Skip to main content

ಸಾಮಾನ್ಯಜ್ಞಾನ ಭಾಗ ೨

ಸಾಮಾನ್ಯಜ್ಞಾನ ಭಾಗ ೨ ಮಾನವನು ಜನಿಸುವಾಗ ಮೂರು ಋಣ(ಸಾಲ)ವನ್ನು ಹೊಂದಿರುತ್ತಾನೆ. ಇವುಗಳಲ್ಲಿ ದೇವ ಋಣ, ಋಷಿ ಋಣ, ಪಿತೃ ಋಣ ಎಂಬುದಾಗಿರುತ್ತದೆ. ದೇವ ಮತ್ತು ಋಷಿ ಋಣಗಳ ಬಗೆಗೆ ನಾನು ಈ ಹಿಂದೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಪಿತೃ ಋಣ ತೀರಿಸುವ ಬಗ್ಗೆ ವಿಚಾರಮಾಡಬೇಕಾಗಿದೆ. ಪಿತೃಗಳೆಂದರೆ ನಮ್ಮ ತಾಯಿ, ತಂದೆ, ಅಜ್ಜ, ಅಜ್ಜಿ ಹೀಗೆ ತಂದೆಯಿಂದ ೩ ಪೀಡಿಗಳು, ತಾಯಿಯಿಂದ ೩ ಪೀಡಿಗಳು, ತಾಯಿಯ ತಂದೆಯಿಂದ ೩ ಪೀಡಿಗಳು, ತಾಯಿಯ ತಾಯಿಯಿಂದ ೩ ಪೀಡಿಗಳು, ಒಟ್ಟು ೧೨ ಪ್ರಮುಖವಾಗಿರುತ್ತದೆ. ಆಮೇಲೆ ದೊಡ್ಡಪ್ಪ- ಚಿಕ್ಕಪ್ಪ- ದೊಡ್ಡಮ್ಮ- ಚಿಕ್ಕಮ್ಮ- ಅಣ್ಣ- ತಮ್ಮರು- ಅಕ್ಕ-ತಂಗಿ-ಮಾವ-ಅತ್ತೆ ಇತ್ಯಾದೆ ೨ ಮತ್ತು ೩ ನೇ ಹಂತದಲ್ಲಿ ತೆಗೆದುಕೊಳ್ಳುತ್ತೇವೆ. ನಾವು ನಮ್ಮ ತಂದೆ-ತಾಯಿಗಳನ್ನು ಬದುಕಿರುವವರೆಗೆ ಪ್ರೀತೆಯಿಂದ ನೋಡಿಕೊಳ್ಳಬೇಕು. ಅವರು ನಮ್ಮನ್ನು ಸಾಕಿ -ಸಲಹಿ ಮಡಿ ನಮ್ಮ ಏಳಿಗೆಗಾಗಿ ಪಟ್ಟ ಶ್ರಮವನ್ನು ಎಂದೂ ಮರೆಯಬಾರದು. ಮಕ್ಕಳಾದ ನಾವು ಅವರಿಗೆ ಕಷ್ಟ ಕೊಟ್ಟರೆ, ಅವರ ಶಾಪ ಮತ್ತು ಕಣ್ಣೀರು ಮಕ್ಕಳ ಜೀವನದಲ್ಲಿ ಪ್ರವಾಹದಷ್ಟು ಕಠಿಣವಾದೀತು. ಅಲ್ಲದೆ ಸರ್ವ ನಾಶ ಹೊಂದುವುದು ಖಚಿತ. ಪಿತೃಗಳ ಆಶೀರ್ವಾದ ನಮ್ಮ ಜೊತೆ ಇದ್ದರೆ ದೇವರ ಆಶೀರ್ವಾದ ಇದ್ದಂತೆ ನಮ್ಮ ಗೆಲುವು ನಿಶ್ಚಿತ. ಹಾಗಾಗಿ ಪಿತೃಗಳು ಬದುಕಿ ಇರುವ ವರೆಗೆ ಸಂತೋಷದಿಂದ ನೋಡಿಕೊಂಡು ಆಮೇಲೆ ಅವರಿಗೆ ಸದ್ಗತಿ ಅಥವಾ ಮೋಕ್ಷ ಮಾರ್ಗ ಹೊಂದಲು ಬೇಕಾದ ಕ್ರಿಯಾ-ಕರ್ಮ-ದಾನ-ಧರ್ಮ ಮೊದಲಾದವುಗಳನ್ನು ಮಾಡಬೇಕು. ಪಿತೃಗಳಿಗೆ ಮರಣಾನಂತರ ಶಕ್ತಿ ಯನ್ನು ನೀಡುವ ಶ್ರಾದ್ಧವನ್ನು ತಪ್ಪದೇ ಮಾಡಲೇಬೇಕು. ಇದು ಮಕ್ಕಳು ಪಿತೃಗಳಿಗೆ ನೀಡಿದ(ತೀರಿಸಿದ) ಪಿತೃ ಋಣ. ನಮ್ಮ ಶೃತಿ-ಸ್ಮೃತಿ-ಪುರಾಣಗಳು ಇದನ್ನೇ ಪುನಃ ಪುನಃ ಹೇಳುತ್ತೀವೆ. ಮಾತೃದೇವೋಭವ ಪಿತೃದೇವೋಭವ ಎಂಬ ಉಕ್ತಿಯಂತೆ ದೇವ ಸ್ಥಾನದಲ್ಲಿ ಪೂಜಿಸಬೇಕು. ಈ ಭಾಗದಲ್ಲಿ ಮರಣಾನಂತರದಲ್ಲಿ ಬರುವ ಕೆಲವು ಸಮಸ್ಯೆಗಳ ಬಗ್ಗೆ ವಿವರವನ್ನು ನೀಡಿರುತ್ತೇವೆ. ೧. ಪರಿವಾರದಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ ಕೂಡಲೇ ಮೊದಲು ಏನು ಮಾಡಬೇಕು? ಪರಿವಾರದಲ್ಲಿ ಯಾವುದೇ ವ್ಯಕ್ತಿ ಗತಿಸಿದ ಕೂಡಲೇ ಮನೆಯ ಒಳಗಿನ ರೂಮಿನಿಂದ ಅಂದರೆ ಪ್ರಧಾನ ಬಾಗಿಲಿನ ಹೊರಗೆ ಚಾಪೆಯನ್ನು ಹಾಸಿ ಅದರ ಮೇಲೆ ದರ್ಭೆಯನ್ನು ಹಾಕಿ ಅದರ ಮೇಲೆ ದಕ್ಷಿಣಾಭಿಮುಖವಾಗಿ ಕೈ ಕಾಲು ಮಡಚಿ ಮಲಗಿಸಬೇಕು. ತೆಂಗಿನ ಕಾಯನ್ನು ಸಮನಾದ ೨ ಭಾಗ ಬರುವಂತೆ ಒಡೆದು, ಅದರಲ್ಲಿ ಎಣ್ಣೆಯನ್ನು ಹಾಕಿ ದೀಪ ಹಚ್ಚಿ, ತಲೆಯ ಹತ್ತಿರ ಇಡಬೇಕು. ಮಲಗಿಸಿದ ಮೇಲೆ ಮನೆಯವರು ಗಂಗೋದಕವನ್ನು ಬಾಯಲ್ಲಿ ಹಾಕಬಹುದು. ಇನ್ನು ಕೆಲ ಸಂಪ್ರದಾಯದಲ್ಲಿ ಭಸ್ಮ ಅಥವಾ ಗೋಪೀ ಚಂದನವನ್ನು ಮೈಗೆಲ್ಲಾ ಹಚ್ಚುತ್ತಾರೆ. ರುದ್ರಾಕ್ಷಿ ಅಥವಾ ತುಲಸಿಮಣಿಗಳ ಮಾಲೆಯನ್ನು ಹಾಕುತ್ತಾರೆ. ಹೀಗೆ ಕೆಲವೊಂದು ಅವರವರ ಕುಲಪದ್ಧತಿಯಂತೆ ಮಾಡಬಹುದು. ೨. ಮೃತರ ಸಂಸ್ಕಾರವನ್ನು ಯಾರು ಮಾಡಬೇಕು? ಸಾಮಾನ್ಯವಾಗಿ ತಾಯಿ-ತಂದೆ ಮೃತರಾದಲ್ಲಿ ಹಿರಿಯ ಮಗನು ಕಾರ್ಯವನ್ನು ಮಾಡಬೇಕು. ಇಲ್ಲದಿದ್ದರೆ ಕಿರಿಯ ಮಗ ಅಥವಾ ಮಧ್ಯದವನು ಮಾಡಬೇಕು. ಗಂಡು ಮಕ್ಕಳು ಇಲ್ಲದಿದ್ದರೆ ಹೆಣ್ಣು ಮಕ್ಕಳ ಪತಿಯು ಮಾಡಬೇಕು. ಮಕ್ಕಳೇ ಇಲ್ಲದಿದ್ದರೆ ದೊಡ್ಡಪ್ಪ ಅಥವಾ ಚಿಕ್ಕಪ್ಪ ಇಲ್ಲವೇ ಅವರ ಮಕ್ಕಳು ಇಲ್ಲವಾದರೆ ಖಾಸ ಅಣ್ಣ-ತಮ್ಮರು ಇಲ್ಲದಿದ್ದರೆ ಸೋದರ ಮಾವ, ಸೋದರ ಮಾವಂದಿರ ಮಕ್ಕಳು ಇಲ್ಲವೇ ಅಳಿಯಂದಿರು , ಸಮೀಪದ ಬಂಧುಗಳು ಯಾರೂ ಇಲ್ಲದಿದ್ದರೆ ಮಿತ್ರರು ಸಂಸ್ಕಾರವನ್ನು ಮಾಡಬೇಕು. ಒಂದು