಯೋ, ಯಾರು ವಾಹನ ಗರುಡನಾಗಿರುವನೋ, ಯಾರ ಕೈಯಲ್ಲಿ ಶಂಖವಿರುವದೋ ಅಂಥಹ ವಿಷ್ಣುವೇ ನನ್ನ ಮೇಲೆ ಪ್ರಸನ್ನನಾಗು. ಕಲಾ, ಕಾಷ್ಠ, ನಿಮೇಷ, ಘಟಿಕಾದಿ ಕಾಲಮಾಪಕ ರೂಪಗಳಿಂದ ಎಲ್ಲ ಜೀವರಾಶಿಗಳನ್ನು ವಂಚಿಸುತ್ತಿರುವ (ನಿಯಮನ ಮಾಡುತ್ತಿರುವ) ಕಾಲಾತ್ಮಕನಾದ ಶ್ರೀಹರಿಯೇ ನಿನಗೆ ನಮಸ್ಕಾರಗಳು. ದಾನ ಕೊಡುತ್ತಿರುವ ಈ ಕ್ಷೇತ್ರವು ಕುರುಕ್ಷೇತ್ರಕ್ಕೆ ಸಮವಾಗಿದೆ, ಕಾಲವು ಶ್ರೇಷ್ಠ ಪರ್ವಕಾಲವಾಗಿದೆ, ಈ ದಾನವು ಪೃಥ್ವಿದಾನಕ್ಕೆ ಸಮನಾಗಿದೆ ಮತ್ತು ದಾನ ಗ್ರಹಣ ಮಾಡುತ್ತಿರುವ ದ್ವಿಜನು ಸಾಕ್ಷಾತ್ ಹರಿಗೆ ಸಮನಾಗಿದ್ದಾನೆ (ಈ ಅನುಷ್ಠಾನವು ದಾನಕಾಲಕ್ಕೆ ಇರಬೇಕು) ಆದ್ದರಿಂದ ಹೇ ಪುರುಷೋತ್ತಮ ಈ ದಾನವನ್ನು ಸ್ವೀಕರಿಸು. ದೋಷಗಳ ಶುದ್ಧಿಗಾಗಿ, ಪಾಪಗಳ ನಾಶಕ್ಕಾಗಿ, ಪುತ್ರಪೌತ್ರಾದಿಗಳ ಶ್ರೇಯೋವೃದ್ಧಿಗಾಗಿ ಹೇ ಭಾಸ್ಕರಾಂತರ್ಯಾಮಿ ಪುರುಷೋತ್ತಮನೇ ಈ ದಾನವನ್ನು ನಾನು ನಿನಗೆ ಕೊಡುತ್ತಿದ್ದೇನೆ (ಸ್ವೀಕರಿಸಿ ನಮ್ಮನ್ನು ಅನುಗ್ರಹಿಸು).
ಮುವತ್ತುಮೂರು ಬಾಳೆ, ಮಾವು, ಹಲಸು ಹೀಗೆ ಹಣ್ಣುಗಳ ದಾನವನ್ನು ಕೊಡಬಹುದು. ಫಲದಾನವನ್ನು ಅಪೂಪದ ಜೊತೆಗೆ ಅಥವಾ ಸ್ವತಂತ್ರವಾಗಿಯೂ ಕೊಡಬಹುದು. ಎಲ್ಲ ದಾನಗಳು ದಕ್ಷಿಣೆಯ ಸಹಿತವಾಗಿಯೇ ಇರಬೇಕು, ಇಲ್ಲವಾದರೆ ದಾನದ ಫಲ ಬರುವುದಿಲ್ಲ.
ದೀಪದಾನ ಮತ್ತು ದೀಪಾರಾಧನೆ –
ಅಧಿಕಮಾಸದುದ್ದಕ್ಕೂ ಪುರುಷೋತ್ತಮರೂಪಿಯ ಶ್ರೀಹರಿಯ ಪ್ರೀತ್ಯರ್ಥ ದೀಪವನ್ನು ಇಟ್ಟು ಪೂಜಿಸಬೇಕು. ಈ ದೀಪಾರಾಧನೆಯಿಂದ ಜೀವನದಲ್ಲಿಯ ಅವಿದ್ಯಾ, ಅಜ್ಞಾನ, ದಾರಿದ್ರ್ಯಗಳೆಂಬ ಕತ್ತಲೆಯು ಹೋಗಿ ಜೀವನವು ಕಾಂತಿಮಯವಾಗಲೆಂದು ಶ್ರೀಹರಿಯಲ್ಲಿ ಪ್ರಾರ್ಥಿಸಬೇಕು.
ದೀಪಾರಾಧನೆಯ ಮಂತ್ರ –
ಗೃಹಾಣೇಮಂ ಮಯಾ ದತ್ತಂ ಸುದೀಪಂ ಪುರುಷೋತ್ತಮ |
ಪ್ರಸಾದಸುಮುಖೋ ಭೂತ್ವಾ ವಾಂಛಿತಾರ್ಥಪದೋ ಭವ ||
ದೀಪದ ದಾನದಿಂದ ಸಹ ಸಂಪತ್ತಿನ ಪ್ರಾಪ್ತಿ. ದೀಪದಾನದ ಮಂತ್ರ –
ದೀಪಸ್ತಮೋ ನಾಶಯತಿ ದೀಪಃ ಕಾಂತಿಂ ಪ್ರಯಚ್ಛತಿ |
ತಸ್ಮಾದ್ದೀಪಪ್ರದಾನೇನ ಪ್ರೀಯತಾಂ ಪುರುಷೋತ್ತಮಃ ||
ಅವಿದ್ಯಾತಮಸಾ ವ್ಯಾಪ್ತೇ ಸಂಸಾರೇ ಪಾಪಗರ್ಭಿತೇ |
ಜ್ಞಾನಮೋಕ್ಷಪ್ರದೋ ದೀಪಸ್ತಸ್ಮಾದ್ದತ್ತೋ ಮಯಾ ತವ ||
ಎಂದು ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆಯಲ್ಲಿ ದೀಪಗಳನ್ನು ಬ್ರಾಹ್ಮಣ ಸುವಾಸಿನೀಯರಿಗೆ ಸದಕ್ಷಿಣಾ ದಾನ ಮಾಡಬೇಕು.
ಅಪೂಪದಾನ ಮತ್ತು ದೀಪದಾನ ಈ ದಾನಗಳು ಅಧಿಕಮಾಸ ವ್ರತದ ಮುಖ್ಯ ಅನುಷ್ಠಾನಗಳು. ಇವುಗಳಲ್ಲದೆ ಶಾಸ್ತ್ರಗಳಲ್ಲಿ ಇನ್ನೂ ಕೆಲವು ಆಚರಣೆಗಳನ್ನು ಹೇಳಲಾಗಿದೆ. ಅವುಗಳನ್ನು ಈಗ ನೋಡೋಣ.
ಅಧಿಕಮಾಸದಲ್ಲಿ ಉಪವಾಸವನ್ನು ಆಚರಿಸುವುದು ವಿಶೇಷವಾಗಿ ಪುಣ್ಯಪ್ರದ. ಅಧಿಕಮಾಸದಲ್ಲಿ ಬರುವ ಎರಡು ಏಕಾದಶಿಗಳಂದು ಉಪವಾಸವನ್ನು ಮಾಡಬೇಕು. ಉಪವಾಸವೆಂದರೆ ದಿನಪೂರ್ತಿ ಆಹಾರ ಪಾನಾದಿಗಳ ತ್ಯಾಗ. ದಿನ ಪೂರ್ತಿ ಉಪವಾಸದಂತೆ ಅಧಿಕಮಾಸ ಪೂರ್ತೀ ಏಕಭುಕ್ತ ವ್ರತದ ಆಚರಣೆಯು ವಿಶೇಷ. ಇದರಲ್ಲಿ ದಿವಸಕ್ಕೆ ಒಮ್ಮೆ ಮಾತ್ರ ಭೋಜನವನ್ನು ಸ್ವೀಕರಿಸಬೇಕು. ಹಗಲು ಪೂರ್ತಿ ಊಟ ಮಾಡದೇ ಕೇವಲ ರಾತ್ರಿಯಲ್ಲಿ ಮಾತ್ರ ಭೋಜನ ಸ್ವೀಕಾರಕ್ಕೆ ನಕ್ತಭೋಜನವೆಂದು ಕರೆಯುತ್ತಾರೆ. ಏಕಭುಕ್ತ ಅಥವಾ ನಕ್ತಭೋಜನ ವ್ರತವನ್ನು ಮಾಡುವವರು ಬ್ರಾಹ್ಮಣ ಭೋಜನ ಮಾಡಿಸಿ ಅಪೂಪದಾನವನ್ನು ಮಾಡಬೇಕೆಂದು ನಿರ್ದೇಶವಿದೆ.
ಅಧಿಕಮಾಸದಲ್ಲಿ ಗೋದಾನವೆಂಬುದು ಬಹಳ ಪುಣ್ಯಪ್ರದ. ಗೋದಾನವೆಂದರೆ ಆಕಳ ದಾನ. ಇಲ್ಲಿ ಕೇವಲ ಆಕಳ ದಾನವೆಂದು ಮಾತ್ರ ಅರ್ಥೈಸಲಾಗದು. ಗೋದಾನ ಮಹಾಪುಣ್ಯಪ್ರದ, ಆದರೆ ಎಲ್ಲರಿಗೂ ಆರ್ಥಿಕವಾಗಿ ಅಸಾಧ್ಯ. ಅನುಕೂಲಸ್ಥರು ತಮ್ಮ ಆಯುರ್ಮಾನದಲ್ಲಿ ಒಮ್ಮೆಯಾದರೂ ಅವಶ್ಯ ಮಾಡಬೇಕಾದದ್ದು, ಅಧಿಕಮಾಸದಲ್ಲಿ ಮಾಡಿದ ಅತ್ಯಧಿಕ ಫಲ. ಯಾರಿಗೆ ಈ ದಾನವು ಅಶಕ್ಯವೋ ಅವರು ಗೋವಿಗೆ ಆಹಾರ (ಗೋಗ್ರಾಸ), ಗೋಪಾಲಕರಾದ ಆಕಳನ್ನು ಇಟ್ಟುಕೊಂಡವರಿಗೆ ಆರ್ಥಿಕ ಸಹಾಯ ಇತ್ಯಾದಿ ಗೋಸೇವೆಯನ್ನು ಸಹ ಮಾಡಬಹುದು. ಶ್ರೀಕೃಷ್ಣನನ್ನು ಶಾಸ್ತ್ರಗಳು ಗೋಬ್ರಾಹ್ಮಣ ಪರಿಪಾಲಕ, ಗೋಪಾಲ, ಗೋವಿಂದ ಇತ್ಯಾದಿಯಾಗಿ ಸ್ತುತಿಮಾಡುತ್ತವೆ. ಗೋಸೇವೆ ಪುರುಷೋತ್ತಮನಾದ ಗೋವಿಂದನ ಶ್ರೇಷ್ಠವಾದ ಪೂಜೆ.
ಪುರಾಣಗಳ ರಾಜ ಶ್ರೀಮದ್ಭಾಗವತ. ವಿಶೇಷವಾಗಿ ಕೃಷ್ಣಾವತಾರವನ್ನು ಹೇಳುವ ಪುರಾಣ. ಎಲ್ಲ ಪುರಾಣಶ್ರವಣಗಳಿಗಿಂತಲೂ ಭಾಗವತ ಪುರಾಣ ಶ್ರವಣ ಪರಮಶ್ರೇಷ್ಠ. ಭಾಗವತ ಶ್ರವಣದಿಂದ ಪರಮ ಪುರುಷಾರ್ಥ ಮೋಕ್ಷದ ಪ್ರಾಪ್ತಿ. ಇಂಥಹ ಪುರಾಣಸಂಹಿತೆಯ ಪಾರಾಯಣ, ಶ್ರವಣ, ಪಠನವೂ ಸಹ ಅಧಿಕಮಾಸದ ಒಂದು ವಿಶೇಷ ಅನುಸಂಧಾನ. ಈ ಪುರಾಣದ ಗ್ರಂಥವನ್ನು ಸಹ ಅಧಿಕದಲ್ಲಿ ವಿಷ್ಣುಭಕ್ತನಾದ ಬ್ರಾಹ್ಮಣನಿಗೆ ದಾನ ಮಾಡಬೇಕು.
