Skip to main content

ಶ್ರೀಮನ್ಮಥ ನಾಮ ಸಂವತ್ಸರದ ವರ್ಷ ಭವಿಷ್ಯ ಯುಗಾದಿ 2015:

ಯುಗಾದಿಯ ದಿನ ಎಲ್ಲರಿಗೂ ತಮ್ಮ ಬದುಕಿನ ಮುಂದಿನ ಒಂದು ವರ್ಷದ ಫಲಾಫಲಗಳನ್ನು ತಿಳಿದುಕೊಳ್ಳುವ ಆಸೆ ಇದ್ದೇ ಇರುತ್ತದೆ. ಹೀಗಾಗಿಯೇ ಹಬ್ಬದ ದಿನ ಸಾಮೂಹಿಕವಾಗಿ ಪಂಚಾಂಗ ಶ್ರವಣ ನಡೆಯುತ್ತದೆ. ಇದರಿಂದ ಒಂದು ಅವ್ಯಕ್ತವಾದ ನಿರಾಳ ಭಾವ ಸಿಗುತ್ತದೆ. ಇಲ್ಲಿದೆ ನೋಡಿ. "ಶ್ರೀ ಮನ್ಮಥ ನಾಮ ಸಂವತ್ಸರ"ದ ದ್ವಾದಶ ರಾಶಿಗಳ ಸಂಕ್ಷಿಪ್ತ ವರ್ಷ ಭವಿಷ್ಯ. ಮೇಷ: ಈ ರಾಶಿಯ ಅಧಿಪತಿ ಕುಜ ಗ್ರಹವಾಗಿದ್ದು, ಇದು ಅಗ್ನಿತತ್ತ್ವದ ರಾಶಿಯಾಗಿದೆ. ಇದು ಕಾಲ ಪುರುಷನ ತಲೆಯಾಗಿದೆ. ಈ ರಾಶಿಯವರಿಗೆ ಜುಲೈವರೆಗೆ ಗುರುಬಲ ಇರುವುದಿಲ್ಲ. ಆ ಸಮಯದಲ್ಲಿ ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಕಾರ್ಯಗಳಲ್ಲಿ ಅಡೆತಡೆಯೂ, ಜೊತೆಗೆ ಮನಸ್ಸಿಗೆ ತುಸು ಅಶಾಂತಿಯೂ ಇರುವುದು. ಈ ಸಮಯದಲ್ಲಿ ಕೈಯಲ್ಲೇ ಎಷ್ಟೇ ಹಣವಿದ್ದರೂ ಇದ್ದಕ್ಕಿದ್ದಂತೆಯೇ ವಿಪರೀತ ಖರ್ಚಿನ ಬಾಬತ್ತುಗಳು ಎದುರಾಗುವ ಸಂಭವವಿದೆ. ಜುಲೈ 13ರ ನಂತರ ಗುರು ಐದನೇ ಮನೆಗೆ ಬಂದಾಗ ಗುರುಬಲ ಬರುವುದು. ಆಗ ಶುಭ ಕಾರ್ಯಗಳಾದ ಮದುವೆ, ಗೃಹಪ್ರವೇಶ, ನೀವೇಶ ಖರೀದಿ, ಮಕ್ಕಳ ಮದುವೆ, ಉಪನಯನ ಇತ್ಯಾದಿಗಳು ಜರುಗುವುವು. ವಿದ್ಯಾರ್ಥಿಗಳು ಕೂಡ ಉನ್ನತ ಮಟ್ಟಕ್ಕೆ ಏರುವರು. ಈ ವರ್ಷ ಶನಿ ಅಷ್ಟಮದಲ್ಲಿರುವುದಿಂದ ಪ್ರತಿ ಶನಿವಾರ ಆಂಜನೇಯ ದೇವಾಲಯಕ್ಕೆ ಹೋಗಿ ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಮಾಡುವುದು ಒಳ್ಳೆಯದು. ವೃಷಭ: ಈ ರಾಶಿಯ ಅಧಿಪತಿ ಶುಕ್ರ ಗ್ರಹ. ಇದು ಭೂ ತತ್ತ್ವಕ್ಕೆ ಸಂಬಂಧಿಸಿದ ರಾಶಿಯಾಗಿದೆ. ಈ ರಾಶಿಯವರಿಗೆ ಈ ವರ್ಷ ಗುರುಬಲ ಅಷ್ಟಾಗಿ ಇಲ್ಲ. ಅಂದಮಾತ್ರಕ್ಕೆ ಆತಂಕ ಪಡಬೇಕಾಗಿಲ್ಲ. ಅಂದರೆ, ಮನಸಿನಲ್ಲಿರುವ ತೀರ್ಮಾನಗಳಿಂದ ನಿವೃತ್ತರಾಗಬಾರದು. ಗುರುಬಲ ಇಲ್ಲದೇ ಇದ್ದರೂ ಉಳಿದ ದೆಸೆಗಳ ಬಲದಿಂದ ನೀವು ಪ್ರವೃತ್ತಿ ಮಾರ್ಗದಲ್ಲಿ ಇರಬಹುದು. ಎಲ್ಲೋ ಅಲ್ಲೊಂದು ಇಲ್ಲೊಂದು ಕಾರ್ಯಕ್ಕೆ ಸಣ್ಣಪುಟ್ಟ ಅಡೆತಡೆಗಳಾಗಬಹುದು ಅಷ್ಟೆ. ವರ್ಷದ ಉತ್ತರಾರ್ಧದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಶನಿಯು ಸಹ ಈ ವರ್ಷ ಏಳನೇ ಮನೆಯಲ್ಲಿರುವುದರಿಂದ ಸ್ವಲ್ಪ ಅಂಶಾಂತಿ ಉಂಟಾದೀತು. ಆದರೆ ರಾಜಕೀಯದಲ್ಲಿ ಆಸಕ್ತಿ ಇರುವವರು ಒಳ್ಳೆಯ ಹೆಸರು ಪಡೆಯುವರು. ವಿದ್ಯಾರ್ಥಿಗಳು ಮಾತ್ರ ಎಂದಿಗಿಂತ ತುಸು ಹೆಚ್ಚು ಶ್ರಮ ಪಡುವ ಅವಶ್ಯಕತೆ ಇದೆ. ಈ ರಾಶಿಯವರು ಯಾವುದೇ ಕಾರ್ಯವನ್ನು ಮಾಡುವಾಗ ತುಸು ಯೋಚನೆ ಮಾಡಿ, ಗುರುಹಿರಿಯರ ಅಭಿಪ್ರಾಯಗಳನ್ನೂ ತೆಗೆದುಕೊಂಡು ಮುಂದುವರಿಯುವುದು ಉತ್ತಮ. ಮಿಥುನ: ಜಗತ್ತನ್ನು ಸೃಷ್ಟಿಸುವುದೇ ಈ ರಾಶಿಯ ತತ್ತ್ವವಾಗಿದೆ. ಈ ರಾಶಿಯ ಅಧಿಪತಿ ಬುಧ ಗ್ರಹ. ಈ ರಾಶಿ ವಾಯು ತತ್ತ್ವಕ್ಕೆ ಸಂಬಂಧಪಟ್ಟಿದೆ. ಜುಲೈ ಮಧ್ಯಭಾಗದವರೆಗೆ ಗುರು ಎರಡನೇ ಮನೆಯಲ್ಲಿರುವುದರಿಂದ ಗುರುಬಲ ಹೆಚ್ಚಾಗಿರುವ ಈ ಸಮಯದಲ್ಲಿ ಶುಭ ಕಾರ್ಯಗಳು, ಸಿರಿ ಸಂಪತ್ತು, ಧನಲಾಭ, ಸಂತಾನ ಲಾಭ, ವಿದ್ಯಾರ್ಥಿಗಳಿಗೆ ಕೀರ್ತಿ ಉಂಟಾಗುವುದು. ವಿಜ್ಞಾನಿಗಳಿಗಂತೂ ಈ ವರ್ಷ ಉತ್ತಮ ಫಲ ಕಟ್ಟಿಟ್ಟ ಬುತ್ತಿಯಾಗಿದೆ. ಶನಿಯು ತುಲಾ ರಾಶಿಯಲ್ಲಿ , ಅಂದರೆ ಆರನೇ ಮನೆಯಲ್ಲಿರುವುದರಿಂದ ಮನಸ್ಸಿನ ನೆಮ್ಮದಿಗೆ ಆಗಾಗ ಸ್ವಲ್ಪ ಭಂಗ ಉಂಟಾಗಬಹುದು. ಸ್ವಲ್ಪ ಜಾಗ್ರತೆಯಿಂದ ಇದ್ದರೆ ಇದರಿಂದ ಪಾರಾಗಬಹುದು. ಯಾವುದೇ ಕೆಲಸವಾಗಲಿ, ಅವಕ್ಕೆ ಈ ವರ್ಷ ವಿಳಂಬ ಗತಿಯೇ ಉಂಟಾಗುತ್ತದೆ. ಆದರೂ ಹಿಡಿದ ಕೆಲಸ ಸುಸೂತ್ರವಾಗಿ ಮುಗಿಯುತ್ತವೆ. ಸಾಧ್ಯವಾದರೆ ಪ್ರತಿದಿನ ವೆಂಕಟೇಶ್ವರ ದೇವಾಲಯಕ್ಕೆ ಹೋದರೆ ಒಳ್ಳೆಯದು. ಒಟ್ಟಿನಲ್ಲಿ ಈ ವರ್ಷ ಶೇಕಡ ಐವತ್ತರಷ್ಟು ಯಶಸ್ಸಿಗಂತೂ ಮೋಸವಿಲ್ಲ. ಕಟಕ: ಈ ರಾಶಿಗೆ ಚಂದ್ರನು ಅಧಿಪತಿ. ಈ ರಾಶಿ ಜಲ ತತ್ತ್ತಕ್ಕೆ ಸಂಬಂಧಪಟ್ಟಿದೆ. ಜುಲೈ 13ರವರೆಗೆ ಗುರು ಈ ರಾಶಿಯಲ್ಲಿರುವುದರಿಂದ ಈ ರಾಶಿಯವರಿಗೆ ಗಜಕೇಸರಿ ಯೋಗದ ಪ್ರಾಪ್ತಿ ಇದೆ. ಇದು ಮಹಾಯೋಗಗಳಲ್ಲಿ ಒಂದು. ಹೀಗಾಗಿ ಈ ರಾಶಿಯವರು ಈ ವರ್ಷ ಹಣಕಾಸು ಮುಗ್ಗಟ್ಟಿನಿಂದ ಪಾರಾಗುವರು. ಜೊತೆಗೆ ಮನೆಯಲ್ಲಿ ಮಂಗಳ ಕಾರ್ಯಗಳೆಲ್ಲವೂ ವಿಘ್ನವಿಲ್ಲದೆ, ತುಂಬಾ ಯಶಸ್ವಿಯಾಗಿ ನೆರವೇರುತ್ತವೆ. ಹೀಗಾಗಿ ಇಂಥ ವಿಷಯಗಳಿಗೆ ಸಂಬಂಧಪಟ್ಟಂತೆ ವೃಥಾ ಯೋಚನೆ ಬೇಡ. ಗುರು ಎರಡನೇ ಮನೆಗೆ ಬಂದಾಗ ಕೂಡ ಗುರುಬಲ ಇರುತ್ತದೆ. ಆಗ ಸ್ವಂತ ಮನೆಯ ಭಾಗ್ಯೋದಯವಾಗುವುದು. ಆದರೆ ಐನೇ ಮನೆಯಲ್ಲಿ ಶನಿ ಇರುವುದರಿಂದ ಸಹೋದರರಲ್ಲಿ ಭಿನ್ನಭಿಪ್ರಾಯ, ಮಾನಸಿಕ ಘರ್ಷಣೆಗಳಾಗುವ ಸಾಧ್ಯತೆ ಗೋಚರಿಸುತ್ತದೆ. ಕೋಪದ ಕೈಗೆ ಬುದ್ಧಿಯನ್ನು ಕೊಡದೆ ಮೌನದಿಂದಲೇ ಸಂದರ್ಭಗಳನ್ನು ಎದುರಿಸುವುದು ಒಳಿತು. ಈ ರಾಶಿಯವರಿಗೆ ಈ ವರ್ಷ ಏನಿಲ್ಲವೆಂದರೂ ಶೇಕಡ 55-60ರಷ್ಟು ಉತ್ತಮ ಫಲವಿದೆ. ಸಿಂಹ: ಈ ರಾಶಿಯ ಅಧಿಪತಿ ರವಿ ಗ್ರಹ. ಗುರುವು ಯುಗಾದಿಯಿಂದ ನಾಲ್ಕು ತಿಂಗಳ ಕಾಲ ಹನ್ನೆರಡನೇ ಮನೆಯಲ್ಲಿ (ಇದು ಹೆಚ್ಚು ವ್ಯಯದ ಮನೆ) ಇರುವುದರಿಂದ ಗುರುಬಲ ಅಷ್ಟಕ್ಕಷ್ಟೆ. ಆಗ ಧನ-ಧಾನ್ಯ, ಸಂಪತ್ತೆಲ್ಲ ಪರರ ಪಾಲಾಗುವ ಆತಂಕವಿದೆ. ನೌಕರಿಯಲ್ಲಿ ಇರುವವರು ಈ ವರ್ಷ ಕೆಲಸವನ್ನು ಬದಲಿಸುವ, ಅಥವಾ ಇನ್ನೊಂದು ಕಂಪನಿಯನ್ನೋ ನೋಡಿಕೊಳ್ಳುವ ಸಂಭವವಿದೆ. ಗುರುವು ಸಿಂಹ ರಾಶಿಗೆ ಬಂದನಂತರ ಆರೋಗ್ಯ ಸುಧಾರಿಸಲಿದೆ. ಆಗ ತಕ್ಕ ಮಟ್ಟಿಗೆ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವುದು. ಯಾವುದೇ ಕೆಲಸಕ್ಕೆ ಕೈಹಾಕುವ ಮೊದಲು ಅದರ ಸಾಧಕ-ಬಾಧಕಗಳನ್ನು ಅರಿತು ಮುಂದುವರಿಯುವುದು ಕ್ಷೇಮ. ಹಿರಿಯರಿಂದ ಸನ್ಮಾನ-ಗೌರವ ಸಿಗುವ ಅವಕಾಶಗಳು ಈ ವರ್ಷ ಹೆಚ್ಚಾಗಿವೆ. ಶನಿಯು ನಾಲ್ಕನೇ ಮನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ನೆಮ್ಮದಿ ಕಡಿಮೆ. ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು. ರಾಜಕೀಯ ವ್ಯಕ್ತಿಗಳಿಗೆ ಗೌರವ ಸಿಗುವುದು. ಕನ್ಯಾ: ಈ ರಾಶಿಯ ಅಧಿಪತಿ ಬುಧ ಗ್ರಹ. ಇದು ಭೂ ತತ್ತ್ವಕ್ಕೆ ಸೇರಿದೆ. ಗುರು ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಈ ವರ್ಷ ವಿವಾಹ ಯೋಗವಿದೆ. ಸಂತಾನಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯವೂ ಈ ವರ್ಷ ಸಿಗಲಿದೆ. ಜೊತೆಗೆ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮಗೊಳ್ಳುವುದು. ಅಲ್ಲದೆ, ಗುರುಹಿರಿಯರ ಕೃಪೆಗೆ ಪಾತ್ರರಾಗುವರು. ಯಾವುದೇ ಕೆಲಸ ಕಾರ್ಯಗಳು ಸ್ವಲ್ಪ ಕುಂಟುತ್ತ ಸಾಗುವುದರಿಂದ ಸ್ವಲ್ಪ ಕಿರಿಕಿರಿ ಆದೀತು. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಯಶಸ್ಸು ದೊರೆಯುವುದು. ರಾಜಕೀಯ ವ್ಯಕ್ತಿಗಳು ತಟಸ್ಥ ರೀತಿಯಲ್ಲಿ ತಮ್ಮ ಸ್ಥಾನಮಾನದಲ್ಲಿ ಮುಂದುವರಿಯುವರು. ತುಲಾ: ಈ ರಾಶಿಯ ಅಧಿಪತಿ ಶುಕ್ರ ಗ್ರಹ. ಇದು ವಾಯು ತತ್ತ್ವಕ್ಕೆ ಸೇರಿದೆ. ಗುರುವು ಜುಲೈ ಎರಡನೇ ವಾರ ಮುಗಿಯುವವರೆಗೂ ಹತ್ತನೇ ಮನೆಯಲ್ಲಿ ಇರುವನು. ಹೀಗಾಗಿ ಕೆಲಸ ಕಾರ್ಯಗಳು ಉತ್ತಮವಾಗಿಯೇ ಮುನ್ನಡೆ ಕಾಣುತ್ತವೆ. ಮುಖ್ಯವಾಗಿ ಸರಕಾರಿ ನೌಕರರಿಗೆ ಸ್ಥಾನ ಪಲ್ಲಟವುಂಟಾಗುವುದು. ಇದು ಬಡ್ತಿ, ವರ್ಗಾವಣೆ ಇಲ್ಲವೇ ನಿಯೋಜನೆ ಯಾವುದರಿಂದಾದರೂ ಆದೀತು. ಮೇಲಧಿಕಾರಿಗಳ ಜೊತೆ ವ್ಯವಹರಿಸುವಾಗ ಜಾಣ್ಮೆ ಮುಖ್ಯ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಬರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಮಾತ್ರ ಹಿನ್ನಡೆ, ಮುಜುಗರ ಉಂಟಾದೀತು. ಗುರು ಹನ್ನೊಂದನೇ ಮನೆಗೆ ಬಂದಾಗ ಗುರುಬಲ ಬರುವುದರಿಂದ ಗುರು-ಹಿರಿಯರಿಂದ ಗೌರವ, ಸನ್ಮಾನಗಳು ಬಯಸದೇ ಇದ್ದರೂ ಸಿಗುತ್ತದೆ. ಆದರೆ ಶನಿಯು ಎರಡನೇ ಮನೆಯಲ್ಲಿ ಇರುವುದರಿಂದ ಸಾಡೇಸಾತ್ ಶನಿ ನಡೆಯುವುದು. ಹೀಗಿದ್ದರೂ ಈ ರಾಶಿಯವರಿಗೆ ಈ ವರ್ಷ ಶೇಕಡ 60ಕ್ಕಿಂತ ಹೆಚ್ಚು ಉತ್ತಮ ಫಲವಿದೆ. ವೃಶ್ಚಿಕ: ಈ ರಾಶಿಯ ಅಧಿಪತಿ ಕುಜ ಗ್ರಹ. ಇದು ಜಲ ತತ್ತ್ವದ ರಾಶಿಯಾಗಿದೆ. ಈ ರಾಶಿಯವರಿಗೆ ಗುರು ಒಂಬತ್ತನೇ ಮನೆಯಲ್ಲಿ ಇರುವುದರಿಂದ ವರ್ಷದ ಪೂರ್ವಾರ್ಧದಲ್ಲಿ ಒಳ್ಳೆಯ ಫಲವಿದೆ. ಆ ಸಮಯದಲ್ಲಿ ತೀರ್ಥಯಾತ್ರೆ, ಗಂಗಾಸ್ನಾನದ ಫಲ ಸಿಗುವುದು. ಗುರು-ಹಿರಿಯರ ಆಶಿರ್ವಾದದಿಂದ ನೀವು ಅಂದುಕೊಂಡಿರುವ ಕೆಲಸ ಕಾರ್ಯಗಳು ನಡೆಯುವುದು. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ಶನಿಯು ಈ ರಾಶಿಯಲ್ಲಿಯೇ ಇರುವುದರಿಂದ ಸಾಡೇಸಾತ್ ಶನಿಯ ಕಾಟವಿದೆ. ಹೀಗಾಗಿ ಸಂಭವನೀಯ ಅಪವಾದಗಳ ಬಗ್ಗೆ ಹುಷಾರಾಗಿರಬೇಕು. ಶನಿವಾರಗಳಂದು ಶನಿದೇವರ ದೇವಾಲಯಕ್ಕೆ ಹೋಗುವುದರಿಂದ ಮತ್ತು ಎಳ್ಳನ್ನು ಎಳ್ಳು ದಾನ ಮಾಡುವುದರಿಂದ ನೆಮ್ಮದಿ ಸಿಗಲಿದೆ. ಧನುಸ್ಸು: ಈ ರಾಶಿಯ ಅಧಿಪತಿ ಗುರು ಗ್ರಹ. ಇದು ಅಗ್ನಿ ತತ್ತ್ವದ ರಾಶಿಯಾಗಿದೆ. ಜುಲೈ ಮಧ್ಯಭಾಗದವರೆಗೂ ಗುರು ಎಂಟನೇ ಮನೆಯಲ್ಲಿ ಇರುವನು. ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಪ್ರಯಾಣದಲ್ಲಿ ಎಚ್ಚರಿಕೆಯಿಂದಿರುವುದು ಒಳ್ಳೆಯದು. ಗುರು ಒಂಬತ್ತನೇ ಮನೆಗೆ ಬಂದ ನಂತರ ಭೂ ವ್ಯವಹಾರದಲ್ಲಿ ಲಾಭ-ಶುಭ ಕಾರ್ಯಗಳು ನಡೆಯುವುದು. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸುವರು. ಶನಿಯು ಹನ್ನೆರಡನೇ ಮನೆಯಲ್ಲಿರುವುದರಿಂದ ಸಾಡೇ ಸಾತ್ ಶನಿ ಆರಂಭವಾಗುವುವುದರಿಂದ ಆಸ್ತಿ ನಷ್ಟ, ಅಪವಾದಗಳು ಸಂಭವಿಸುವ ಸಾಧ್ಯತೆ ಇದೆ. ಇಷ್ಟಾದರೂ ಈ ರಾಶಿಯವರಿಗೆ ಶೇಕಡ 55ರಷ್ಟು ಉತ್ತಮ ಫಲ ಇದ್ದೇಇದೆ. ಮಕರ: ಈ ರಾಶಿಯ ಅಧಿಪತಿ ಶನಿ. ಇದು ಭೂತತ್ತ್ವಕ್ಕೆ ಸೇರಿರುವುದು. ಗುರುವು ಜುಲೈವರೆಗೂ ಏಳನೇ ಮನೆಯಲ್ಲಿರುವುದರಿಂದ ಹಿಡಿದ ಕೆಲಸಗಳು ಉತ್ತಮ ರೀತಿಯಲ್ಲೇ ಮುಂದುವರಿಯಲಿವೆ. ಗುರುಬಲ ಇರುವುದರಿಂದ ಅವಿವಾಹಿತರಿಗೆ ವಿವಾಹ ಭಾಗ್ಯ, ಮನೆ-ಜಮೀನು ಖರೀದಿಯ ಭಾಗ್ಯ ದೊರಕುವುದು. ಸಂತಾನ ಭಾಗ್ಯವನ್ನೂ ಹೊಂದಬಹುದು. ಶನಿಯು ಹನ್ನೊಂದನೇ ಮನೆಯಲ್ಲಿರುವುದರಿಂದ ಉತ್ತಮ ಕಾರ್ಯಗಳನ್ನೇ ನಿಮ್ಮ ಕೈಯಲ್ಲಿ ಮಾಡಿಸುತ್ತಾನೆ. ಹೊರದೇಶಗಳಿಗೆ ಹೋಗುವ ಅವಕಾಶ ನಿಮ್ಮದಾಗುತ್ತದೆ. ವರ್ಷದ ಅಂತ್ಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಚಿ ವಹಿಸುವುದು ಒಳ್ಳೆಯದು. ಈ ರಾಶಿಯವರಿಗೆ ಈ ವರ್ಷ ಶೇಕಡ 75ರಷ್ಟು ಉತ್ತಮ ಫಲ ದೊರೆಯುವುದು. ಕುಂಭ: ಈ ರಾಶಿಯ ಅಧಿಪತಿ ಶನಿ. ಇದು ವಾಯು ತತ್ತ್ವಕ್ಕೆ ಸೇರಿರುವುದು. ಜುಲೈ 13ರವರೆಗೂ ಗುರು ಆರನೇ ಮನೆಯಲ್ಲಿರುವುದರಿಂದ ಈ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿರುವುದು ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ವೈರಿಗಳಿಂದ ತೊಂದರೆ ಆಗುವ ಸಂಭವವಿದೆ. ಆದರೂ ಗುರು ಏಳನೇ ಮನೆಗೆ ಬದಲಾಗುವುದರಿಂದ ಕೈಗೊಂಡ ಕಾರ್ಯದಲ್ಲಿ ಜಯ, ಧನ, ಸಂಪತ್ತು, ನೂತನ ವಾಹನ ಖರೀದಿ ಎಲ್ಲವೂ ನಿರಾತಂಕವಾಗಿ ಆಗಲಿವೆ. ರಾಜಕಾರಣವನ್ನೇ ವೃತ್ತಿಯಾಗಿ ಕೈಗೊಂಡಿರುವವರಿಗೆ ಉತ್ತಮ ಭವಿಷ್ಯವಿದೆ. ನಂತರ ಶನಿ ಹತ್ತನೇ ಮನೆಗೆ ಬರುವುದರಿಂದ ಕೆಲಸ ಕಾರ್ಯಗಳು ಮಂದಗತಿಯಿಂದ ಮುಂದೆ ಸಾಗಲಿವೆ. ಈ ವರ್ಷ ಶೇಕಡ 60ರಷ್ಟು ಫಲಕ್ಕೆ ಮೋಸವೇನಿಲ್ಲ. ಮೀನ: ಈ ರಾಶಿಯ ಅಧಿಪತಿ ಗುರು. ಇದು ಜಲತತ್ತ್ವಕ್ಕೆ ಸೇರುವುದು. ಗುರು ಜುಲೈ 13ರ ನಂತರ 5ನೇ ಮನೆಗೆ ವರ್ಗಾವಣೆಯಾಗುವುದರಿಂದ ಸಂತಾನ ಭಾಗ್ಯ, ಹೊರ ದೇಶ ಪ್ರವಾಸ, ಶುಭ ಕಾರ್ಯಗಳು, ಮಕ್ಕಳಿಗೆ ನೌಕರಿಯಲ್ಲಿ ಬಡ್ತಿ, ಸಹೋದರ-ಸಹೋದರಿಯರ ನಡುವೆ ಅನ್ಯೋನ್ಯ ಭಾವನೆಯಿಂದ ಮನೆಯಲ್ಲಿ ಸಂತಸದ ಹೊನಲು ಹರಿಯಲಿದೆ. ನಂತರ ಶನಿಯು ಒಂಬತ್ತನೇ ಮನೆಗೆ ಬರುವುದರಿಂದ ಗಂಗಾಸ್ನಾನ ಯೋಗ, ತೀರ್ಥಕ್ಷೇತ್ರಗಳ ದರ್ಶನ ಭಾಗ್ಯ ಒಲಿದು ಬರಲಿದೆ. ನಿವೇಶನ, ಮನೆ ಖರೀದಿ. ರಾಜಕೀಯ ವ್ಯಕ್ತಿಗಳಿಗೆ ಮಿಶ್ರ ಫಲವುಂಟಾಗುವುದು. ಈ ವರ್ಷ ಈ ರಾಶಿಯವರಿಗೆ ಶೇಕಡ 60ರಷ್ಟು ಉತ್ತಮ ಫಲವಿದೆ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...