ವೇಳೆ ತಂದೆ ಜೀವಂತ ಇದ್ದು ಮಗ ಸತ್ತರೆ ಮಗನ ಸಂಸ್ಕಾರವನ್ನು ತಂದೆಯು ಮಾಡಬೇಕು. ಆಗದಿದ್ದಲ್ಲಿ ಚಿಕ್ಕಪ್ಪ-ದೊಡ್ಡಪ್ಪ ಇವರಿಂದ ಇಲ್ಲವೇ ಸ್ವಗೋತ್ರರಿಂದಲೇ ಮಾಡಿಸಬೇಕು. ೩. ವ್ಯಕ್ತಿ ಗತಿಸಿದ ದಿನ ಹೇಗಿದೆ? ದೋಷ ಇದೆಯೆ ಎಂದು ಹೇಗೆ ತಿಳಿಯಬಹುದು? ಬರುವ ದೋಷಗಳಾವುದು? ವ್ಯಕ್ತಿ ಗತಿಸಿದಾಗ ಮುಖ್ಯವಾಗಿ ದೋಷ ಇದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಇದರಲ್ಲಿ ಬರುವ ಪ್ರಮುಖ ದೋಷಗಳೆಂದರೆ ಅ) ಧನಿಷ್ಠಾ ಪಂಚಕ - ಧನಿಷ್ಠ, ಶತಭಿಷ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತಿ ಈ ನಕ್ಷತ್ರದಲ್ಲಿ ಮೃತರಾದರೆ ವಂಶಾರಿಷ್ಟವು, ಅತಿ ಕೆಡುಕು ಆಗುತ್ತದೆ. ಇದು ಧನಿಷ್ಠಾ ಪಂಚಕ ದೋಷ. ಆ) ತ್ರಿಪಾದ ದೋಷಗಳು- ನಕ್ಷತ್ರ - ಕೃತ್ತಿಕಾ, ಪುನರ್ವಸು, ಉತ್ತರಾ, ವಿಶಾಖಾ, ಉತ್ತರಾಷಾಢ, ಪೂರ್ವಾಭಾದ್ರಪದಾ ವಾರ: ರವಿ, ಶನಿ, ಕುಜ ತಿಥಿ: ದ್ವಿತೀಯ(೨), ಸಪ್ತಮಿ(೭), ದ್ವಾದಶಿ(೧೨) . ಈ ಮೂರರಲ್ಲಿ ಅಂದರೆ ನಕ್ಷತ್ರ+ವಾರ+ತಿಥಿ ೩ ಸೇರಿದರೆ ತ್ರಿಪುಷ್ಕರ ಯೋಗ, ನಕ್ಷತ್ರ+ವಾರ ಅಥವಾ ನಕ್ಷತ್ರ+ತಿಥಿ ಸೇರಿದರೆ ದ್ವಿಪುಷ್ಕರ ಯೋಗ ಅಥವಾ ಮೃಗಶಿರಾ, ಚಿತ್ರಾ, ಧನಿಷ್ಠ ಈ ನಕ್ಷತ್ರವಿದ್ದರೂ ದ್ವಿಪುಷ್ಕರ ಯೋಗ ಎನ್ನುತ್ತಾರೆ. ಇಂಥ ತ್ರಿಪುಷ್ಕರ ಅಥವಾ ದ್ವಿಪುಷ್ಕರ ಯೋಗದಲ್ಲಿ ಮೃತರಾದಲ್ಲಿ ವಂಶಕ್ಕೆ ಅರಿಷ್ಠವಾದ್ದರಿಂದ ಶಾಂತಿಯನ್ನು ಮಾಡಿಸಬೇಕು. ಇಲ್ಲವಾದರೆ ಒಂದು ವರ್ಷದೊಳಗೆ ಮತ್ತೆ ಏನಾದರೂ ಅವಗಡ ಆಗಬಹುದು. ೪. ಹೆಣವನ್ನು(ಸತ್ತ ವ್ಯಕ್ತಿ) ಯಾರು ಹೊರಬೇಕು? ಒಂದು ವೇಳೆ ತಂದೆ-ತಾಯಿಗಳಾದಲ್ಲಿ ಮಕ್ಕಳು ಮತ್ತು ಬಂಧುಗಳು ಹೆಣವನ್ನು ಹೊರಬೇಕು. ಇದು ಮಹಾಪುಣ್ಯದ ಕೆಲಸ(ಸೇವೆ). ಇದನ್ನು ಎಲ್ಲರೂ ನಿರ್ವಹಿಸಬಹುದು. ಈ ವಿಷಯದಲ್ಲಿ ಬರುವ ಸಮಸ್ಯೆಗಳೆಂದರೆ ಅಪ್ಪ-ಅಮ್ಮ ಬದುಕಿರುವವರು ಹೆಣಹೊರಬಹುದೇ? ಪತ್ನಿಯು ಋತುಮತಿ ಆಗಿದ್ದಾಳೆ ಅದಕ್ಕೆ ನಾನು ಹೊರಬಹುದೆ? ಪತ್ನಿಯು ಗರ್ಭಿಣಿ.ಹಾಗಾಗಿ ಹೆಣ ಹೊರಬಹುದೆ? ಮುಂದೆನ ತಿಂಗಳು ವಿವಾಹವಿದೆ ಹಾಗಾಗಿ ನಾನು ಹೆಣ ಹೊರಬಹುದೆ? ಹೀಗೆ ಇನ್ನೇನೋ ಸಮಸ್ಯೆಗಳು. ಇದಕ್ಕೆಲ್ಲ ಒಂದೇ ಉತ್ತರವೆಂದರೆ ಎಲ್ಲರೂ ಹೆಣ ಹೊರಬಹುದು. ಹೀಗಿದ್ದವರು ಮಾಡಬಾರದೆಂದು ಯಾವ ಶಾಸ್ತ್ರದಲ್ಲಿಯೂ ಹೇಳಿಲ್ಲ. ಬದಲಿಗೆ ಮಾಡಬೇಕು, ಇದು ಪುಣ್ಯದ ಕೆಲಸ ಎಂದು ಗರುಡ ಪುರಾಣ ಮತ್ತು ಕಾಲಮಾಧವ ಗ್ರಂಥದಲ್ಲಿ ಉಲ್ಲೇಖವಿದೆ ೫. ಹೆಣ ಸುಡುವ ಜಾಗಕ್ಕೆ ಯಾರು ಹೋಗಬಹುದು? ಹೆಣ ಸುಡುವ ಸ್ಥಳಕ್ಕೆ ಯಾರೂ ಹೋಗಬಹುದು. ಆದರೆ ಅಂಜಿಕೆ (ಹೆದರಿಕೆ) ಇರುವವರು ಹೋಗುವುದು ಬೇಡ. ಕೆಲವೊಂದು ಪ್ರಾಂತದಲ್ಲಿ ಸ್ತ್ರೀಯರು ಹೋಗುವುದಿಲ್ಲ. ಅದು ಅವರವರ ಸಂಪ್ರದಾಯಕ್ಕೆ ಬಿಟ್ಟಿರುವಂಥದ್ದು. ಕೆಲವೊಂದು ಶಾಸ್ತ್ರಕ್ಕಿಂತ ಸಂಪ್ರದಾಯ ಗಟ್ಟಿಯಾಗಿ ನಮ್ಮಲ್ಲಿದೆ. ಅದನ್ನು ಬದಲಿಸುವುದು ಕಷ್ಟ. ಆದರೆ ಅಂತ್ಯದರ್ಶನ ಎಲ್ಲರೂ ಪಡೆಯಬಹುದು. ೬. ಅಸ್ತಿಸಂಚಯ ಯಾವಾಗ ಮಾಡಬೇಕು? ವ್ಯಕ್ತಿ ಮರಣ ಹೊಂದಿದ ದಿನ ದಹನ ಕ್ರೀಯೆ ಇರುತ್ತದೆ. ೨ನೇ ದಿನ ಕೆಲವರು ಹೋಗಿ ಆಚೆ ಈಚೆ ಬಿದ್ದ ಕಟ್ಟಿಗೆ ಮುಂತಾದವುಗಳನ್ನು ಸೇರಿಸಿ ಸುಡುತ್ತಾರೆ. ೩ನೇ ದಿನ ಅಥವಾ ಬೆಸದಿನಗಳಲ್ಲಿ ಅಸ್ತಿ ಸಂಚಯನ ಮಾಡುತ್ತಾರೆ ಮತ್ತು ಅಂದೇ ನದೆ ಅಥವಾ ಪವಿತ್ರ ನದಿ ಸಂಗಮದಲ್ಲಿ ವಿಸರ್ಜನೆ ಮಾಡುತ್ತಾರೆ. ಒಂದು ವೇಳೆ ಕೆಲವೊಬ್ಬರು ಗಂಗಾ ನದಿಯಲ್ಲೇ ಬಿಡಲು ನಿರ್ಧರಿಸಿದ್ದಲ್ಲಿ ಅಸ್ತಿಯನ್ನು ಶುದ್ಧಿಗೊಳಿಸಿ ವಸ್ತ್ರದಲ್ಲಿ ಸುತ್ತಿ ಮನೆಯಿಂದ ದೂರದಲ್ಲಿರುವ ಮರ ಗಿಡ ಅಥವಾ ಮರದ ಪೊಟರೆಯಲ್ಲಿ ಇಡಬೇಕು. ಯಾತ್ರೆಗೆ ಹೋರಡುವಾಗ ಕೊಂಡು ಹೋಗಬೇಕು. ೭. ಸಂಬಂಧಿಗಳು ಮೃತರ ಮನೆಗೆ ಮಾತನಾಡಿಸಲು ಯಾವಾಗ ಹೋಗಬೇಕು? ಮೃತರ ಸಂಬಂಧಿಗಳನ್ನು