ಅಧಿಕಮಾಸದ ಮಹಾತ್ಮೆಯು ಬೃಹನ್ನಾರದೀಯ ಪುರಾಣದ ಒಂದು ಭಾಗ. ಈ ಮಾಸ ಪ್ರಾಪ್ತವಾಗಲು ಅದರ ಶ್ರವಣ, ಪಠಣವೂ ಸಹ ವಿಧಿತ. ಈ ಮಹಾತ್ಮೆಯ ಪುಸ್ತಕದ ದಾನ ಸಹ ಶ್ರೇಷ್ಠದಾನ.
ಎಲ್ಲ ಜ್ಞಾನಿಗಳಲ್ಲಿ ಮೌನಿಯಾಗಿರುವವನೇ ಶ್ರೇಷ್ಠವೆಂಬುದು ಮಾತು. ಮೌನಕ್ಕಿಂತಲೂ ದೊಡ್ಡ ವ್ರತ ಮತ್ತೊಂದಿಲ್ಲ. ಅಂಥಹ ಮೌನವನ್ನು ಸ್ನಾನ, ಹೋಮ ಮತ್ತು ಭೋಜನಕಾಲಗಳಲ್ಲಿ ಅಧಿಕಮಾಸದಲ್ಲಿ ಪಾಲಿಸಬೇಕು. ಮೌನವ್ರತದಲ್ಲಿ ಪ್ರಾಚೀನಾದಿ ಎಲ್ಲ ಪಾಪಗಳ ನಾಶ.
ಶ್ರೀವಿಷ್ಣುಸಹಸ್ರನಾಮ, ಭಗವದ್ ಗೀತೆ ಇವುಗಳ ಪಾರಾಯಣವನ್ನು ಅಧಿಕದಲ್ಲಿ ಮಾಡಬೇಕು. ಅಧಿಕಮಾಸದಲ್ಲಿ ಪಠಿಸುವುದಕ್ಕಗಿಯೇ ವಿಹಿತವಾದ ಶ್ರೀಪುರುಷೋತ್ತಮ ಸ್ತೋತ್ರವನ್ನು ಪ್ರತಿನಿತ್ಯ ಶ್ರದ್ಧಾಭಕ್ತಿಗಳಿಂದ ಪಾರಾಯಣ ಮಾಡಬೇಕು. (ಸ್ತೋತ್ರವನ್ನು ಲೇಖನದ ಕೊನೆಗೆ ಕೊಡಲಾಗಿದೆ.)
ಅಧಿಕಮಾಸದಲ್ಲಿ ಪ್ರತಿ ದಿವಸವೂ ಯಾವುದಾದರೊಂದು ದಾನ ಮಾಡಬೇಕು. ದಾನವು ಅನೇಕ ವಿಧ, ಕೆಲವನ್ನು ಹೇಳುತ್ತೇನೆ, ಅನುಕೂಲವಾದದ್ದನ್ನು ಅವಶ್ಯ ಮಾಡಬೇಕು. ಸುವರ್ಣದಾನ, ರಜತದಾನ, ತಾಮ್ರ ಪಾತ್ರೆಯ ದಾನ, ರತ್ನದಾನ, ವಸ್ತ್ರದಾನ, ಧಾನ್ಯದಾನ, ಪಾದರಕ್ಷೆಗಳ ದಾನ ಇತ್ಯಾದಿ ಅನೇಕ.
ಅಧಿಕಮಾಸವು 33 ತಿಂಗಳಿಗೊಮ್ಮೆ ಪ್ರಾಪ್ತವಾಗುವ ಶ್ರೇಷ್ಠ ಮಾಸ. ಯಜ್ಞ, ದಾನ ಮತ್ತು ತಪಸ್ಸುಗಳನ್ನು ಮಾಡುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ವೈದಿಕ ಸಂಸ್ಕೃತಿಯ ಆಧಾರಸ್ಥಂಭಗಳೇ ಇವು. ನಿರಂತರ ಇವುಗಳ ಅನುಸಂಧಾನವನ್ನು ಮಾಡುತ್ತಲೆ ಇರಬೇಕೆಂಬುದು ಶಾಸ್ತ್ರಗಳ ಸಂದೇಶ. ಇವತ್ತು ಜೀವನದ ಯಾಂತ್ರಿಕತೆ, ಧಾರ್ಮಿಕ ತಿಳುವಳಿಕೆಯಲ್ಲಿ ಕೊರತೆ ಮತ್ತು ಆಚರಣೆಗಳಲ್ಲಿ ತಾತ್ಸಾರಗಳಿಂದಾಗಿ ನಮ್ಮ ಸಂಸ್ಕೃತಿ ಮೂಲಭೂತ ಮೌಲ್ಯಗಳೇ ಕುಸಿಯುತ್ತಿವೆ. ಭೋಗಗಳಿಗೆ ಅಪಾರವಾಗಿ ಧನವ್ಯಯ ಮಾಡುವುದು ಮತ್ತು ಧರ್ಮಕಾರ್ಯಗಳಲ್ಲಿ ವಿತ್ತಶಾಠ್ಯ ತೋರುವುದು, ಇದು ಈ ಕಾಲದ ಲಕ್ಷಣ. ದೈವ ಅನುಸಂಧಾನ, ವಿಧಿ-ವಿಷೇಧಗಳ ಆಚರಣೆಗಳ ಅವಶ್ಯಕತೆ ಇವತ್ತು ಅತ್ಯಂತ ಅವಶ್ಯಕವಾಗಿವೆ. ಅಧಾರ್ಮಿಕ ಪ್ರವೃತ್ತಿಯು ಹೀಗೆಯೆ ಮುಂದುವರಿದಲ್ಲಿ ನಾವು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶೀಘ್ರದಲ್ಲಿ ಅನಾಥರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆಚರಣೆಗಳ ಹಿಂದಿರುವ ಸತ್ಯ, ವೈಶಿಷ್ಠ್ಯಗಳನ್ನು ತಿಳಿದುಕೊಂಡು ಅವುಗಳನ್ನು ಆಚರಣೆಗೆ ತಂದುಕೊಳ್ಳಬೇಕು, ಅವುಗಳ ಬಗ್ಗೆ ತತ್ಸಾರ, ತಿರಸ್ಕಾರ ಯಾವಾಗಲೂ ಸಲ್ಲದು. ಅಧಿಕಮಾಸ ನಮ್ಮನ್ನು ಲೌಕಿಕ, ಪ್ರಾಪಂಚಿಕ ಕರ್ಮಗಳಿಂದ ನಿವೃತ್ತರನ್ನಾಗಿಸುವ ಕಾರಣಕ್ಕಾಗಿಯೇ ಪುರುಷೋತ್ತಮನು ದಯಪಾಲಿಸಿದ ಸದವಕಾಶ. ಗುರು-ದೈವ-ಶಾಸ್ತ್ರಗಳಲ್ಲಿ ಶ್ರದ್ಧೆಯನ್ನಿಟ್ಟು ಪರಮಾರ್ಥವನ್ನು ಸಾಧಿಸಿ ಶ್ರೇಷ್ಠ ಗುರಿಯನ್ನು ಹೊಂದೋಣ. ಪುರುಷೋತ್ತಮನಾದ ಶ್ರೀಕೃಷ್ಣ ನಮ್ಮನ್ನು ಅನುಗ್ರಹಿಸಲಿ, ಅಜ್ಞಾನಾದಿಗಳನ್ನು ಪರಿಹರಿಸಲಿ.
ಅಧಿಕಮಾಸದಲ್ಲಿ ಪ್ರತಿನಿತ್ಯ ಪಠಿಸತಕ್ಕ ಶ್ರೀಪುರುಷೋತ್ತಮ ಸ್ತೋತ್ರ
ಪುರುಷೋತ್ತಮ ಸ್ತೋತ್ರಮ್
ನಮಃ ಪುರುಷೋತ್ತಮಾಖ್ಯ ನಮಸ್ತೇ ವಿಶ್ವಭಾವನ |
ನಮಸ್ತೇಽಸ್ತು ಹೃಷೀಕೇಶ ಮಹಾಪುರುಷ ಪೂರ್ವಜ ||
ಯೇನೇದಮಖಿಲಂ ಜಾತಂ ಯತ್ರ ಸರ್ವಂ ಪ್ರತಿಷ್ಠಿತಮ್ |
ಲಯಮೇಷ್ಯತಿ ಯತ್ರೈತತ್ ತಂ ಪ್ರಪನ್ನೋಽಸ್ಮಿ ಕೇಶವಮ್ ||
ಪರೇಶ ಪರಮಾನಂದ ಪರಾತ್ಪರತರಃ ಪ್ರಭುಃ |
ಚಿದ್ರೂಪ ಚಿತ್ಪರಿಜ್ಞೇಯಃ ಸ ತೇ ಕೃಷ್ಣಃ ಪ್ರಸೀದತುಃ ||
ಕೃಷ್ಣಂ ಕಮಲಪತ್ರಾಕ್ಷಂ ರಾಮಂ ರಘುಕುಲೋದ್ಭವಮ್ |
ನೃಸಿಂಹ ವಾಮನಂ ವಿಷ್ಣುಂ ಸ್ಮರನ್ ಯಾತಿ ಪರಾಂ ಗತಿಮ್ ||
ವಾಸುದೇವಂ ವರಾಹಂ ಚ ಕಂಸಕೇಶಿನಿಷೂದನಮ್ |
ಪುರಾಣಪುರುಷಂ ಯಜ್ಞಪುರುಷಂ ಪ್ರಣತೋಽಸ್ಮ್ಯಹಮ್ ||
ಅನಾದಿನಿಧನಂ ದೇವಂ ಶಂಕಚಕ್ರಗಧಾಧರಮ್ |
ತ್ರಿವಿಕ್ರಮಂ ಹಲಧರಂ ಪ್ರಣತೋಽಸ್ಮಿ ಸನಾತನಮ್ ||
ಯ ಇದಂ ಕೀರ್ತಯೇನ್ನಿತ್ಯಂ ಸ್ತೋತ್ರಾಣಾಮುತ್ತಮೋತ್ತಮಮ್ |
ಸರ್ವಪಾಪವಿನಿರ್ಮುಕ್ತೋ ವಿಷ್ಣುಲೋಕೇ ಮಹೀಯತೇ ||
|| ಇತಿ ಶ್ರೀಪುರುಷೋತ್ತಮ ಸ್ತೋತ್ರಮ್ ||
| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...
Comments
ಲೇಖನ ಉತ್ತಮವಾಗಿದೆ. ಅದನ್ನೋದುವ ಭಾಗ್ಯ ಈ ಅಧಿಕಜ್ಯೇಷ್ಠದಲ್ಲಿ ಬಂದಿದೆ. ಇಷ್ಟೋಂದು ವಿಸ್ತಾರವಾಗಿ ವಿಷಯಗಳನ್ನು ತಿಳಿಸಿರುವ ಲೇಖನವನ್ನು ಕಂಡಿರಲಿಲ್ಲ. ನನ್ನ ಭಾಗ್ಯವೆಂದೇ ತಿಳಿಯುತ್ತೇನೆ. ಅನಂತಾನಂತ ವಂದನೆಗಳು.