ಮಾತನಾಡಿಸಲು ಸಾಮಾನ್ಯವಾಗಿ ೫,೭,೯ ನೇ ಬೆಸದಿನಗಳಲ್ಲಿ ಹೋಗುವುದು ಸಂಪ್ರದಾಯ. ಇದಕ್ಕೆ ಸಂಬಂಧಿಸಿದಂತೆ ಶಾಸ್ತ್ರದಲ್ಲಿ ತಿಳಿಸಿಲ್ಲ. ಇಲ್ಲಿ ಸಂಪ್ರದಾಯ ಪ್ರಧಾನ. ೮. ಮೃತರ ಸಂಸ್ಕಾರವನ್ನು ಹೇಗೆ ಮಾಡುವುದು? ಒಂದು ವೇಳೆ ಪುರೋಹಿತರು ಲಭ್ಯವಿದ್ದಲ್ಲಿ ಒಂದನೇ ದಿನದಿಂದ ೧೩ನೇ ದಿನದವರೆಗೆ ಕ್ರಿಯೆಯು ಇರುತ್ತದೆ. ಪುರೋಹಿತರು ಸಿಗದಿದ್ದರೆ ದಹನ ಕ್ರಿಯೆಯನ್ನು ನೀವೇ ಮಾಡಿರೆ. ೩ನೇ ದಿನ ಅಸ್ತಿಸಂಚಯನ, ವಿಸರ್ಜನ ಮಾಡಿ ಆಮೇಲೆ ೯ನೇ ದಿನ, ೧೦ನೇ , ೧೧ನೇ, ೧೨ನೇ ದಿನದ ವಿಧಿಯನ್ನು ಮಾಡಬೇಕು. ೧೩ನೇ ದಿನ ವೈಕುಂಠ ಸಮಾರಾಧನೆ ಅಥವಾ ಶುಭ ಸ್ವೀಕಾರವನ್ನು ಮಾಡಬೇಕು. ೧೨ ನೇ ದಿನದಂದು ದಶ-ದಾನಗಳನ್ನು ಮಾಡಬೇಕು. ೧೧ನೇ ದಿನ ಸೂತಕ ಹೋಗಿ ಶುದ್ಧವಾಗಬೇಕು. ಆಮೇಲೆ ೨೧ನೇ ದಿನ, ತಿಂಗಳು ಆಗುವ ಮುನ್ನ ೨೭ನೇ ದಿನ, ಪ್ರತಿ ತಿಂಗಳು ಮೃತ ತಿಥಿಯಲ್ಲಿ ಒಂದೊಂದರಂತೆ ೬ ತಿಂಗಳ ಮುಂಚೆ ಅಂದರೆ ೫ ೧/೨ ತಿಂಗಳಿನಲ್ಲಿ ಮತ್ತು ೧ ವರ್ಷದ ಒಳಗೆ ೧೧ ೧/೨ ತಿಂಗಳಿನಲ್ಲಿ ಹೀಗೆ ೧ ವರ್ಷದ ಒಳಗೆ ೧೬ ಮಾಸಿಕಗಳಾಗುತ್ತದೆ. ಆಮೇಲೆ ವರ್ಷಾಂತಕ ಮಾಡಬೇಕು. ಇದು ಸಾಮಾನ್ಯವಾಗಿ ಎಲ್ಲಾ ಕಡೆ ಇರುವ ಸಂಸ್ಕಾರದ ವಿಧಾನ. ೯. ಮೃತರ ೧೨ನೇ ದಿನದಂದು ಮಾಡಬೇಕಾದ ದಾನಾದಿಗಳು ಯಾವುದು? ಅತೀ ಮುಖ್ಯವಾದುದು ಶಯ್ಯಾದಾನ ( ಜಮಖಾನಾ, ಗಾದಿ, ಚಾದರ, ತಲೆದಿಂಬು, ಹೊದಿಕೆ), ಗೋದಾನ, ಕೊಡೆ, ಚಪ್ಪಲಿ, ಉಂಗುರ, ವಸ್ತ್ರ, ಕಲಶ, ಪಂಚಪಾತ್ರೆ, ಆಸನ, ಊರುಗೋಲು, ತಾಮ್ರಪಾತ್ರೆ, ಕಮಂಡಲ, ಧಾನ್ಯ, ಪಕ್ವಾನ್ನ[ಸಿಹಿ ತಿಂಡಿಗಳು], ಹಣ, ದೀಪ, ಯಜ್ಞೋಪವೀತ, ರುದ್ರಾಕ್ಷಿಮಾಲೆ, ಭಗವದ್ಗೀತೆ, ವಿಷ್ಣು, ಸಹಸ್ರನಾಮ ಪುಸ್ತಕ ಇತ್ಯಾದಿ ದಾನಗಳನ್ನು ಮೃತರ ಸದ್ಗತಿಗಾಗಿ ಮಾಡಲೇಬೇಕು. ೧೦. ಈ ದಾನಾದಿಗಳ ಮಹತ್ವ ಏನು? ಮೃತರ ಸದ್ಗತಿಗಾಗಿ ಮಾಡುವ(೧೨ನೇ ದಿನ) ದಾನಕ್ಕೆ ಅತ್ಯಂತ ಮಹತ್ವವಿದೆ. ಈ ವಿಷಯದಲ್ಲಿ ಅನೇಕ ಪುರಾಣಗಳಲ್ಲಿ ದಾನಗಳ ಬಗ್ಗೆ ತಿಳಿಸಿದೆ. ಅದರಲ್ಲಿ ಗರುಡ ಪುರಾಣವು ಮುಖ್ಯವಾದುದು. ಅದರಂತೆ ಹೀಗಿದೆ, ಒಬ್ಬ ವ್ಯಕ್ತಿ ಮೃತವಾದ ಮೇಲೆ ದೇಹದಿಂದ ಹೊರ ಬಂದ ಆತ್ಮವು ೧೦ ದಿನಗಳ ಕಾಲ ಮನೆಯಲ್ಲಿಯೇ ಇರುತ್ತದೆ. ಆಮೇಲೆ ೧೧ನೇ ದಿನ ಆತ್ಮಕ್ಕೆ ಸೂಕ್ಷ್ಮ ರೂಪ ದೊರೆಯುತ್ತದೆ. ಇದು ಪ್ರೇತವೆನ್ನಬಹುದು. ಈ ಸೂಕ್ಷ್ಮ ಶರೀರವು ತಾನು ಮಾಡಿದ ಪಾಪ ಪುಣ್ಯದ ಫಲವನ್ನು ತೆಗೆದುಕೊಂಡು ತನ್ನ ಪರಲೋಕ ಯಾತ್ರೆಯನ್ನು ಆರಂಭಿಸುತ್ತದೆ. ಈ ಮಾರ್ಗವು ಅತಿಕಷ್ಟಕರವಾದುದು. ಈ ಮಾರ್ಗವನ್ನು ಕ್ರಮಿಸಲು, ಕಷ್ಟದಿಂದ ಪಾರಾಗಲು ೧೨ನೇ ದಿನ ಸಂಕಲ್ಪ ಮಾಡಿದ ದಾನಗಳು ನೆರವಾಗುತ್ತವೆ. ಅವರ ಕಷ್ಟ ಪರಿಹಾರವು ನಮ್ಮ ಶ್ರೇಯೋಭಿವೃದ್ಧಿಗೆ ಅನುಕೂಲವಾಗುತ್ತದೆ. ಶಯ್ಯಾದಾನ: ಈ ದಾನ ಸತ್ಪಾತ್ರರಿಗೆ ಕೊಡುವುದರಿಂದ ಅವನ ಪಿತೃಗಳು ಇಹ ಮತ್ತು ಪರಲೋಕದಲ್ಲಿ ಆನಂದದಿಂದ ಇರುತ್ತಾರೆ. ನರಕಕ್ಕೆ ಹೋಗುವುದಿಲ್ಲ. ಅಲ್ಲದೆ ಎಲ್ಲಾ ಪರ್ವ ತಿಥಿಗಳಲ್ಲಿ ಪುಣ್ಯ ನದಿಗಳಲ್ಲಿ ಸ್ನಾನ ಮತ್ತು ದಾನ ಮಾಡಿದುದಕ್ಕಿಂತ ಹೆಚ್ಚಿನ ಪುಣ್ಯ ಸಿಗುತ್ತದೆ. ಗೋದಾನ: ಜೀವನದಲ್ಲಿ ಮಾಡಿದ ಎಲ್ಲಾ ಪಾಪ ಪರಿಹಾರವಾಗಿ ಮೋಕ್ಷ ಪ್ರಾಪ್ತಿಗಾಗಿ ಮಾಡಬೇಕು. ಛತ್ರ(ಕೊಡೆ) ದಾನ: ಯಮಲೋಕಕ್ಕೆ ಹೋಗುವ ಮಾರ್ಗದಲ್ಲಿ ಸೂರ್ಯನ ತಾಪವು ಅತಿಯಾಗಿರುತ್ತದೆ. ಅದರಿಂದ ಜೀವನು ಸುಟ್ಟು ಹೋಗುತ್ತಾನೆ. ಆನ ನಾವು ಇಲ್ಲಿ ದಾನ ಮಾಡಿದ ಛತ್ರವು ಅವರಿಗೆ ನೆರಳನ್ನು ಕೊಡುತ್ತದೆ. ಚಪ್ಪಲಿ ದಾನ: ಯಮಲೋಕದ ಮಾರ್ಗವು ಅತ್ಯಂತ ಕಷ್ಟದ ಮಾರ್ಗ. ಇದು ಕಲ್ಲು ಮುಳ್ಳುಗಳಿಂದ ತುಂಬಿರುತ್ತದೆ. ನಾವು ಮಾಡಿದ ಈ ದಾನದಿಂದ ಅವರಿಗೆ ಮಾರ್ಗಕ್ರಮಿಸಲು ಅನುಕೂಲವಾಗುತ್ತದೆ. ವಸ್ತ್ರ ದಾನ: ಯಮಲೋಕದ ಮಾರ್ಗದಲ್ಲಿ ಅತಿ ಶೀತ ಮತ್ತು ಅತಿ ಉಷ್ಣ ಗಾಳಿಯಿಂದ ಬಹಳ ದುಃಖವಾಗುತ್ತದೆ. ಈ ದಾನದಿಂದ ಸುಖವಾಗಿ ದಾಟಿ ಹೋಗಬಹುದು. ಉಂಗುರ ದಾನ: ಯಮಲೋಕದ ಮಾರ್ಗದಲ್ಲಿ ಕಪ್ಪು ಮತ್ತು ನೀಲಿ ಬಣ್ಣದ ಯಮದೂತರು ಕೊಡುವ ಕಷ್ಟದಿಂದ ಪಾರಾಗಲು ಈ ದಾನ ಅನುಕೂಲವಾಗುತ್ತದೆ. ಕಮಂಡಲು - ಜಲಪಾತ್ರ ದಾನ: ಯಮಲೋಕಕ್ಕೆ ಹೋಗುವಾಗ ಕೆಲವು ಕಡೆ ಗಾಳಿ ಮತ್ತು ನೀರು ಸಿಗುವುದಿಲ್ಲ. ಈ ದಾನದಿಂದ ಅವರಿಗೆ ಆಗ ಅನುಕೂಲವಾಗುತ್ತದೆ. ತಾಮ್ರದ ಜಲಪಾತ್ರ ದಾನ: ಮೃತರ ಉದ್ದಿಶ್ಯವಾಗಿ ಯಾರು ಈ ದಾನವನ್ನು ಮಾಡುತ್ತಾರೋ ಅವರಿಗೆ ಸಾವಿರ ನೀರಿನ ಪಾತ್ರೆಯನ್ನು ಜನರಿಗಾಗಿ ಹೊರಗೆ ಇಟ್ಟ ಪುಣ್ಯ ದೊರೆಯುತ್ತದೆ. ಆಸನ, ಭೋಜನಪಾತ್ರೆ ದಾನ: ಈ ದಾನದಿಂದ ಯಮಲೋಕ ಮಾರ್ಗ ಕ್ರಮಿಸುವಾಗ ಆಯಾಸವಾಗದಿರಲು ನಾವು ಕೊಟ್ಟ ಭೋಜನ ದೊರೆಯುತ್ತದೆ. ಕುಂಭ ದಾನ: ಪ್ರೇತದ ಉದ್ದಿಶ್ಯ ಈ ದಾನವನ್ನು ಮಾಡುವುದರಿಂದ ಪ್ರೇತಕ್ಕೆ ಅನಂತ ರೀತಿಯ ತೃಪ್ತಿ ಸಿಗುತ್ತದೆ. ದೀಪ ದಾನ: ಮೃತರ ಉದ್ದಿಶ್ಯ ಈ ದಾನವನ್ನು ಮಾಡುವುದರಿಂದ ಘೋರ ಕತ್ತಲೆ ಮತ್ತು ಕಷ್ಟದಿಂದ ಕೂಡಿದ ಯಮಲೋಕದ ಮಾರ್ಗವನ್ನು ಕ್ರಮಿಸುವಾಗ ಅವರಿಗೆ ದಾರಿಪೀಪವಾಗಿ ಅನುಕೂಲ ಮಾಡಿಕೊಡುತ್ತದೆ. ಹೀಗೇ ನಾವು ಶ್ರದ್ಧಾ-ಭಕ್ತಿಯಿಂದ ಮಾಡುವ ಪ್ರತಿಯೊಂದು ದಾನವು ಆತ್ಮಕ್ಕೆ ಸದ್ಗತಿ ದೊರೆಯಲು ಅನುಕೂಲ ಮಾಡಿಕೊಡುತ್ತದೆ. ಆದ್ದರಿಂದ ಸಂಸ್ಕಾರಾದಿಗಳನ್ನು ಮತ್ತು ದಾನವನ್ನು ಸರಿಯಾಗಿ ಮಾಡಬೇಕು. ೧೧. ಮನೆಯಲ್ಲಿ ಹಿರಿಯರು ಮೃತರಾದರೆ ಒಂದು ವರ್ಷದ ಒಳಗೆ ವಿವಾಹಾದಿ ಅಥವಾ ಉಪನಯನ ಇತ್ಯಾದಿ ಶುಭಕಾರ್ಯವನ್ನು ಮಾಡಬಹುದೆ? ಮನೆಯಲ್ಲಿ ಹಿರಿಯರು ಅಥವಾ ೧೧ ದಿನದ ದಾಯಾದಿಗಳು, ತಂದೆ-ತಾಯಿ ಇವರು ಮೃತರಾದರೆ ಒಂದು ವರ್ಷದ ಕಾಲ ಶುಭ ಕಾರ್ಯವನ್ನು ಮಾಡಬಾರದು. ಕೆಲವರು ಈ ವಿಷಯದ ಬಗ್ಗೆ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ಅಂದರೆ ಒಂದು ವರ್ಷದ ಒಳಗೆ ಶುಭ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ೩ ವರ್ಷಗಳ ಪರ್ಯಂತ ಮಾಡಬಾರದು ಎಂದು. ಇದು ತಪ್ಪು ಅನಿಸಿಕೆ. ೧ ವರ್ಷದ ಒಳಗೆ ಶುಭಕಾರ್ಯ ಮಾಡಬೇಡಿ. ಏಕೆಂದರೆ ಕಾಲಮಾನರೀತ್ಯಾ ನಮ್ಮ ೧ ವರ್ಷ ಮೃತರಿಗೆ ೧ ದಿನ ಇದ್ದಂತೆ. ನಾವು ಪ್ರತಿ ತಿಂಗಳು ಮಾಡುವ ಮಾಸಿಕವು ಪಿತೃಗಳಿಗೆ ಪ್ರತಿ ಘಂಟೆಗೆ ಮಾಡಿದಂತೆ. ಯಾವ ರೀತಿಯಾಗಿ ಮೃತ ೧೧ ದಿನಗಳವರೆಗೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲವೋ ಹಾಗೇ೧ ವರ್ಷದೊಳಗೂ ಮಾಡಬಾರದು. ವರ್ಷಾಂತರ ಆದಮೇಲೆ ಮಾಡಬೇಕು. ಒಂದು ವೇಳೆ ಮಾಡಲೇಬೇಕಾದ ಪರಿಸ್ಥಿತಿ ಇದ್ದಲ್ಲಿ ವಿನಾಯಕ ಶಾಂತಿ ಮಾಡಿ ಶುಭ ಕಾರ್ಯ ಮಾಡಬೇಕು. ಹೆಣ್ಣು ಮಕ್ಕಳ ವಿವಾಹ ಮಾಡುವ ಸಂದರ್ಭವಿದ್ದಲ್ಲಿ ಮಾಡಬಹುದು. ೧೨. ತಂದೆ-ತಾಯಿಗಳು ಮೃತವಾದಲ್ಲಿ ಒಂದು ವರ್ಷದ ಒಳಗೆ ತೀರ್ಥ ಕ್ಷೇತ್ರದಲ್ಲಿ ಶ್ರಾದ್ಧ ಅಥವಾ ಗಯಾದಲ್ಲಿ ಶ್ರಾದ್ಧ ಮಾಡಬಹುದೆ? ಮೃತರ ವರ್ಷಾಂತರ ಆದ ಮೇಲೆ ಗಯಾ ಶ್ರಾದ್ಧ ಅಥವಾ ತೀರ್ಥ ಕ್ಷೇತ್ರದಲ್ಲಿ ಶ್ರಾದ್ಧವನ್ನು ಮಾಡಲಿಕ್ಕೆ ಬರುತ್ತದೆ. ಗರುಡ ಪುರಾಣ ಒಂದು ವರ್ಷದ ಒಳಗೆ ಬರುವುದಿಲ್ಲ. ೧೩. "ನಾವು ಪಿತೃಗಳ ಅಸ್ತಿಯನ್ನು ಗಂಗಾನದಿಯಲ್ಲಿ ಬಿಡಬೇಕೆಂದು ಸಂಕಲ್ಪಿಸಿದ್ದೇವೆ". ವಿಧಾನ ತಿಳಿಸಿ. ಗಂಗಾನದಿ ಅಥವಾ ಪ್ರಯಾಗದಲ್ಲಿ ಅಸ್ತಿವಿಸರ್ಜನೆ ಮಾಡಬೇಕು ಎಂದು ನಿರ್ಧಾರವಿದ್ದಲ್ಲಿ ಅಸ್ತಿಯನ್ನು ಶುದ್ಧಗೊಳಿಸಿ ಇಟ್ಟಿರಬೇಕು. ಎಲ್ಲಿ ವಿಸರ್ಜನೆ ಮಾಡಬೇಕೊ ಆ ಕ್ಷೇತ್ರಕ್ಕೆ ಹೋದಾಗ, ವಿಸರ್ಜನೆಗೆ ಮೊದಲು ಪಂಚಗವ್ಯ ಪ್ರೋಕ್ಷಣೆ ಮಾಡಬೇಕು. ಸುವರ್ಣ, ಜೇನುತುಪ್ಪ, ತುಪ್ಪ ಮತ್ತು ಕಪ್ಪು ಯಳ್ಳು ಸೇರಿಸಿ ಮಣ್ಣಿನಲ್ಲಿ ಕಲಸಿ ಅಸ್ತಿ ಮಧ್ಯದಲ್ಲಿ ಇಟ್ಟು ಮಣ್ಣಿನ ಉಂಡೆಯಂತೆ ಮಾಡಿ , ನೀರಿನಲ್ಲಿ ಇಳಿದು ದಕ್ಷಿಣಕ್ಕೆ ಮುಖಮಾಡಿ ನಿಂತುಕೊಂಡು "ನಮೋಸ್ತು ಧರ್ಮಾಯ ಸಮೇ ಪ್ರೀತಃ" ಎನ್ನುತ್ತ ನೀರಿನಲ್ಲಿ ವಿಸರ್ಜನೆ ಮಾಡಿರಿ. ಸೂರ್ಯನನ್ನು ನೋಡಿ ನಮಸ್ಕಾರಮಾಡಬೇಕು. ಬ್ರಾಹ್ಮಣರಿಗೆ ದಾನವನ್ನು ಕೊಡಬೇಕು. ಆಗ ಪಿತೃಗಳಿಗೆ ಮೋಕ್ಷದೊರೆಯುತ್ತದೆ (ಬ್ರಹ್ಮಾಂಡ ಪುರಾಣ). ೧೪. ನಿಧನರಾದ ವ್ಯಕ್ತಿಯು ಉಪಯೋಗಿಸುತ್ತಿದ್ದ ವಸ್ತುಗಳು, ಹಾಸಿಗೆ ಮೊದಲಾದವುಗಳನ್ನು ಏನು ಮಾಡಬೇಕು? ಇಲ್ಲಿ ಗತಿಸಿದ ವ್ಯಕ್ತಿಯ ಇಚ್ಛೆಯಂತೆ ಮಾಡುವುದು ಒಂದು. ಇಲ್ಲವಾದರೆ ಎಲ್ಲಿಯಾದರು ವಿಸರ್ಜನೆ ಮಾಡಬೇಕು ಅಥವಾ ಬಡವರಿಗೆ ದಾನವಾಗಿ ನೀಡಬಹುದು. ಕೆಲವಸ್ತುಗಳನ್ನು ಅವರ ಸ್ಮರಣಾರ್ಥ ಇಟ್ಟುಕೊಳ್ಳಬಹುದು. ಪ್ರಥಮ ವಾರ್ಷಿಕ ಶ್ರಾದ್ಧವಾದ ಮೇಲೆ ಮುಂಬರುವ ವರ್ಷಗಳಲ್ಲಿ ಶ್ರಾದ್ಧವನ್ನು ಆಚರಿಸುವ ನಿಯಮ ಏನು? ಪ್ರಥಮ ವಾರ್ಷಿಕ ಶ್ರಾದ್ಧ ಅಥವಾ ವರ್ಷಾಂತರವಾದ ಮೇಲೆ ಮುಂದೆ ಬರುವ ಶ್ರಾದ್ಧವನ್ನು ಮೃತವಾದ ಮಾಸ (ಚೈತ್ರಾದಿ ಇರಬಹುದು ಮೇಷಾದಿ ಇರಬಹುದು), ಮೃತ ತಿಥಿಯಂದು(ಪತಿಪದಾ, ದ್ವೀತಿಯ, ತೃತೀಯ) ಶ್ರಾದ್ಧವನ್ನು ಮಾಡಬೇಕು. ಮೃತ ದಿನಾಂಕದಂದು ಮಾಡಬಾರದು. ಶ್ರಾದ್ಧವನ್ನು ಹಿಂದೂ ಪಂಚಾಗದ ಮಾಸ ತಿಥಿಯಂತೆ ಆಚರಿಸುವುದು ಶಾಸ್ತ್ರೋಕ್ತವಾದುದು. ಇದು ಧಾರ್ಮಿಕ ಸಂಸ್ಕಾರವಿದ್ದು ಧಾರ್ಮಿಕ ವಿಧಿ ವಿದಾನದಂತೆ ಆಚರಿಸಬೇಕು. (ದಿನಾಂಕದಂತೆ ಮಾಡುವುದು ಶ್ರಾದ್ಧವಾಗಿರದೆ ಪುಣ್ಯ ತಿಥಿ ಎನ್ನಿಸಿಕೊಳ್ಳುತ್ತದೆ). ಮೃತರ ಫೋಟೊ ಇಟ್ಟು, ಮಾಲೆ ಹಾಕೆ ನಮಸ್ಕಾರ ಮಾಡಿ ಅವರ ಬಗೆಗೆ ಮಾತನಾಡಿ ಎಲ್ಲರೂ ಸೇರಿ ಊಟ ಮಾಡುವುದು ಶ್ರಾದ್ಧವೆನಿಸುವುದಿಲ್ಲ. ಇಲ್ಲಿ ವಿಧಿಯು ಮುಖ್ಯವಾಗಿರುತ್ತದೆ. ೧೬. ಮೃತವಾದ ಮಾಸ ಗೊತ್ತಿದ್ದು ತಿಥಿ ಗೊತ್ತಿರದೆ ಇದ್ದಲ್ಲಿ, ತಿಥಿ ಗೊತ್ತಿದ್ದು ಮಾಸ ಗೊತ್ತಿರದಿದ್ದಲ್ಲಿ, ಅಥವಾ ಮಾಸ ಮತ್ತು ತಿಥಿ ಎರಡು ಗೊತ್ತಿರದಿದ್ದಲ್ಲಿ ಶ್ರಾದ್ಧವನ್ನು ಹೇಗೆ ಮಾಡಬೇಕು? ಮೃತವಾದ ಮಾಸ ಗೊತ್ತಿದ್ದು ತಿಥಿ ಗೊತ್ತಿರದಿದ್ದಲ್ಲಿ ಆ ಮಾಸದ ಏಕಾದಶಿ ಅಥವಾ ಅಮವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕು. ಮೃತರ ತಿಥಿ ಗೊತ್ತಿದ್ದು ಮಾಸ ಗೊತ್ತಿರದಿದ್ದಲ್ಲಿ ಭಾದ್ರಪದ, ಮಾರ್ಗಶೀರ್ಷ, ಮಾಘ ಈ ಮಾಸದ ಆ ತಿಥಿಯಲ್ಲಿ ಮಾಡಬೇಕು. ಒಂದು ವೇಳೆ ಮೃತರ ಮಾಸ ಮತ್ತು ತಿಥಿ ಎರಡೂ ಗೊತ್ತಿರದಿದ್ದಲ್ಲಿ ಭಾದ್ರಪದ, ಮಾರ್ಗಶೀರ್ಷ, ಮಾಘ ಈ ಮಾಸದ ಅಮವಾಸ್ಯೆಯ ದಿನ ಮಾಡಬೇಕು (ಭವಿಷ್ಯೋತ್ತರ ಪುರಾಣ , ನಿರ್ಣಯ ಸಿಂಧು ೪೭೬) ೧೭. ಶ್ರಾದ್ಧವೆಂದರೇನು? ಯಾಕಾಗಿ ಮಾಡಬೇಕು? ಮೃತವಾಗಿ ಎಷ್ಟು ವರ್ಷಗಳಾದರೂ ಮಾಡಬೇಕೇ? ಪುನರ್ಜನ್ಮದಲ್ಲಿ ಯಾವುದೇ ಜೀವಿಯಾಗಿ ಭೂಮಿಗೆ ಬಂದರೆ ನಾವು ಮಾಡಿದ ಶ್ರಾದ್ಧದ ಫಲ ಏನು? ಶ್ರದ್ಧೆಯಿಂದ, ಅಚಲವಾದ ನಂಬಿಕೆಯಿಂದ ಮಾಡುವ ಪಿತೃಕಾರ್ಯವನ್ನು ಶ್ರಾದ್ಧ ಎನ್ನುವರು. ಜನಿಸುವಾಗ ಪಡೆದುಕೊಂಡು ಬಂದ ಪಿತೃ ಋಣವನ್ನು ತೀರಿಸಲು ಇದು ಮುಖ್ಯ ಸಾಧನ. ನಮ್ಮ ಶ್ರೆಯೋಭಿವೃದ್ಧಿಗೆ ಸ್ವರ್ಗಸ್ಥ ಪಿತೃಗಳ ಆಶೀರ್ವಾದ ಅನುಗ್ರಹವೇ ಮೂಲ ಕಾರಣವೆಂಬುದು ಎಲ್ಲಾ ಮೂಲಗ್ರಂಥಗಳೂ ಸಾರುತ್ತವೆ. ಹಾಗಾಗಿ ನಮ್ಮ ಶ್ರೇಯೋಭಿವೃದ್ಧಿ ಮತ್ತು ಪಿತೃ ಋಣ ತೀರಿಸಲು , ಪಿತೃಗಳಿಗೆ ಸದ್ಗತಿಯನ್ನು ತೋರಿಸಲು ಶ್ರಾದ್ಧವನ್ನು ಮಾಡಬೇಕು. ಹೇಗೆ ನಾವು ಜನ್ಮಾಂತರದಲ್ಲಿ ಮಾಡಿದ ಪುಣ್ಯ ಮತ್ತು ಪಾಪದ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತೆವೊ ಹಾಗೆಯೆ ನಾವು ಮಾಡಿದ ಶ್ರಾದ್ಧ ಮತ್ತು ತರ್ಪಣದ ಅಗೋಚರ ಪುಣ್ಯ ಫಲದ ಶಕ್ತಿಯು ಪಿತೃಗಳ ಹೆಸರಿಸಲ್ಲಿ ಸಂಗ್ರಹವಾಗಿ, ಯಾವುದೇ ಜೀವಿಯಾಗಿ ಭೂಮಿಗೆ ಬಂದಿದ್ದರೂ ಸಹ ಅವರಿಗೆ ಆ ಫಲವು ಸಿಗುತ್ತದೆ. ಮುಂದೆ ಮೋಕ್ಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಮ್ಮ ಅಂತ್ಯದವರೆಗೂ ನಮ್ಮ ಮುಖ್ಯ ಕರ್ತವ್ಯವಾದ ದೇವ ಮತ್ತು ಪಿತೃಗಳ ಕಾರ್ಯವನ್ನು ತಪ್ಪದೇ ಮಾಡಬೇಬೇಕು. ಇದು ವೇದ ವಾಕ್ಯ. ೧೮. ಶ್ರಾದ್ಧದಲ್ಲಿ ಎಷ್ಟು ವಿಧಗಳು? ಯಾವುದು? ಕ್ರಮವೇನು? ಅ) ನಿತ್ಯ ಶ್ರಾದ್ಧ ಆ) ನೈಮಿತ್ತಿಕ ಶ್ರಾದ್ಧ ಇ) ಕಾಮ್ಯ ಶ್ರಾದ್ಧ ಈ) ವೃದ್ಧಿ ಶ್ರಾದ್ಧ ಉ) ಪಾರ್ವಣ ಶ್ರಾದ್ಧ ಹೀಗೆ ವಿಧಗಳಿವೆ. ಅ) ನಿತ್ಯ ಶ್ರಾದ್ಧ: ಪಿತೃಗಳ ಮೋಕ್ಷಕಾಮನೆಯಿಂದ ನಿತ್ಯವೂ ಫಲ- ಮೂಲಾದಿಗಳಿಂದ ಮಾಡುವ ಶ್ರಾದ್ಧ. ಆ) ನೈಮಿತ್ತಿಕ ಶ್ರಾದ್ಧ: ಪ್ರತಿ ತಿಂಗಳು ಅಮವಾಸ್ಯಯಲ್ಲೂ, ಸೂರ್ಯ ಚಂದ್ರ, ಗ್ರಹಣ ಕಾಲದಲ್ಲೂ, ಉತ್ತರಾಯಣ-ದಕ್ಷಿಣಾಯನ, ಪುಣ್ಯ ಕಾಲದಲ್ಲಿ, ಸಂಕ್ರಮಣ ಕಾಲದಲ್ಲಿ, ಅಪರ ಪಕ್ಷದಲ್ಲಿ ಮಹಾ ಭರಣಿ, ಮಧ್ಯ ಅಷ್ಟಮಿ, ವ್ಯತೀಪಾತದಲ್ಲಿ ವಿಶೇಷ ನಿಮಿತ್ತವಾಗಿ ಮಾಡುವ ಶ್ರಾದ್ಧ. ಇ) ಕಾಮ್ಯ ಶ್ರಾದ್ಧ: ನಮ್ಮ ಶ್ರೇಯೋಭಿವೃದ್ಧಿಗಾಗಿ ಗಯಾ- ಪ್ರಯಾಗ ವೊದಲಾದ ತೀರ್ಥ ಕ್ಷೇತ್ರಗಳಲ್ಲಿ ಮಾಡುವ ಶ್ರಾದ್ಧ. ಈ) ವೃದ್ಧಿ ಶ್ರಾದ್ಧ: ವಿವಾಹ-ಉಪನಯನಾದಿ ಅಭ್ಯುದಯದ ಅಂಗವಾಗಿ ಮಾಡುವ ಶುಭ ಕಾರ್ಯದಲ್ಲಿ ಪಿತೃಗಳ ಅನುಗ್ರಹ ಪ್ರಾಪ್ತಿಗಾಗಿ ಮಾಡುವ ನಾಂದಿ ಸಮಾರಾಧನಕ್ಕೆ ವೃದ್ಧಿ ಶ್ರಾದ್ಧ ಎನ್ನುತ್ತಾರೆ. ಉ) ಪಾರ್ವಣ ಶ್ರಾದ್ಧ: ಪ್ರತಿ ವರ್ಷವೂ ಮೃತಮಾಸದ ತಿಥಿಯಂದು ಪಿತೃಗಳನ್ನು ಉದ್ದೇಶಿಸಿ ಮಾಡುವ ಶ್ರಾದ್ಧಕ್ಕೆ ಪಾರ್ವಣ ಶ್ರಾದ್ಧ ಎನ್ನುತ್ತಾರೆ. ಶ್ರಾದ್ಧದಲ್ಲಿ ಪಾಣೆ ಹೋಮ, ಬ್ರಾಹ್ಮಣ ಭೋಜನ, ಪಿಂಡ ಪ್ರಧಾನ ಈ ಮೂರೂ ಅತಿ ಮುಖ್ಯದವು. ಈ ಎಲ್ಲಾ ಸೇರಿದರೆ ಶ್ರಾದ್ಧವಾಗುತ್ತದೆ. ಯಾಕೆಂದರೆ ಅವರವರು ಮಾಡಿದ ಪುಣ್ಯ ಪಾಪದ ಫಲವಾಗಿ ಕೆಲವು ಪಿತೃಗಳು ದೇವ ಲೋಕ ಸೇರಿರುತ್ತಾರೆ. ಅವರು ಪಾಣೆ ಹೋಮದಿಂದ ತೃಪ್ತರಾಗುತ್ತಾರೆ. ಇನ್ನು ಸ್ವರ್ಗ ಲೋಕವನ್ನು ಸೇರಿರುವ ಪಿತೃಗಳು ಬ್ರಾಹ್ಮಣ ಭೋಜನದಿಂದ ತೃಪ್ತರಾಗುತ್ತಾರೆ. ಮತ್ತೆ ಕೆಲವು ಪಿತೃಗಳು ಯಮಲೋಕವನ್ನು ಸೇರಿರುತ್ತಾರೆ. ಅವರು ಪಿಂಡದ ಸುತ್ತ ಹರಡುವ ಅನ್ನದಿಂದ ಅಸುರ ಲೋಕದಲ್ಲಿ ಇರುವವರು ಭೂರಿ ಭೋಜನದಿಂದ ತೃಪ್ತರಾಗುತ್ತಾರೆ. ಆದ್ದರಿಂದ ಶ್ರಾದ್ಧದ ಎಲ್ಲಾ ವಿಧಿಯನ್ನು ಮಾಡಲೇಬೇಕು. ಅದರಿಂದ ಆ ಆ ಲೋಕವನ್ನು ಸೇರಿರುವ ಆತ್ಮ ಚೇತನವು ತೃಪ್ತವಾಗುತ್ತದೆ. ನಾವು ಪ್ರತಿ ವರ್ಷ ಮಾಡುವ ಶ್ರಾದ್ಧವು , ಪಿತೃಗಳಿಗೆ ಅವರ ಕಾಲಮಾನದಂತೆ ಪ್ರತಿ ದಿನವೂ ಶ್ರಾದ್ಧ ಮಾಡಿ ತೃಪ್ತಿಪಡಿಸಿದಂತೆ ಆಗುವುದು. ೧೯. ಶ್ರಾದ್ಧ ಮಾಡಲು ಸರಿಯಾದ ಕಾಲ ಯಾವುದು? "ಅಪರಾಹ್ನಃ ಪಿತೃಣಾಂ" ಎಂಬ ಶೃತಿ ವಾಕ್ಯದಂತೆ ಪಿತೃ ಕರ್ಮವನ್ನು ಅಪರಾಹ್ನ ಕಾಲದಲ್ಲಿ ಮಾಡಬೇಕು. ದಿನಾ ಪ್ರಮಾಣ ೩೦ ಘಟಿ ಇರುತ್ತಿದ್ದಾಗ ಸಾಮಾನ್ಯ ೪ನೇ ಭಾಗವು ಅಪರಾಹ್ನವಾಗುತ್ತದೆ. ಅಂದರೆ ೧೮ ಘಟಿನಂತರ ೨೪ಘಟಿ ಪರ್ಯಂತ ೧:೧೨ರಿಂದ ೩:೩೬ ಗಂಟೆಯವರೆಗೆ ಶ್ರಾದ್ಧ ಕಾರ್ಯ ಮಾಡಬೇಕು. ಇಲ್ಲಿ ಕೆಲವು ಸಮಸ್ಯೆ ಕಾಣಬಹುದು. ಅವೆಂದರೆ ೧) ಮೃತ ತಿಥಿ ಒಂದೇ ದಿನವಿದ್ದಲ್ಲಿ ತೊಂದರೆ ಇಲ್ಲ. ೨) ಒಂದು ವೇಳೆ ೨ ದಿನಗಳು ಮೃತ ತಿಥಿ ಬಂದಲ್ಲಿ ಯಾವ ದಿನ ಮಧ್ಯಾಹ್ನ ವ್ಯಾಪಿ ತಿಥಿ ಜಾಸ್ತಿ ಇದೆಯೋ ಆ ದಿನ ಶ್ರಾದ್ಧ ಮಾಡಬೇಕು. ೩) ಎರಡೂ ದಿನಗಳು ಮೃತ ತಿಥಿ ಸಮವಿದ್ದರೆ ಮೊದಲನೇ ದಿನವೇ ಶ್ರಾದ್ಧ ಮಾಡಬೇಕು. ೪) ಎರಡೂ ದಿನಗಳು ಅಪರಾಹ್ನ ವ್ಯಾಪ್ತಿ ಇರದಿದ್ದರೆ ಶ್ರಾದ್ಧವನ್ನು ಮೊದಲನೇ ದಿನ ಅಂದರೆ ಸಾಯಾಹ್ನ ಸ್ಪರ್ಶವಿರುವ ದಿನವೇ ಮಾಡಬೇಕು ಎಂದು ಕಾಲಮಾಧವ ಗ್ರಂಥದಲ್ಲಿ ತಿಳಿಸಿದೆ. ೨೦. ಶ್ರಾದ್ಧದ ದಿನವೇ ಸೂತಕ ಬಂದರೆ ಏನು ಮಾಡಬೇಕು? ಶ್ರಾದ್ಧದ ದಿನವೇ ಸೂತಕ ಬಂದರೆ ಸೂತಕ ಮುಗಿದ ಮರುದಿನವೇ ಶ್ರಾದ್ಧವನ್ನು ಮಾಡಬೇಕು. ತಿಥಿಯನ್ನು ಪರಿಗಣಿಸಬೇಕೆಂದಿಲ್ಲ(ಕಾಲಮಾಧವ ಗ್ರಂಥ). ೨೧. ಗ್ರಹಣದ ದಿನವೇ ಶ್ರಾದ್ಧ ಬಂದರೆ ಏನು ಮಾಡಬೇಕು? ಬೆಳಿಗ್ಗೆ ಸೂರ್ಯಗ್ರಹಣವಿದ್ದರೆ ಗ್ರಹಣ ಬಿಟ್ಟ ಬಳಿಕ ಶ್ರಾದ್ಧ ಮಾಡಬೇಕು. ಆದರೆ ಗ್ರಸ್ತಾಸ್ತ ಗ್ರಹಣವಿದ್ದು ಅಪರಾಹ್ನ ಕಾಲದಲ್ಲಿ ವೇದಕಾಲವಾದರೆ ಹಿರಣ್ಯ ಶ್ರಾದ್ಧವನ್ನು ಸಂಕಲ್ಪ ಪೂರಕ ಮಾಡಬೇಕು. ಆದರೆ ಗ್ರಹಣ ಹಿಡಿದಾಗ ಆಗಲಿ ರಾತ್ರಿಯಾಗಲಿ ಮಾಡಬಾರದು. ೨೨. ಸಂಕಷ್ಠಿ, ಏಕಾದಶಿ, ಮಹಾಶಿವರಾತ್ರಿ, ಮೊದಲಾದ ಉಪವಾಸದ ದಿನ ಶ್ರಾದ್ಧದ ತಿಥಿ ಇದ್ದರೆ ಹೇಗೇ ಮಾಡುವುದು? ಮೇಲೆ ತಿಳಿಸಿದ ಯಾವ ಉಪವಾಸದ ದಿನಗಳಲ್ಲಿ ಶ್ರಾದ್ಧವಿದ್ದರೆ ಅಂದು ಭೋಜನ ಮಾಡುವ ಬ್ರಾಹ್ಮಣರನ್ನು ಕರೆಸಿ ಭೋಜನ ಮಾಡಿಸಬೇಕು. ಶ್ರಾದ್ಧ ಮಾಡಿ ತಾನೂ ಭೋಜನ ಮಾಡಬೇಕು. ಒಂದು ವೇಳೆ ಯಜಮಾನರು ಉಪವಾಸ ಮಾಡಲೇಬೇಕು ಎಂದಿದ್ದಲ್ಲಿ ಊಟದ ತಟ್ಟೆ ಹಿಡಿದುಕೊಂಡು ಆಘ್ರಾಣಿಸಬೇಕು. ಇಲ್ಲವಾದರೆ ಅಂದು ಪಿಂಡ ಪ್ರಧಾನ ಶ್ರಾದ್ಧ ಮಾಡದೇ ಚಟಕ ಅಥವಾ ಅಮಾನ್ನ ಶ್ರಾದ್ಧ, ಹಿರಣ್ಯ ಶ್ರಾದ್ಧ ಮಾಡಬೇಕು. ಹೀಗೆಲ್ಲ ಭೇದಗಳು ಶ್ರಾಸ್ತ್ರಜ್ಞರಲ್ಲಿ ಇದೆ. ಆದರೆ ಏನೇ ಇದ್ದರೂ ಶ್ರಾದ್ಧವನ್ನು ಮಾಡಲೇಬೇಕೆಂಬುದು ಹಿರಿಯರ ಅಭಿಪ್ರಾಯ. ೨೩. ಯಾವುದೋ ಒಂದು ವರ್ಷ ಶ್ರಾದ್ಧ ಮಾಡಲು ಆಗದ ಸ್ಥಿತಿ ಇದ್ದರೆ ಏನು ಮಾಡಬೇಕು? ಇದಕ್ಕೆ ಶಾಸ್ತ್ರದಲ್ಲಿ ಅನೇಕ ಮಾರ್ಗವನ್ನು ಹೇಳಿದ್ದಾರೆ. ಒಂದು ವೇಳೆ ಪಿಂಡ ಪ್ರಧಾನ ಶ್ರಾದ್ಧವನ್ನು ಮಾಡಲು ಆಗದಿದ್ದರೆ, ಸಂಕಲ್ಪ ಶ್ರಾದ್ಧ,ಹಿರಣ್ಯ, ಚಟಕ, ಅಮಾನ್ನ, ಈ ಯಾವ ವಿಧಿಯನ್ನಾದರೂ ಮಾಡಬೇಕು. ಇದು ಶಕ್ಯವಿಲ್ಲದಿದ್ದಾಗ ಬ್ರಾಹ್ಮಣರನ್ನು ಕರೆದು ಹಣ್ಣು-ಹಾಲು-ದಕ್ಷಿಣೆ ಕೊಡಬೇಕು. ಇದೂ ಶಕ್ಯವಿಲ್ಲದಿದ್ದಾಗ ಗೋಗ್ರಾಸ ಕೊಡಬೇಕು. ಅದೂ ಆಗದಿದ್ದಲ್ಲಿ ಒಂದು ಎಲೆಯಲ್ಲಿ ಅನ್ನ-ಹಾಲು-ಕರಿ ಎಳ್ಳು ಸೇರಿಸಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತುಕೊಂಡು ಪಿತೃಗಳ ಸ್ಮರಣೆಯನ್ನು ಮಾಡಿ ಕಾಗೆಗೆ ಇಡಿ. ಹೀಗೆ ಅನೇಕ ಪ್ರಕಾರದ ಮಾರ್ಗವಿದ್ದರೂ, ಆದಷ್ಟು ಕಷ್ಟವಾದರೂ ಶ್ರಾದ್ಧವನ್ನು ಮಾಡಲೇಬೇಕು ಎನ್ನುವುದು ಉದ್ದೇಶ. ೨೪. ಪ್ರಯಾಗ,ಗಯಾ,ಕಾಶಿ ಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಿದ ಮೇಲೆ ಮತ್ತೆ ಶ್ರಾದ್ಧ ಮಾಡುವುದು ಬೇಡ, ಸ್ವರ್ಗಕ್ಕೆ ಹೋದ ಪಿತೃಗಳನ್ನು ಪುನ: ಕರೆದಂತೆ ಆಗುತ್ತದೆ ಎನ್ನುತ್ತಾರೆ ಹೌದಾ? ಪ್ರಯಾಗ, ಗಯಾ, ಕಾಶಿ ಈ ಕ್ಷೇತ್ರದಲ್ಲಿ ಶ್ರಾದ್ಧ ಮಾಡಿದರೆ ಅದರಲ್ಲಿಯೂ ವಿಶೇಷವಾಗಿ ಗಯಾದಲ್ಲಿ ಶ್ರಾದ್ಧ ಮಾಡಿದರೆ ಏಳು ತಲೆಮಾರು ಮತ್ತು ೧೦೧ ಕುಲದವರು ಮೋಕ್ಷ ಹೊಂದುತ್ತಾರೆ ಎಂದು ಉಲ್ಲೇಖವಿದೆ. ಅಂದರೆ ತೀರ್ಥ ಕ್ಷೇತ್ರದಲ್ಲಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಶ್ರಾದ್ಧದಿಂದ ಪಿತೃಗಳಿಗೆ ಮೋಕ್ಷ ದೊರೆಯುತ್ತದೆ. ಆದರೂ ನಾವು ಇರುವವರೆಗೆ ನಮ್ಮ ಕರ್ತವ್ಯವನ್ನು ಬಿಡಬಾರದು. ನಮ್ಮ ಹಿರಿಯರಿಗೆ ಸಲ್ಲಿಸುತ್ತಿರುವ ಗೌರವ, ಶ್ರದ್ಧಾ ಭಕ್ತಿ ಕಡಿಮೆ ಮಾಡಬಾರದು. ಅದರಂತೆ ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಿದರೆ ಮತ್ತೆ ಮಾಡಬಾರದು ಎಂದು ಯಾವ ಗ್ರಂಥದಲ್ಲಿಯೂ ಇರುವುದಿಲ್ಲ. ಬದಲಾಗಿ ಮಾಡಬೇಕೆಂದು ಕಾಲಮಾಧವಾದಿ ಗ್ರಂಥದಲ್ಲಿ ಹೇಳಿದೆ. ೨೪. ಪ್ರಯಾಗ,ಗಯಾ,ಕಾಶಿ ಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಿದ ಮೇಲೆ ಮತ್ತೆ ಶ್ರಾದ್ಧ ಮಾಡುವುದು ಬೇಡ, ಸ್ವರ್ಗಕ್ಕೆ ಹೋದ ಪಿತೃಗಳನ್ನು ಪುನ: ಕರೆದಂತೆ ಆಗುತ್ತದೆ ಎನ್ನುತ್ತಾರೆ ಹೌದಾ? ಪ್ರಯಾಗ, ಗಯಾ, ಕಾಶಿ ಈ ಕ್ಷೇತ್ರದಲ್ಲಿ ಶ್ರಾದ್ಧ ಮಾಡಿದರೆ ಅದರಲ್ಲಿಯೂ ವಿಶೇಷವಾಗಿ ಗಯಾದಲ್ಲಿ ಶ್ರಾದ್ಧ ಮಾಡಿದರೆ ಏಳು ತಲೆಮಾರು ಮತ್ತು ೧೦೧ ಕುಲದವರು ಮೋಕ್ಷ ಹೊಂದುತ್ತಾರೆ ಎಂದು ಉಲ್ಲೇಖವಿದೆ. ಅಂದರೆ ತೀರ್ಥ ಕ್ಷೇತ್ರದಲ್ಲಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಶ್ರಾದ್ಧದಿಂದ ಪಿತೃಗಳಿಗೆ ಮೋಕ್ಷ ದೊರೆಯುತ್ತದೆ. ಆದರೂ ನಾವು ಇರುವವರೆಗೆ ನಮ್ಮ ಕರ್ತವ್ಯವನ್ನು ಬಿಡಬಾರದು. ನಮ್ಮ ಹಿರಿಯರಿಗೆ ಸಲ್ಲಿಸುತ್ತಿರುವ ಗೌರವ, ಶ್ರದ್ಧಾ ಭಕ್ತಿ ಕಡಿಮೆ ಮಾಡಬಾರದು. ಅದರಂತೆ ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಿದರೆ ಮತ್ತೆ ಮಾಡಬಾರದು ಎಂದು ಯಾವ ಗ್ರಂಥದಲ್ಲಿಯೂ ಇರುವುದಿಲ್ಲ. ಬದಲಾಗಿ ಮಾಡಬೇಕೆಂದು ಕಾಲಮಾಧವಾದಿ ಗ್ರಂಥದಲ್ಲಿ ಹೇಳಿದೆ. ೨೫. ಒಂದು ವೇಳೆ ಶ್ರಾದ್ಧದ ದಿನ ಹೆಂಡತಿಯ ರಜೋದರ್ಶನವಾದಲ್ಲಿ(ಪೀರಿಯಡ್) ಏನು ಮಾಡಬೇಕು? ಶ್ರಾದ್ಧದಲ್ಲಿ ೧) ವಿಶ್ವೇದೇವ, ವಿಷ್ಣು, ಪಿತೃಗಳ ಪೂಜೆ ೨) ಬ್ರಾಹ್ಮಣ ಭೋಜನ ೩) ಪಿಂಡ ಪ್ರಧಾನ ಇವು ಮುಖ್ಯವಾದವು. ಇದಕ್ಕೆ ಪಾಕ ತಯಾರಿಕೆ(ಅಡಿಗೆ) ಅತ್ಯಗತ್ಯ. ಇಲ್ಲವಾದರೆ ಶ್ರಾದ್ಧ ಮಾಡಲು ಆಗುವುದಿಲ್ಲ. ಆದ್ದರಿಂದ ಇಂತಹ ಸಮಯದಲ್ಲಿ ಅಮಾನ್ನ ಶ್ರಾದ್ಧ ಮಾಡಬೇಕು(ಅಂದರೆ ಸತ್ಪಾತ್ರರಾದ ಬ್ರಾಹ್ಮಣರಿಗೆ ಭೋಜನ ದ್ರವ್ಯವನ್ನು ಸಂಕಲ್ಪಿಸಿ ದಾನ ಮಾಡಬೇಕು). ಒಂದು ವೇಳೆ ಪಾಕ ತಯಾರಿಕೆಗೆ ಬೇರೆಯವರಿದ್ದರೆ ಪಿಂಡ ಶ್ರಾದ್ಧವನ್ನು ಮಾಡಬೇಕು. ಇದೂ ಶಖ್ಯವಾಗಿರದಿದ್ದಲ್ಲಿ ಆ ತಿಂಗಳ ಅಮವಾಸ್ಯೆ ಅಥವಾ ಕೃಷ್ಣ ಪಕ್ಷ ಏಕಾದಶಿಯ ದಿನ ಮಾಡಬೇಕು. ವಾರ್ಷಿಕ ಶ್ರಾದ್ಧವನ್ನು ಪಿಂಡಪ್ರಧಾನವಾಗಿಯೇ ಮಾಡಬೇಕು.(ನಿರ್ಣಯ ಸಿಂಧು) ಪಿತೃಗಳ ಪ್ರೀತ್ಯರ್ಥವಾಗಿ ಮಾಡಲೇಬೇಕಾದುದು ಶ್ರಾದ್ಧ. ಒಂದು ವೇಳೆ ಶ್ರಾದ್ಧ ಅಥವಾ ಪಿತೃ ಕ್ರಿಯಾ ಸಂಸ್ಕಾರವನ್ನು ಸರಿಯಾಗಿ ಮಾಡದಿದ್ದರೆ, ಪಿತೃ ದೋಷ ಬರುತ್ತದೆ. ಈ ದೋಷ ಬಂದರೆ ನಾವು ಬದುಕಿನಲ್ಲಿ ಹೇಳಲಾರದಷ್ಟು ಕಷ್ಟವನ್ನು ಎದುರಿಸಬೇಕಾಗುತ್ತದೆ. ಸುಖ ಶಾಂತಿ ನಮ್ಮಿಂದ ದೂರವಾಗುತ್ತದೆ. ಸಕಾಲದಲ್ಲಿ ಯಾವ ಕಾರ್ಯವನ್ನು ಮಾಡಲಾಗುವುದಿಲ್ಲ. ಶಿಕ್ಷಣವೂ ಆಗುವುದಿಲ್ಲ. ವಿವಾಹ ವಿಷಯದಲ್ಲಿ ಅಡ್ಡಿಯಾಗುತ್ತದೆ. ಸಂತಾನ ಭಾಗ್ಯಕ್ಕೂ ಕಷ್ಟವಾಗುತ್ತದೆ. ಹೀಗೇ ಯಾವುದೇ ವಿಷಯದಲ್ಲಿ ಜಯ ಸಿಗುವುದಿಲ್ಲ. ಆದ್ದರಿಂದ ಪಿತೃ ಕಾರ್ಯವನ್ನು ತಪ್ಪದೇ ಮಾಡಲೇ ಬೇಕು. ಒಂದು ವೇಳೆ ಕುಟುಂಬದಲ್ಲಿ ಪಿತೃ ದೋಷವಿದೆ ಎಂದು ತಿಳಿದರೆ ಗಯಾ ಶ್ರಾದ್ಧವನ್ನು ಮಾಡಬೇಕು. ಇದರಿಂದ ಮೃತಪಟ್ಟ ಕುಟುಂಬದ ಎಲ್ಲರಿಗೂ ಮೋಕ್ಷ ಪ್ರಾಪ್ತಿಯಾಗುವುದು. ಪಿತೃ ದೋಷ ನಿವಾರಣೆಯಾಗುತ್ತದೆ. ಇಲ್ಲದಿದ್ದರೆ ಕೆಲವು ಪ್ರಸಿದ್ಧ ಕ್ಷೇತ್ರಗಳಲ್ಲಿ ನಾರಾಯಣ ಬಲಿ ಮಾಡುತ್ತಾರೆ. ಇದರಿಂದ ಕೆಲವು ಮಟ್ಟಿನ ದೋಷ ನಿವಾರಣೆಯಾಗುತ್ತದೆ. ಅರ್ಧ ಆಯುಷ್ಯದಲ್ಲಿ ಮೃತರಾದವರಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ. ಆಗ ನಾರಾಯಣ ಬಲಿ ಮಾಡಬೇಕು. ಒಟ್ಟಿನಲ್ಲಿ ನಮ್ಮ ಸುಖ ಸ್ಂತೋಷಕ್ಕೆ ಪಿತೃಗಳ ಆಶೀರ್ವಾದ ಮುಖ್ಯ. ಅದಕ್ಕಾಗಿ ಮಕ್ಕಳಾಗಿ ನಮ್ಮ ಕರ್ತವ್ಯವನ್ನು ಮಾಡಲೇಬೇಕು. ಶ್ರದ್ಧಾ- ಭಕ್ತಿ- ವಿಶ್ವಾಸ ಇಡಲೇಬೇಕು. ನಾನು ಈ ಭಾಗದಲ್ಲಿ ಇನ್ನೂ ಅಧಿಕ ಮಾಹಿತಿಯನ್ನು ತಿಳಿಸಬೇಕೇಂದಿತ್ತು. ಆದರೆ ನಮ್ಮ ಮುಂದೆ ಅನೇಕ ಸಮಸ್ಯೆಗಳು ಇರುವುದರಿಂದ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಅಧಿಕ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಬಹುದು.

Comments

Unknown said…
ನನ್ನ ಹೆಸರು ಗೌತಮ್ gc
ನನ್ನದು ಯಾವ raashi?
ಜನ್ಮ ದಿನ -09-6-2005
ಒಳ್ಳೆ ದಿನನ ನೋಡಿ ತಿಳಿಸಿ
Padikka Thavan said…
Please inform your date, time & place of birth to determine your birth-star & raashi.

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ...